ಕೂದಲ ಮರುಜೋಡಣೆ ದುಃಸ್ವಪ್ನ!

Update: 2018-02-09 18:46 GMT

ಬೊಕ್ಕ ತಲೆಯಲ್ಲಿ ಹಸನಾದ ಕೂದಲು ಬೆಳೆಸುತ್ತೇವೆ. ಯಾವುದೇ ನೋವಾಗಲೀ, ಕಲೆಗಳಾಗಲೀ ಇರುವುದಿಲ್ಲ ಎಂದೆಲ್ಲಾ ಸಾರುವ ಜಾಹೀರಾತುಗಳಿಗೆ ಮರುಳಾಗಿ ತಮ್ಮ ಬೊಕ್ಕ ತಲೆಯಲ್ಲೂ ಕೂದಲು ನಲಿದಾಡಬೇಕೆಂದು ಬಯಸಿ ಹೇರ್ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾಗಿ ಪಡಿಪಾಟಲು ಅನುಭವಿಸಿದವರು ಅನೇಕರಿದ್ದಾರೆ. ಪಾಕಿಸ್ತಾನ ಮೂಲಕ ನಟ ಮತ್ತು ಲೇಖಕರಾದ ಸೈಯದ್ ಸಾಜಿದ್ ಹಸನ್ ಅವರು ಹೇರ್ ಟ್ರಾನ್ಸ್‌ಪ್ಲಾಂಟಿಂಗ್ ವೇಳೆ ವೈದ್ಯಕೀಯ ನಿರ್ಲಕ್ಷದಿಂದಾಗಿ ತಾನು ಅನುಭ ವಿಸಿದ ನರಕ ಯಾತನೆಯ ಬಗ್ಗೆ ವೀಡಿಯೊವೊಂದರಲ್ಲಿ ಸವಿವರವಾಗಿ ತಿಳಿಸಿದ್ದಾರೆ. ‘‘ನನ್ನ ಹಳೆಯ ಪರಿಚಯದ ವೈದ್ಯರೊಬ್ಬರು ತಮ್ಮ ಬಳಿ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ಒಳಗಾಗುವಂತೆ ನನ್ನನ್ನು ಒಂಬತ್ತು ವರ್ಷಗಳಿಂದ ಒತ್ತಾಯಪಡಿಸುತ್ತಿದ್ದರು. ಕೊನೆಗೂ ಎರಡು ತಿಂಗಳ ಹಿಂದೆ ಅವರ ಮನವಿಯನ್ನು ನಾನು ಸ್ವೀಕರಿಸಿದೆ’’ ಎಂದು ಸಾಜಿದ್ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸುತ್ತಾರೆ. ಶಸ್ತ್ರಚಿಕಿತ್ಸೆಗೂ ಮುನ್ನ ವೈದ್ಯರು ನನ್ನ ಮೇಲೆ ಯಾವುದೇ ಪರೀಕ್ಷೆಯನ್ನು ನಡೆಸಲಿಲ್ಲ. ಆದರೆ ಈ ರೀತಿ ಪರೀಕ್ಷೆ ನಡೆಸುವುದು ಅನಿವಾರ್ಯ ಮತ್ತು ಸಾಮಾನ್ಯ ಪ್ರಕ್ರಿಯೆ ಎಂಬುದು ನನಗೆ ನಂತರ ತಿಳಿಯಿತು ಎಂದು ಸಾಜಿದ್ ಹೇಳುತ್ತಾರೆ. ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಆರಂಭವಾದ ಎರಡನೇ ದಿನವೇ ನಾನು ತೀವ್ರವಾದ ಜ್ವರದ ಬಾಧೆಗೆ ಒಳಗಾದೆ ಮತ್ತು ನನ್ನ ತಲೆಯಲ್ಲಿ ಇನ್ಫೆಕ್ಷನ್ ಉಂಟಾಯಿತು. ಹತ್ತು ದಿನಗಳ ಕಾಲ ನಾನು ಜ್ವರ ಮತ್ತು ಸೋಂಕಿನಿಂದ ಬಳಲಿದೆ. ಆದರೆ ವೈದ್ಯರು ಮಾತ್ರ ಎಲ್ಲವೂ ಸರಿಯಾಗಿದೆ ಮತ್ತು ಇವೆಲ್ಲವೂ ಮಾಮೂಲು ಎಂದು ಭರವಸೆ ನೀಡುತ್ತಿದ್ದರು. ಹದಿನೈದು ದಿನಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದರೂ ವೈದ್ಯರು ಮಾತ್ರ ಅದನ್ನು ದೊಡ್ಡ ವಿಷಯವೆಂದು ಪರಿಗಣಿಸಲಿಲ್ಲ. ಅವರು ನನ್ನ ತಲೆಯ ಸೋಂಕನ್ನು ಔಷಧ ಮಿಶ್ರಿತ ದ್ರಾವಣದಿಂದ ಸ್ವಚ್ಛಗೊಳಿಸುತ್ತಿದ್ದರು ಅಷ್ಟೇ ಎಂದು ಸಾಜಿದ್ ವಿವರಿಸುತ್ತಾರೆ. ನಂತರ ತಮ್ಮ ತಲೆಯನ್ನು ಬಗ್ಗಿಸುವ ಸಾಜಿದ್ ಶಸ್ತ್ರಚಿಕಿತ್ಸೆಯಿಂದ ತಮ್ಮ ತಲೆಯಲ್ಲಿ ಉಂಟಾಗಿರುವ ಗಾಯವನ್ನು ತೋರಿಸುತ್ತಾರೆ. ಈಗ ಈ ಪರಿಸ್ಥಿತಿ ಇದೆ. ವೈದ್ಯರ ನಿರ್ಲಕ್ಷ ಮತ್ತು ತಲೆಯ ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸದ ಪರಿಣಾಮವಾಗಿ ನಾನು ಬಹಳಷ್ಟು ನೋವನುಭವಿಸಿದ್ದೇನೆ. ನನ್ನ ಜೊತೆ ನನ್ನ ಕುಟುಂಬ ಕೂಡಾ ಯಾತನೆ ಅನುಭವಿಸಿದೆ. ಕಳೆದ ಎರಡು ತಿಂಗಳಿನಿಂದ ನಾನು ಕಷ್ಟಪಡುತ್ತಿದ್ದೇನೆ. ಇದು ನನ್ನ ವೃತ್ತಿಯ ಮೇಲೂ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಾಜಿದ್. ಈ ವೀಡಿಯೊ ಮೂಲಕ ಜನರಲ್ಲಿ ಕೂದಲು ಮರುಜೋಡಣೆ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಾಜಿದ್ ಬಯಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ