ಚಳಿಗಾಲದ ಒಲಿಂಪಿಕ್ಸ್‌: ದಕ್ಷಿಣ ಕೊರಿಯಾಗೆ ಭೇಟಿ ನೀಡಲಿರುವ ಕಿಮ್ ಜಾಂಗ್ ಸೋದರಿ

Update: 2018-02-07 17:52 GMT

ಸಿಯೋಲ್, ಫೆ. 7: ದಕ್ಷಿಣ ಕೊರಿಯದ ಪ್ಯಾಂಗ್‌ಚಾಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ವೀಕ್ಷಿಸಲು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಸಹೋದರಿ ಈ ವಾರ ಭೇಟಿ ನೀಡಲಿದ್ದಾರೆ ಎಂದು ದಕ್ಷಿಣ ಕೊರಿಯ ಬುಧವಾರ ತಿಳಿಸಿದೆ.

ಉತ್ತರ ಕೊರಿಯದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಹಿರಿಯ ನಾಯಕಿಯಾಗಿರುವ ಕಿಮ್ ಯೊ ಜಾಂಗ್, ಶುಕ್ರವಾರ ಭೇಟಿ ನೀಡಲಿರುವ ಉನ್ನತ ಮಟ್ಟದ ನಿಯೋಗದಲ್ಲಿರುತ್ತಾರೆ ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವಾಲಯ ಹೇಳಿದೆ.

ಕಿಮ್ ಯೊ ಜಾಂಗ್ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್‌ರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತನ್ನ ಸಹೋದರನ ಖಾಸಗಿ ಪತ್ರವೊಂದನ್ನು ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಉ. ಕೊರಿಯ, ಇರಾನ್ ಕ್ರೀಡಾಪಡುಗಳಿಗೆ ಸ್ಮಾರ್ಟ್‌ಫೋನ್ ಇಲ್ಲ

ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ನೀಡಲಾಗುವ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಉತ್ತರ ಕೊರಿಯ ಮತ್ತು ಇರಾನ್‌ನ ಕ್ರೀಡಾಪಟುಗಳಿಗೆ ನೀಡಲಾಗುವುದಿಲ್ಲ; ಆ ದೇಶಗಳ ವಿರುದ್ಧ ವಿಶ್ವಸಂಸ್ಥೆ ವಿಧಿಸಿರುವ ದಿಗ್ಬಂಧನಗಳೇ ಇದಕ್ಕೆ ಕಾರಣ ಎಂದು ಸಂಘಟಕರು ಬುಧವಾರ ಹೇಳಿದ್ದಾರೆ.

ಒಲಿಂಪಿಕ್ಸ್‌ನ ಕ್ರೀಡಾಪಟುಗಳು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧಿಕಾರಿಗಳಿಗೆ ಉಚಿತವಾಗಿ ನೀಡುವುದಕ್ಕಾಗಿ ಕ್ರೀಡಾಕೂಟದ ಪ್ರಾಯೋಜಕ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್, 4000 ‘ಗೆಲಾಕ್ಸಿ ನೋಟ್ 8’ ‘ಒಲಿಂಪಿಕ್ಸ್ ಆವೃತ್ತಿ’ಗಳನ್ನು ನೀಡಿದೆ.

ಆದರೆ, ವಿಶ್ವಸಂಸ್ಥೆಯ ದಿಗ್ಬಂಧನಗಳ ಹಿನ್ನೆಲೆಯಲ್ಲಿ ಉತ್ತರ ಕೊರಿಯ ಮತ್ತು ಇರಾನ್‌ನ ಕ್ರೀಡಾಪಟುಗಳಿಗೆ ಈ ಫೋನ್‌ಗಳನ್ನು ನೀಡಲಾಗುವುದಿಲ್ಲ ಎಂದು ಪ್ಯಾಂಗ್‌ಚಾಂಗ್ ಸಂಘಟನಾ ಸಮಿತಿಯ ವಕ್ತಾರೆಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News