3,600 ಕೋಟಿ ರೂ. ಗೆದ್ದರೂ ಹೆಸರು ಬಹಿರಂಗಪಡಿಸಲು ಒಪ್ಪದ ಮಹಿಳೆ

Update: 2018-02-07 18:47 GMT

ಬ್ರಿಟನ್‌ನ ನ್ಯೂಹ್ಯಾಂಪ್‌ಶೈರ್‌ನ ಮಹಿಳೆಯೊಬರಿಗೆ ಕಳೆದ ತಿಂಗಳು ಬರೋಬ್ಬರಿ 559 ಮಿಲಿಯ ಡಾಲರ್‌ಗೂ ಹೆಚ್ಚು ಮೊತ್ತದ (ಸುಮಾರು 3,600 ಕೋಟಿ ರೂ.) ಲಾಟರಿ ಗೆದ್ದಿದ್ದರು. ತನ್ನ ಬದುಕಿನಲ್ಲಿ ಇನ್ನು ಮುಂದೆ ಭಾರೀ ಬದಲಾವಣೆಯಾಗಲಿದೆಯೆಂಬುದು ಆ ಮಹಿಳೆಗೂ ಅರಿವಾಗಿತ್ತು.
  ಇನ್ನೇನು ನಗದು ಹಣ ವಿಜೇತಳ ಕೈಸೇರಬೇಕು ಎನ್ನುವಾಗ ಒಂದು ವಿಷಯ ಮಾತ್ರ ಆಕೆಗೆ ಇಷ್ಟವಾಗಿರಲಿಲ್ಲ. ಲಾಟರಿಯ ನಿಯಮಾವಳಿಗಳ ಪ್ರಕಾರ, ಆಕೆ ಹೆಸರು ವಿಳಾಸವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿತ್ತು. ಆದರೆ ತಾನು ಲಾಟರಿ ಗೆದ್ದಿರುವುದನ್ನು ಬಹಿರಂಗಪಡಿಸುವುದನ್ನು ಒಪ್ಪದ ಆಕೆ, ತನ್ನ ಹೆಸರು, ವಿಳಾಸವನ್ನು ಅಜ್ಞಾತವಾಗಿರಿಸಿಯೇ ತನಗೆ ಲಾಟರಿ ಹಣ ಕೊಡಿಸಬೇಕೆಂದು ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ದಾಖಲೆಗಳಲ್ಲಿ ಆಕೆ ತನ್ನನ್ನು ಕೇವಲ ಜೇನ್ ಡೊ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾಳೆ.
‘‘ಆಕೆ ನ್ಯೂಹ್ಯಾಂಪ್‌ಶೈರ್‌ನಲ್ಲಿ ಸುದೀರ್ಘ ಸಮಯದಿಂದ ವಾಸವಾಗಿದ್ದಾಳೆ ಹಾಗೂ ಸಾಮುದಾಯಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆೆ ಲಾಟರಿ ವಿಜೇತಳ ವಕೀಲರಾದ ಸ್ಟೀವ್‌ಗಾರ್ಡನ್ ದಾಖಲೆಗಳಲ್ಲಿ ತಿಳಿಸಿದ್ದಾಳೆ. ವಿಜೇತಳು ತನ್ನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲು ಬಯಸಿದ್ದಾಳೆ ಹಾಗೂ ಸುಮಾರು ಅರ್ಧಶತಕೋಟಿ ಡಾಲರ್‌ಗಳ ವಿಜೇತೆಯೆಂದು ಜನರಿಂದ ಗುರುತಿಸಿಕೊಳ್ಳಲು ಆಕೆ ಬಯಸುವುದಿಲ್ಲ ಮತ್ತು ಎಂದಿನಂತೆ ಶಾಪಿಂಗ್‌ಗೆ ಮುಕ್ತವಾಗಿ ತೆರಳುವ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಆಕೆ ಇಚ್ಛಿಸಿದ್ದಾಳೆ’’ ಎಂದು ಸ್ಟೀವ್‌ಗಾರ್ಡನ್ ತಿಳಿಸಿದ್ದಾರೆ.
ಆದರೆ ಲಾಟರಿ ಅಧಿಕಾರಿಗಳ ವಾದವೇ ಬೇರೆ. ವಿಜೇತರ ಹೆಸರನ್ನು ಬಹಿರಂಗ ಪಡಿಸುವುದರಿಂದ ತಮ್ಮ ಲಾಟರಿಯ ವಿಶ್ವಾಸಾರ್ಹತೆ ಉಳಿಯುತ್ತದೆ. ಅಷ್ಟೇ ಅಲ್ಲ ವಂಚನೆ ಹಾಗೂ ದುರ್ಬಳಕೆ ನಡೆಯುವುದನ್ನು ತಡೆಯುತ್ತದೆ. ವಿಜೇತರು ಕ್ಯಾಮರಾಗಳ ಮುಂದೆ ಬಹುಮಾನದ ಚೆಕ್ ಹಿಡಿದುಕೊಂಡು ಪೋಸ್ ನೀಡುವು ದರಿಂದ ತಮಗೆ ಒಳ್ಳೆಯ ಪ್ರಚಾರವೂ ದೊರೆತಂತಾಗುತ್ತದೆಯೆಂದು ಅವರ ವಾದವಾಗಿದೆ.
 ಆದರೆ ಮೇಲ್ನೋಟಕ್ಕೆ ಕಾನೂನು ಆಕೆಯ ಪರವಾಗಿರುವಂತೆ ಕಾಣುವುದಿಲ್ಲ. ನ್ಯೂಹ್ಯಾಂಪ್‌ಶೈರ್ ರಾಜ್ಯದ ಲಾಟರಿ ಕಾನೂನಿನ ಪ್ರಕಾರ ವಿಜೇತರ ಹೆಸರು, ಊರು ಹಾಗೂ ಅವರು ಗೆದ್ದ ಬಹುಮಾನದ ಮೊತ್ತವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ. ಆದರೆ ಅನಾಮಿಕ ಟ್ರಸ್ಟ್ ಮೂಲಕ ಬಹುಮಾನದ ಹಣವನ್ನು ಪಡೆಯಲು ಅವಕಾಶ ನೀಡುತ್ತದೆ.
ಆದರೆ ವಿಜೇತ ಮಹಿಳೆಯು ಈಗಾಗಲೇ ಲಾಟರಿ ಟಿಕೆಟ್‌ಗೆ ತನ್ನ ಸಹಿಹಾಕಿದ್ದಾರೆ. ಒಂದು ವೇಳೆ ಆಕೆ ತನ್ನ ಹಸ್ತಾಕ್ಷರವನ್ನು ತಿರುಚಲು ಯತ್ನಿಸಿದಲ್ಲಿ ಆ ಟಿಕೆಟ್ ಅಸಿಂಧುಗೊಳ್ಳುತ್ತದೆ.
ಈ ಬಗ್ಗೆ ನ್ಯೂಹ್ಯಾಂಪ್‌ಶೈರ್ ಲಾಟರಿ ಕಾರ್ಯಕಾರಿ ನಿರ್ದೇಶಕ ಚಾರ್ಲಿ ಮ್ಯಾಕ್ಲನ್‌ಟೈರ್ ಹೇಳಿಕೆಯೊಂದನ್ನು ನೀಡಿ, ಆಯೋಗವು ಸರಕಾರದ ಅಟಾರ್ನಿ ಜನರಲ್‌ರನ್ನು ಸಂಪರ್ಕಿಸಿದೆ ಹಾಗೂ ಪವರ್‌ಬಾಲ್ ಲಾಟರಿ ವಿಜೇತಳು, ಇತರರ ಹಾಗೆ ತನ್ನ ಹೆಸರನ್ನು ಬಹಿರಂಗಪಡಿಸುವ ಕಾನೂನನ್ನು ಪಾಲಿಸಲೇಬೇಕಾಗುತ್ತದೆ ಎಂದಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ