×
Ad

ಉ.ಪ್ರದೇಶ: ಮೃತಪಟ್ಟ 30 ವರ್ಷದ ಬಳಿಕ ಕವಯಿತ್ರಿಗೆ ತೆರಿಗೆ ನೋಟಿಸ್ !

Update: 2018-02-08 22:53 IST

ಅಲಹಾಬಾದ್, ಫೆ.8: ಹಿಂದಿ ಕವಯಿತ್ರಿ ಮಹಾದೇವಿ ವರ್ಮ ಮೃತಪಟ್ಟು 30 ವರ್ಷದ ಬಳಿಕ ಉತ್ತರಪ್ರದೇಶದ ಪೌರಾಡಳಿತ ಸಂಸ್ಥೆಯೊಂದು ಅವರ ಹೆಸರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದೆ.

 ಬಾಕಿಯಿರುವ 44,816 ರೂ. ತೆರಿಗೆಯನ್ನು ತಕ್ಷಣ ಪಾವತಿಸುವಂತೆ ಹಾಗೂ ತನ್ನ ಕಚೇರಿಯಲ್ಲಿ ಖುದ್ದು ಹಾಜರಾಗುವಂತೆ ಅಲಹಾಬಾದ್ ಮುನ್ಸಿಪಲ್ ಕಾರ್ಪೊರೇಶನ್(ಎಎಂಸಿ) ಮಹಾದೇವಿ ವರ್ಮರಿಗೆ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ ಇದಕ್ಕೆ ತಪ್ಪಿದರೆ ಅಶೋಕನಗರದ ನೆವಾಡ ಪ್ರದೇಶದಲ್ಲಿರುವ ವರ್ಮರ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದೆ.

  ನೆವಾಡದಲ್ಲಿರುವ ಮನೆ ಇನ್ನೂ ದಿವಂಗತ ಮಹಾದೇವಿ ವರ್ಮರ ಹೆಸರಲ್ಲಿದೆ. ಕಳೆದ ಹಲವು ವರ್ಷಗಳಿಂದ ಮನೆ ತೆರಿಗೆ ಪಾವತಿಸಿಲ್ಲದ ಕಾರಣ ಇದು ತೆರಿಗೆ ತಪ್ಪಿಸುವ ಪ್ರಯತ್ನ ಎಂದು ಪರಿಗಣಿಸಲಾಗಿದೆ ಎಂದು ಮುಖ್ಯ ತೆರಿಗೆ ಅಧಿಕಾರಿ ಪಿ.ಕೆ.ಮಿಶ್ರ ತಿಳಿಸಿದ್ದಾರೆ.

 ಪದ್ಮವಿಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಖ್ಯಾತ ಕವಯಿತ್ರಿ ಮಹಾದೇವಿ ವರ್ಮ 1987ರಲ್ಲಿ ಅಲಹಾಬಾದ್‌ನಲ್ಲಿ ಮೃತಪಟ್ಟಿದ್ದರು. ಕೊನೆಯುಸಿರೆಳೆಯುವ 2 ವರ್ಷದ ಮೊದಲು ನೇವಾಡದಲ್ಲಿರುವ ತನ್ನ ಮನೆ ಸಹಿತ ಎಲ್ಲಾ ಆಸ್ತಿಯನ್ನೂ ಟ್ರಸ್ಟ್ ಒಂದಕ್ಕೆ ದೇಣಿಗೆ ನೀಡಿದ್ದರು. ಅಂದಿನಿಂದ ಈ ಮನೆಯಲ್ಲಿ ಆಸ್ತಿಯ ಉಸ್ತುವಾರಿ ವಹಿಸಿಕೊಂಡಿರುವವರು ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News