ಮದ್ರಾಸ್ ಐಐಟಿಯ ಕ್ಯಾನ್ಸರ್ ಸಮ್ಮೇಳನದಿಂದ ಹಿಂದೆ ಸರಿದ ಅಮೆರಿಕಾದ ಸಂಶೋಧನಾ ಸಂಸ್ಥೆ

Update: 2018-02-07 07:03 GMT

ಚೆನ್ನೈ, ಫೆ.7: ಯೋಗ ಗುರು ಬಾಬಾ ರಾಮ್ ದೇವ್ ಅವರನ್ನು ಚೆನ್ನೈ ನಗರದಲ್ಲಿ ಮದ್ರಾಸ್ ಐಐಟಿ ಆಯೋಜಿಸಿರುವ 7ನೇ ಅಂತಾರಾಷ್ಟ್ರೀಯ ಟ್ರಾನ್ಸ್ ಲೇಶನಲ್ ಕ್ಯಾನ್ಸರ್ ಸಂಶೋಧನಾ ಸಮ್ಮೇಳನಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆಯೆಂದು ತಿಳಿದು ಬಂದ ಬೆನ್ನಲ್ಲೇ ಅಮೆರಿಕಾದ ಟೆಕ್ಸಾಸ್ ನಗರದಲ್ಲಿರುವ ಎಂಡಿ ಆಂಡರ್ಸನ್ ಕ್ಯಾನ್ಸರ್ ಸೆಂಟರ್ ತಾನು ಈ ಸಮ್ಮೇಳವನ್ನು ಪ್ರವರ್ತಿಸುತ್ತಿಲ್ಲ ಎಂದು ಹೇಳಿದೆ. ತನ್ನ ಹೆಸರು ಮತ್ತು ಲಾಂಛನವನ್ನು ಅನುಮತಿಯಿಲ್ಲದೆಯೇ ಉಪಯೋಗಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಿಟ್ರ್ಯಾಕ್ಷನ್ ವಾಚ್ ಎಂಬ ಬ್ಲಾಗ್ ನ ಸಹ ಸ್ಥಾಪಕರಿಗೆ ನೀಡಿದ ಪ್ರತಿಕ್ರಿಯೆಯೊಂದರಲ್ಲಿ ಎಂಡಿ ಆಂಡರ್ಸನ್ ಕ್ಯಾನ್ಸರ್ ಸೆಂಟರ್ ಮೇಲಿನಂತೆ ಹೇಳಿದೆ. ತನ್ನ ಸಿಬ್ಬಂದಿಯಲ್ಲಿ ಕೆಲವರು ಈ ಸಮ್ಮೇಳನದ ಭಾಗವಾಗಿದ್ದಾರಾದರೂ ಅವರು ವೈಯಕ್ತಿಕ ನೆಲೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದೂ ಸೆಂಟರ್ ಹೇಳಿಕೊಂಡಿದೆ.  ಪತ್ರಿಕಾ ವರದಿಗಳ ಪ್ರಕಾರ  ಎಂಡಿ ಆಂಡರ್ಸನ್ ಸೆಂಟರ್ ನ  ಇಬ್ಬರು ಉದ್ಯೋಗಿಗಳಾದ ವರ್ಷಾ ಗಾಂಧಿ ಹಾಗೂ ಸೇನ್ ಪಾಠಕ್ ಈ ಸಮ್ಮೇಳನದ ಆಯೋಜಕರೆಂದು ಹೆಸರಿಸಲಾಗಿದೆ.

ಕ್ಯಾನ್ಸರ್ ನಮ್ಮ ಕರ್ಮದ ಫಲವಾಗಿದೆ ಎಂಬ ಹೇಳಿಕೆಯನ್ನು ಈ ಹಿಂದೊಮ್ಮೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹಿಂದಿನ ಜನ್ಮದ ಪಾಪದ ಫಲವಾಗಿ ಈ ಜನ್ಮದಲ್ಲಿ ಜನರು ಕ್ಯಾನ್ಸರ್ ಕಾಯಿಲೆಗೊಳಗಾಗುತ್ತಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮಾ ಅವರ ಹೇಳಿಕೆಯನ್ನೂ ಸಮರ್ಥಿಸಿಕೊಂಡು ವಿವಾದಕ್ಕೀಡಾಗಿದ್ದರು. ಯೋಗ ಹಾಗೂ ಪತಂಜಲಿ ಸಂಸ್ಥೆ  ಮಾರಾಟ ಮಾಡುವ ಔಷಧಿಗಳಿಂದ ತಾನು ಸಾವಿರಾರು ಕ್ಯಾನ್ಸರ್ ಹಾಗೂ ಎಚ್‍ಐವಿ ರೋಗಿಗಳನ್ನು ಗುಣಪಡಿಸಿದ್ದಾಗಿ ಅವರು ಒಮ್ಮೆ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News