ಅಮಿತ್ ಶಾ ಬೈಕ್ ರ‍್ಯಾಲಿಯಿಂದ ವಾಯುಮಾಲಿನ್ಯ: ಕೇಂದ್ರ, ಹರ್ಯಾಣ ಸರಕಾರಕ್ಕೆ ನೋಟಿಸ್

Update: 2018-02-09 14:27 GMT

ಹೊಸದಿಲ್ಲಿ, ಫೆ.9: ಹರ್ಯಾಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸಲು ಉದ್ದೇಶಿಸಿರುವ ಬೈಕ್ ರ‍್ಯಾಲಿಯಿಂದ ವಾಯುಮಾಲಿನ್ಯ ಆಗುವ ಕಾರಣ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಬೈಕ್‌ಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸೂಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ಹರ್ಯಾಣ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.

    ಫೆ.15ರಂದು ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ಶಾ ನಡೆಸಲುದ್ದೇಶಿಸಿರುವ ಬೈಕ್ ರ್ಯಾಲಿಯಲ್ಲಿ 1 ಲಕ್ಷ ಬೈಕ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಷ್ಟೊಂದು ಪ್ರಮಾಣದಲ್ಲಿ ಬೈಕ್‌ಗಳು ರ್ಯಾಲಿ ನಡೆಸಿದರೆ ವಾಯುಮಾಲಿನ್ಯ ತೀವ್ರಗೊಳ್ಳಲಿದೆ . ಆದ್ದರಿಂದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಬೈಕ್‌ಗಳ ಪ್ರಮಾಣ ಕಡಿಮೆ ಇರುವಂತೆ ಸೂಚಿಸಬೇಕೆಂದು ಕೋರಿ ವಕೀಲ ವಿಕ್ಟರ್ ಧಿಸ್ಸಾ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ)ಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಬೈಕ್ ರ‍್ಯಾಲಿಯ ಬದಲು ಸೈಕಲ್, ಇ-ರಿಕ್ಷಾ ಅಥವಾ ಕಾಲ್ನಡಿಗೆಯ ರ‍್ಯಾಲಿ ನಡೆಸಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

     ಶಾ ನಡೆಸುವ ರ‍್ಯಾಲಿಯಲ್ಲಿ ಬೈಕ್‌ಗಳ ಪ್ರಮಾಣವನ್ನು ಕಡಿಮೆಗೊಳಿಸಬೇಕು ಅಥವಾ ಸೈಕಲ್ ಮತ್ತಿತರ ಪರಿಸರಕ್ಕೆ ಹಾನಿಯಾಗದ ವಾಹನಗಳನ್ನು ಬಳಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ ರ್ಯಾಲಿಯಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದ ಪ್ರಮಾಣವನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವಂತೆಯೂ ಕೋರಲಾಗಿದೆ.

ದಿಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶವು ಈಗಾಗಲೇ ವಾಯುಮಾಲಿನ್ಯದಿಂದ ತತ್ತರಿಸಿದೆ. ಇದರ ಜೊತೆಗೆ 1 ಲಕ್ಷ ಬೈಕ್ ಸಹಿತ ರ‍್ಯಾಲಿ ನಡೆದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅರ್ಜಿದಾರರ ಪರ ವಕೀಲ ಸುಮೀರ್ ಸೋಧಿ ತಿಳಿಸಿದರು.

 ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಪಿ.ವಾಂಗ್ಡಿ ನೇತೃತ್ವದ ನ್ಯಾಯಪೀಠವು ಪರಿಸರ ಸಚಿವಾಲಯ, ಹರ್ಯಾಣ ಸರಕಾರ , ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು ಫೆ.13ರ ಮೊದಲು ಉತ್ತರಿಸುವಂತೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News