ಅಪ್‌ಡೇಟ್ ಆಗುತ್ತಿಲ್ಲ ಮಹಾನಗರ ಪಾಲಿಕೆ ವೆಬ್‌ಸೈಟ್

Update: 2018-02-07 11:18 GMT

ಮಂಗಳೂರು, ಫೆ.6: ಡಿಜಿಟಲೈಶೇನ್‌ನಮಂತ್ರದೊಂದಿಗೆ ಪೇಪರ್‌ಲೆಸ್ ಕಚೇರಿಯಾಗುವತ್ತ ಆಡಳಿತ ವ್ಯವಸ್ಥೆ ಬದಲಾಗುತ್ತಿದೆಯಾದರೂ, ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್ ಮಾತ್ರ ಇನ್ನೂ ಸ್ಮಾರ್ಟ್ ಆಗಿಲ್ಲ. ನಗರದ ಜನತೆಯ ಅನು ಕೂಲಕ್ಕಾಗಿ ಮಹಾನಗರ ಪಾಲಿಕೆಯಿಂದ ಹಲವಾರು ರೀತಿಯ ಆನ್‌ಲೈನ್ ಸೇವೆಗಳನ್ನು ಅನುಷ್ಠಾನಗಳಿಸಲಾಗಿದೆಯಾದರೂ, ಈ ಆನ್‌ಲೈನ್ ಸೇವೆಗೆ ಪ್ರಮುಖ ಕೊಂಡಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್ ಅಪ್‌ಡೇಟ್ ಆಗಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಇಲಾಖೆಗಳ ಮಾಹಿತಿ ನೀಡುವ ಸಲುವಾಗಿ www.mangalorecity.mrc.gov.in ಎಂಬ ವೆಬ್‌ಸೈಟ್ ಲಭ್ಯವಿದೆ. ಆದರೆ, ಈ ವೆಬ್‌ಸೈಟನ್ನು ಕ್ಲಿಕ್ ಮಾಡಿದರೆ ಮುಖಪುಟದಲ್ಲಿ ಮೇಯರ್ ಮತ್ತು ಆಯುಕ್ತರ ಫೋಟೊವನ್ನು ಕಾಣಬಹುದು. ಆದರೆ, ಕನ್ನಡಕ್ಕೆ ಕ್ಲಿಕ್ ಮಾಡಿ ‘ನಮ್ಮ ಬಗ್ಗೆ’ ಇದರ ಅಡಿ ‘ನಮ್ಮ ವಾರ್ಡ್’ಗೆ ಕ್ಲಿಕ್ ಮಾಡಿದರೆ, ಮೇಯರ್ ಮತ್ತು ಉಪ ಮೇಯರ್ ಅವರ ಹೆಸರು ಇನ್ನೂ ಕಳೆದ ಸಾಲಿನವರದ್ದೇ ಇದೆ. 2017ರ ಮಾರ್ಚ್‌ನಲ್ಲಿ ನೂತನ ಮೇಯರ್ ಆಗಿ ಕವಿತಾ ಸನಿಲ್ ಮತ್ತು ಉಪ ಮೇಯರ್ ಆಗಿ ರಜನೀಶ್ ಆಯ್ಕೆಯಾಗಿದ್ದರೂ, ವೆಬ್‌ಸೈಟ್‌ನಲ್ಲಿ ಮಾತ್ರ ಮೇಯರ್ ಆಗಿ ಹರಿನಾಥ್ ಮತ್ತು ಉಪ ಮೇಯರ್ ಆಗಿ ಸುಮಿತ್ರಾ ಕರಿಯಾ ಅವರ ಹೆಸರೇ ಪ್ರಚಲಿತದಲ್ಲಿದೆ. ರಾಜ್ಯವು ಡಿಜಿಟಲೀಕರಣದತ್ತ ಸಾಗುವ ಉದ್ದೇಶದಿಂದ ಪ್ರತಿಯೊಂದು ಇಲಾಖೆಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡುವುದರಿಂದ ಮೊಬೈಲ್‌ನಲ್ಲಿಯೇ ಜನಸಾಮಾನ್ಯರು ಆನ್‌ಲೈನ್ ಸೇವೆಗಳನ್ನು, ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಮನಪಾದ ವೆಬ್‌ಸೈಟ್‌ನ್ನುನಿರ್ವಹಿಸುವ ಅಧಿಕಾರಿಗಳ ನಿರ್ಲಕ್ಷ ದಿಂದ ಜನಸಾಮಾನ್ಯರು ಆನ್‌ಲೈನ್ ಸೇವೆಯ ಬಗ್ಗೆ ಅಸಮಾಧಾನ ಪಡುವಂತಾಗಿದೆ. ವೆಬ್‌ಸೈಟ್‌ಗಳಲ್ಲಿ ಇಲಾಖೆಯ ಮಾಹಿತಿಯ ಜತೆಗೆ ಪ್ರತೀ ತಿಂಗಳು ನಡೆಯುವ ಸಭಾ ನಡಾವಳಿ, ಟೆಂಡರ್ ಮಾಹಿತಿಗಳನ್ನು ಹಾಕಿದಾಗ ಇದರಿಂದ ಜನಸಾಮಾನ್ಯರಿಗೆ ಉಪಯೋಗ ವಾಗುತ್ತದೆ. ಆದರೆ ಮನಪಾ ವೆಬ್‌ಸೈಟ್‌ನಲ್ಲಿ 2016ರಿಂದ ಇಂತಹ ಯಾವುದೇ ಮಾಹಿತಿಗಳು ಅಪ್‌ಡೇಟ್ ಆಗಿಲ್ಲ.  ಹೆಸರಿಗೆ ಎಂಬಂತೆ ಮುಖಪುಟದಲ್ಲಿ ಮೇಯರ್ ಕವಿತಾ ಸನಿಲ್, ಆಯುಕ್ತ ಮುಹಮ್ಮದ್ ನಝೀರ್ ಅವರ ಚಿತ್ರ, ಮುಖ್ಯಮಂತ್ರಿಯಿಂದ ಒಡಿಸಿ ಸರ್ಟಿಫಿಕೇಟ್ ತೆಗೆದುಕೊಳ್ಳುತಿತಿರುವ ಚಿತ್ರ, ಸುರತ್ಕಲ್‌ನಲ್ಲಿ ಅಮೃತ ಯೋಜನೆಯ 2ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ಬಿಟ್ಟರೆ ಯಾವ ಮಾಹಿತಿಯನ್ನೂ ಅಪ್‌ಡೇಟ ಮಾಡಲಾಗಿಲ್ಲ. ಮೇಯರ್ ಉಪ ಮೇಯರ್ ಬದಲಾಗಿ ಮತ್ತೆ 2018ರ ಮಾರ್ಚ್‌ನಲ್ಲಿಹೊಸ ಮೇಯರ್, ಉಪ ಮೇಯರ್ ಆಯ್ಕೆಯಾಗಬೇಕಿದ್ದರೂ, ಪ್ರಸಕ್ತ ಮೇಯರ್, ಉಪ ಮೇಯರ್ ಹೆಸರನ್ನು ಬದಲಾಯಿಸುವ ಕೆಲಸ ಮಾಡದೆ ತಾಂತ್ರಿಕ ವಿಭಾಗ ಕಣ್ಣು ಮುಚ್ಚಿ ಕೂತಿದೆ.  ಕನ್ನಡದ ಕಗ್ಗೊಲೆ!

ಇಷ್ಟೇ ಅಲ್ಲ. ಮನಪಾದ ಕನ್ನಡ ಪುಟದಲ್ಲಿ ಹಲವಾರು ಕನ್ನಡ ಶಬ್ಧಗಳಲ್ಲಿ ದೋಷಗಳನ್ನು ಕಾಣಬಹುದು. ಬಹುತೇಕ ತಪ್ಪುಗಳು ಸರಿಪಡಿಸಲು ಸಾಧ್ಯವಾಗಿದ್ದರೂ ಅದನ್ನು ಸರಿಮಾಡದೆ ಕನ್ನಡದ ಕಗ್ಗೊಲೆ ಮಾಡಲಾಗುತ್ತಿದೆ. ನಮ್ಮ ಬಗ್ಗೆ ವಿಭಾಗದಲ್ಲಿ ನಮ್ಮ ಜವಾಬ್ದಾರಿ ಎಂಬುದನ್ನು ವಾಬ್ದಾರಿ ಎಂಬುದಾಗಿ ಬರೆದಿದ್ದಾರೆ. ಆನ್‌ಲೈನ್ ಸೇವೆಗಳು ಅಂತ ಬರೆಯುವುದನ್ನು ಆನ್‌ಲೇನ್ ಸೇವೆಗಳು ಎಂದು ಉಲ್ಲೇಖಿಸಲಾಗಿದೆ. ನಮ್ಮ ವಾರ್ಡ್‌ನಲ್ಲಿ ಕಾರ್ಪೊರೇಟರ್ ಅಂತ ಬರೆಯುವ ಬದಲು ಕೋರ್ಪೋರೇಟರ್ ಎಂದು ನಮೂದಿಸಲಾಗಿದೆ. ‘ವಿಭಾಗಗಳು’ಇಲ್ಲಿ ಚುನಾವಣೆ ವಿಭಾಗ ಕ್ಲಿಕ್ ಮಾಡಿ ದರೆ, ‘ಚಹನಾವಣೆ ವಿಭಾಗ‘ ತೆರೆದುಕೊಳ್ಳುತ್ತದೆ!

ಕನ್ನಡದ ಮುಖಪುಟದಲ್ಲಿ ಆನ್‌ಲೈನ್ ವಾಟರ್‌ಬಿಲ್ ಪಾವತಿ ಎಂದಿರ ಬೇಕಾದಲ್ಲಿ, ‘ಆನ್ಣೈನ್ ವಾಟರ್‌ಬಿಲ್ ಪಾವತಿ’ ಎಂದು ನಮೂದಿಸಲಾಗಿದೆ. ಈ ಎಲ್ಲಾ ತಪ್ಪುಗಳು ಸರಿಪಡಿಸಬಹುದಾದ ತಪ್ಪುಗಳು. ಆದರೆ, ಅವುಗಳು ಹಾಗೆಯೇ ಮುಂದುವರಿದಿದ್ದು, ಕನ್ನಡದ ಬಗ್ಗೆ ನಿರ್ಲಕ್ಷ ವಹಿಸಿದಂತಾಗಿದೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಯಗರಿಯೊಂದಿಗೆ ಸ್ಮಾರ್ಟ್ ಆಗುವತ್ತ ಮುನ್ನಡೆಯುತ್ತಿದೆ. ಆರೆ.. ವೆಬ್‌ಸೈಟ್ ನಿರ್ವಹಣೆಗೆ ಮಾತ್ರ ಜನರೇ ಇಲ್ಲವೇ? ಎಂಬ ಕೂಗು ಜನಸಾಮಾನ್ಯರದ್ದು.

ಪಾಲಿಕೆಯ ವೆಬ್‌ಸೈಟ್ ನಿರ್ವಹಣೆ ಮಾಡಲು ತಾಂತ್ರಿಕ ವಿಭಾಗದಲ್ಲಿ ಮೂವರು ಅಧಿಕಾರಿಗಳು ಇದ್ದಾರೆ. ಅವರು ಪಾಲಿಕೆಯ ಪ್ರತಿಯೊಂದು ಕಾರ್ಯಕ್ರಮದ ವಿವರಗಳನ್ನು ಅಪ್‌ಡೇಟ್ ಮಾಡುತ್ತಿದ್ದಾರೆ. ಹಾಗಾಗಿ ಈ ವಿಷಯ ನನ್ನ ಗಮನಕ್ಕೆ ಈವರೆಗೆ ಬಂದಿರಲಿಲ್ಲ.

ಮುಹಮ್ಮದ್ ನಝೀರ್, ಮನಪಾ ಆಯುಕ್ತರು.

ಪ್ರತಿಯೊಂದು ಕೆಲಸವನ್ನು ಮೇಯರ್ ಮಾಡಲು ಸಾಧ್ಯವಾಗುವುದಿಲ್ಲ ವೆಬ್‌ಸೈಟ್ ನಿರ್ವಹಣೆಯನ್ನು ಪಾಲಿಕೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಮಾಡಬೇಕು. ವೆಬ್‌ಸೈಟ್ ಅಪ್‌ಡೇಟ್ ಆಗದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ಮಾತನಾಡುತ್ತೇನೆ.

ಕವಿತಾ ಸನಿಲ್, ಮೇಯರ್, ಮನಪಾ.

Writer - ಕೆ.ಎಂ. ಪಾಟೀಲ

contributor

Editor - ಕೆ.ಎಂ. ಪಾಟೀಲ

contributor

Similar News