ಸ್ಪೇಸ್ ಎಕ್ಸ್‌ನಿಂದ ಪ್ರಬಲ ರಾಕೆಟ್ ಉಡಾವಣೆ

Update: 2018-02-07 17:26 GMT

ಕೆನಡಿ ಬಾಹ್ಯಾಕಾಶ ಕೇಂದ್ರ (ಫ್ಲೋರಿಡ), ಫೆ. 7: ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟನ್ನು ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ ಎಕ್ಸ್’ ಬುಧವಾರ ಅಮೆರಿಕದ ಫ್ಲೋರಿಡ ರಾಜ್ಯದ ಕೇಪ್ ಕ್ಯಾನವರದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿದೆ.

‘ಫಾಲ್ಕನ್ ಹೆವಿ’ ಎಂಬ ಹೆಸರಿನ ಈ ದೈತ್ಯ ರಾಕೆಟ್ ಹದಿನೆಂಟು 747 ಜೆಟ್‌ಲೈನರ್‌ಗಳ ಅಗಾಧ ಶಕ್ತಿಯೊಂದಿಗೆ ಆಕಾಶವನ್ನು ಸೀಳುತ್ತಾ ಸಾಗಿತು.

ಉಡಾವಣೆಯ ವೇಳೆ ರಾಕೆಟ್ ಬೆಟ್ಟ ಗಾತ್ರದ ಹೊಗೆಯನ್ನು ಹೊರಬಿಟ್ಟಿತು ಹಾಗೂ ಫ್ಲೋರಿಡದ ಬಾಹ್ಯಾಕಾಶ ಕೇಂದ್ರದ ಕರಾವಳಿಯಲ್ಲಿ ಕಿವಿಗಡಚಿಕ್ಕುವ ಸದ್ದು ಉಂಟು ಮಾಡಿತು.

ಬೃಹತ್ ರಾಕೆಟ್‌ನ ಮೊದಲ ಹಾರಾಟವನ್ನು ನೋಡಲು ಸಾವಿರಾರು ಮಂದಿ ಅದರ ಸುತ್ತ ನೆರೆದಿದ್ದರು.

ಭೂಮಿಯ ಕಕ್ಷೆಯನ್ನೂ ಮೀರಿದ ಪ್ರದೇಶದಲ್ಲಿ ವಸ್ತುಗಳನ್ನು ನಿಯೋಜಿಸುವ ನಿಟ್ಟಿನಲ್ಲಿ ನಡೆದ ಮೊದಲ ಪ್ರಯತ್ನ ಇದಾಯಿತು. ಇದರ ಭಾಗವಾಗಿ ಬಾಹ್ಯಾಕಾಶ ಕಂಪೆನಿಯ ಮಾಲೀಕ ಎಲಾನ್ ಮಸ್ಕ್‌ರ ಒಡೆತನದ ಇಲೆಕ್ಟ್ರಾನಿಕ್ ಕಾರು ಕಂಪೆನಿಯ ‘ಟೆಸ್ಲಾ ರೋಡ್‌ಸ್ಟರ್’ ಎಂಬ ಕೆಂಪು ಬಣ್ಣದ ಕಾರೊಂದನ್ನು ರಾಕೆಟ್ ಬಾಹ್ಯಾಕಾಶಕ್ಕೆ ಒಯ್ದಿತು.

 ಇದೇ ರಾಕೆಟ್ ಮೂಲಕ ಮಂಗಳ ಗ್ರಹದ ಸನಿಹಕ್ಕೂ ನೌಕೆಗಳನ್ನು ಕಳುಹಿಸುವ ದಿನಗಳು ದೂರವಿಲ್ಲ ಎಂದು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‘ಸ್ಪೇಸ್ ಎಕ್ಸ್’ ಮಾಲೀಕ ಎಲಾನ್ ಮಸ್ಕ್ ಹೇಳಿದರು.

ಸುರಕ್ಷಿತ ಭೂಸ್ಪರ್ಶ ಮಾಡಿದ ರಾಕೆಟ್

ಉಡಾವಣೆಗೊಂಡ 3 ನಿಮಿಷಗಳ ಬಳಿಕ, ಬಾಹ್ಯಾಕಾಶ ಯೋಜನೆಯಲ್ಲಿ ಮಿತವ್ಯಯ ಸಾಧಿಸುವ ತಂತ್ರಜ್ಞಾನದ ಭಾಗವಾಗಿ, ಅತ್ಯಂತ ಮಹತ್ವದ ಪ್ರಕ್ರಿಯೆಯೊಂದರಲ್ಲಿ ರಾಕೆಟ್‌ನ ಎರಡು ಸೈಡ್ ಬೂಸ್ಟರ್‌ಗಳು ರಾಕೆಟ್‌ನ ಮಧ್ಯ ಭಾಗದಿಂದ ಬೇರ್ಪಟ್ಟವು.

ಬಳಿಕ, ಈ ಎರಡು ಬೂಸ್ಟರ್‌ಗಳು ಭೂಮಿಯತ್ತ ಪ್ರಯಾಣಿಸಿದವು ಹಾಗೂ ಕೇಪ್ ಕ್ಯಾನವರಲ್ ವಾಯು ಪಡೆ ನಿಲ್ದಾಣದಲ್ಲಿರುವ ಎರಡು ಭೂಸ್ಪರ್ಶ ವೇದಿಕೆಗಳಲ್ಲಿ ಏಕಕಾಲದಲ್ಲಿ ಭೂಸ್ಪರ್ಶ ಮಾಡಿದವು. ಉಡಾವಣೆಯಾದ 8 ನಿಮಿಷಗಳಲ್ಲಿ ಈ ಭೂಸ್ಪರ್ಶ ಸಂಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News