ಹಲಸಿನ ಬೀಜ ಎಂದು ಕಡೆಗಣಿಸದಿರಿ... ಅದರ ಅದ್ಭುತ ಆರೋಗ್ಯಲಾಭಗಳನ್ನು ತಿಳಿದುಕೊಳ್ಳಿ

Update: 2018-02-07 09:35 GMT

ಹಲಸಿನ ಹಣ್ಣನ್ನು ಇಷ್ಟಪಡದವರು ಯಾರಿದ್ದಾರೆ? ಅದು ಪ್ರೋಟೀನ್ ಜೊತೆಗೆ ವಿಟಾಮಿನ್ ಬಿ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಇತರ ಪೋಷಕಾಂಶಗಳ ಆಗರವಾಗಿದೆ. ಆದರೆ ಹಣ್ಣಿನ ಸವಿಯಾದ ಸೊಳೆಗಳನ್ನು ತಿಂದ ಬಳಿಕ ಬೀಜಗಳನ್ನು ಎಸೆಯುವವರೇ ಹೆಚ್ಚು. ಅವೂ ಅದ್ಭುತ ಆರೋಗ್ಯಲಾಭಗಳನ್ನು ನೀಡುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

 ಹಲಸಿನ ಬೀಜಗಳು ನಾವು ಸೇವಿಸಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುವ ರಿಬೊಫ್ಲಾವಿನ್ ಮತ್ತು ಥಿಯಾಮೈನ್‌ನಂತಹ ಪೋಷಕಾಂಶಗಳನ್ನು ಸಮೃದ್ಧವಾಗಿ ಒಳಗೊಂಡಿವೆ. ಈ ಪೋಷಕಾಂಶಗಳು ನಮ್ಮ ಕಣ್ಣುಗಳು, ಚರ್ಮ ಮತ್ತು ತಲೆಗೂದಲನ್ನು ಆರೋಗ್ಯಯುತವಾಗಿರಿಸುವಲ್ಲಿಯೂ ನೆರವಾಗುತ್ತವೆ. ಬೀಜಗಳು ಮ್ಯಾಗ್ನೇಷಿಯಂ, ಸತುವು, ಪೊಟ್ಯಾಷಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ತಾಮ್ರದಂತಹ ಖನಿಜಗಳನ್ನೂ ಸ್ವಲ್ಪ ಪ್ರಮಾಣದಲ್ಲಿ ಹೊಂದಿವೆ. ಅವು ಸೂಕ್ಷ್ಮಜೀವಿ ನಿರೋಧಕ ಸಂಯುಕ್ತಗಳನ್ನೂ ಒಳಗೊಂಡಿವೆ.

ಹಲಸಿನ ಬೀಜಗಳ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.

► ಅಧಿಕ ಪ್ರೋಟಿನ್

ಹಲಸಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಇದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಈ ಬೀಜಗಳನ್ನು ಸೇರಿಸಿ ವಿವಿಧ ಅಡುಗೆಗಳನ್ನು ತಯಾರಿಸಬಹುದು. ಇವುಗಳಲ್ಲಿಯ ಪ್ರೋಟಿನ್ ಮಾಂಸಖಂಡಗಳನ್ನು ಸದೃಢಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ವೇಗವನ್ನು ನೀಡುತ್ತದೆ.

► ಅಜೀರ್ಣವನ್ನು ತಡೆಯುತ್ತದೆ

ಈ ಬೀಜವು ಅಜೀರ್ಣ ಸಮಸ್ಯೆಯಿಂದ ತಕ್ಷಣ ಮುಕ್ತಿ ನೀಡುತ್ತವೆ. ಅದರಲ್ಲಿಯ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ. ಅದರಲ್ಲಿಯ ನಾರು ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೆ ಬೇಗನೇ ಹಸಿವನ್ನುಂಟು ಮಾಡುವುದಿಲ್ಲ.

► ಕಣ್ಣಿನ ದೃಷ್ಟಿಗೆ ಒಳ್ಳೆಯದು

ಬೀಜದಲ್ಲಿರುವ ವಿಟಾಮಿನ್ ಎ ಉತ್ತಮ ದೃಷ್ಟಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಅದು ರಾತ್ರಿ ಕುರುಡುತನದಂತಹ ಕಣ್ಣಿಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ದೂರವಿಡುವಲ್ಲಿ ಸಹಕಾರಿಯಾಗಿದೆ.

► ರಕ್ತಹೀನತೆಯನ್ನು ತಡೆಯುತ್ತದೆ

 ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಲಸಿನ ಬೀಜಗಳನ್ನು ತಿನ್ನುವುದರಿಂದ ಶರೀರದಲ್ಲಿ ಕಬ್ಬಿಣಾಂಶವು ಹೆಚ್ಚುತ್ತದೆ. ಸಮೃದ್ಧ ಕಬ್ಬಿಣವನ್ನು ಹೊಂದಿರುವ ಈ ಬೀಜ ಕಡಿಮೆ ಹಿಮೊಗ್ಲೋಬಿನ್ ಸಮಸ್ಯೆಯಿಂದ ನರಳುತ್ತಿರುವವರಿಗೆ ಒಳ್ಳೆಯದು. ಅದು ರಕ್ತಹೀನತೆ ಮತ್ತು ಇತರ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ನಿವಾರಿಸುತ್ತದೆ.

► ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಹಲಸಿನ ಬೀಜದಲ್ಲಿ ಮಾನಸಿಕ ಒತ್ತಡವನ್ನು ತಗ್ಗಿಸಬಲ್ಲ ಪ್ರೋಟಿನ್ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿವೆ. ಮಾನಸಿಕ ಒತ್ತಡವುಂಟಾದಾಗ ಹಲಸಿನ ಬೀಜಗಳನ್ನು ತಿನ್ನುತ್ತಿದ್ದರೆ ಅದರಿಂದ ಪಾರಾಗಬಹುದು. ಅದು ಮಾನಸಿಕ ಸಮಸ್ಯೆಗಳನ್ನು ಮಾರು ದೂರದಲ್ಲಿಡುತ್ತದೆ.

► ಮಲಬದ್ಧತೆಯನ್ನು ತಡೆಯುತ್ತದೆ

ಬೀಜದಲ್ಲಿ ಕರಗದ ನಾರು ಇರುವುದರಿಂದ ಅದು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಈ ನಾರು ಜೀರ್ಣಾಂಗದ ಕೆಲಸವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುತ್ತದೆ, ತನ್ಮೂಲಕ ಕರುಳಿನಲ್ಲಿಯ ವಿಷವಸ್ತು ಗಳನ್ನು ತೆಗೆದುಹಾಕುತ್ತದೆ.

► ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಹಲಸಿನ ಬೀಜವು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ. ಅದರ ಸೂಕ್ಷ್ಮಜೀವಿ ನಿಗ್ರಹ ಗುಣದಿಂದಾಗಿ ಅನಾರೋಗ್ಯವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಅದರಲ್ಲಿರುವ ಸತುವು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

► ಕ್ಯಾನ್ಸರ್‌ನ್ನು ತಡೆಯುತ್ತದೆ

ಹಲಸಿನ ಬೀಜದಲ್ಲಿ ಕ್ಯಾನ್ಸರ್‌ನ್ನು ತಡೆಯಬಲ್ಲ ಉತ್ಕರ್ಷಣ ನಿರೋಧಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅದು ಡಿಎನ್‌ಎ ಕೋಶಗಳಿಗೆ ಹಾನಿಯನ್ನುಂಟು ಮಾಡಿ ಕ್ಯಾನ್ಸರ್ ಕೋಶಗಳ ಉತ್ಪತ್ತಿಗೆ ಕಾರಣವಾಗುವ ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ. ಅದರ ಕ್ಯಾನ್ಸರ್ ವಿರೋಧಿ ಗುಣ ಶರೀರದಲ್ಲಿ ಜೀವಕೋಶಗಳು ಸಾಯುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

► ಮೂಳೆಗಳಿಗೆ ಬಲ ನೀಡುತ್ತದೆ

ಹಲಸಿನ ಬೀಜದಲ್ಲಿರುವ ಕ್ಯಾಲ್ಸಿಯಂ ಶರೀರದಲ್ಲಿಯ ಮೂಳೆಗಳನ್ನು ಗಟ್ಟಿಯಾಗಿಸು ತ್ತದೆ. ಬೀಜವು ಪೊಟ್ಯಾಷಿಯಂ ಅನ್ನೂ ಒಳಗೊಂಡಿದ್ದು, ಅದೂ ಮೂಳೆಗಳ ಆರೋಗ್ಯಕ್ಕೆ ಸಹಾಯಕಾರಿಯಾಗಿದೆ. ಜೊತೆಗೆ ಈ ಬೀಜವು ಸ್ನಾಯುಗಳನ್ನೂ ಬಲಗೊಳಿಸುತ್ತದೆ.

► ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತದೆ

ಈ ಬೀಜದಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದ್ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಅದು ಹೃದಯಾಘಾತದಂತಹ ಅಪಾಯಗಳನ್ನು ತಗ್ಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News