ಮೂತ್ರಪಿಂಡ ಕಲ್ಲುಗಳ ಸಮಸ್ಯೆಗೆ ಈ ಆಹಾರಗಳಿಂದ ದೂರವಿರಿ

Update: 2018-02-09 18:51 GMT

ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ನಮ್ಮ ಶರೀರದ ಮುಖ್ಯ ಅಂಗಗಳಲ್ಲೊಂದಾಗಿರುವ ಮೂತ್ರಪಿಂಡವು ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ ಹಾಗೂ ಶರೀರದಲ್ಲಿಯ ವಿಷಯುಕ್ತ ಸಂಯುಕ್ತಗಳು ಮತ್ತು ಹೆಚ್ಚುವರಿ ನೀರನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತದೆ. ಮೂತ್ರಪಿಂಡ ಕಲ್ಲುಗಳು ಮೂತ್ರದಲ್ಲಿರುವ ಹರಳುಗಳಿಂದ ರೂಪುಗೊಳ್ಳುತ್ತವೆ. ಅವು ತೀವ್ರ ನೋವನ್ನುಂಟು ಮಾಡುವ ಜೊತೆಗೆ ಮೂತ್ರನಾಳದಲ್ಲಿ ತಡೆಯನ್ನುಂಟು ಮಾಡುತ್ತವೆ.

ಮೂತ್ರಪಿಂಡ ಕಲ್ಲುಗಳನ್ನು ಕ್ಯಾಲ್ಸಿಯಂ ಫಾಸ್ಪೇಟ್, ಸಿಸ್ಟಿನ್, ಕ್ಯಾಲ್ಸಿಯಂ ಆಕ್ಸಲೇಟ್ ಮತ್ತು ಯೂರಿಕ್ ಆ್ಯಸಿಡ್ ಎಂದು ವರ್ಗೀಕರಿಸಲಾಗಿದೆ. ಈ ಪೈಕಿ ಕ್ಯಾಲ್ಸಿಯಂ ಆಕ್ಸಲೇಟ್‌ಗಳು ಹೆಚ್ಚಾಗಿ ಮಾನವರಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ಹಿಂದೆ ಮೂತ್ರಪಿಂಡ ಕಲ್ಲುಗಳ ಸಮಸ್ಯೆಗೆ ಗುರಿಯಾಗಿದ್ದರೆ ಅಥವಾ ಈಗ ಈ ಸಮಸ್ಯೆಯಿಂದ ನರಳುತ್ತಿದ್ದರೆ ಕೆಲವು ಆಹಾರಗಳಿಂದ ದೂರವಿರುವುದು ಒಳ್ಳೆಯದು. ಅಂತಹ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ....

* ಕೆಫೀನ್/ಸೋಡಾ
ಮೂತ್ರಪಿಂಡ ಕಲ್ಲುಗಳಿಂದ ಪೀಡಿತರಾಗಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾನೀಯಗಳನ್ನು ಸೇವಿಸುವುದು ಮುಖ್ಯವಾಗುತ್ತದೆ. ಆದರೆ ಕೆಫೀನ್ ಸೇವನೆಗೆ ಒಂದು ಮಿತಿಯಿಟ್ಟು ಕೊಳ್ಳುವುದನ್ನು ಮರೆಯಬೇಡಿ. ನೀವು ದಿನಕ್ಕೆ ಎರಡು ಕಪ್(250-500 ಎಂಎಲ್)ಗಿಂತ ಹೆಚ್ಚು ಚಹಾ, ಕಾಫಿ ಅಥವಾ ತಂಪು ಪಾನೀಯಗಳನ್ನು ಸೇವಿಸಕೂಡದು. ಅತಿಯಾದ ಕಾಫಿ ಸೇವನೆಯು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ ಮತ್ತು ನಿಮಗೆ ನಿರ್ಜಲೀಕರಣದ ಅನುಭವವನ್ನು ನೀಡಬಹುದು.

* ಅಧಿಕ ಸೋಡಿಯಂ ಹೊಂದಿರುವ ಆಹಾರಗಳು
ಸಂಸ್ಕರಿತ ಮತ್ತು ಡಬ್ಬಿಗಳಲ್ಲಿ ಬರುವ ಆಹಾರಗಳು ಹೆಚ್ಚು ದಿನ ಬಾಳಿಕೆ ಬರುವಂತಾಗಲು ಅವುಗಳಿಗೆ ಹೆಚ್ಚು ಉಪ್ಪನ್ನು ಸೇರಿಸಲಾಗುತ್ತದೆ. ಆದ್ದರಿಂದ ಇವು ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳಲು ಪೂರಕವಾಗಿವೆ. ಬದಲಿಗೆ ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಒಳಗೊಂಡಿರುವ ಆಹಾರಗಳನ್ನು ಸೇವಿಸಿ.

* ಪ್ರೊಟೀನ್ ಸಮೃದ್ಧ ಆಹಾರಗಳು
ಮಾಂಸ ಮತ್ತು ಮೀನುಗಳಂತಹ ಪ್ರೊಟೀನ್ ಸಮೃದ್ಧ ಆಹಾರಗಳ ಸೇವನೆಗೆ ಮಿತಿಯಿರಲಿ. ಅತ್ಯಂತ ಕಡಿಮೆ ತೈಲವನ್ನು ಬಳಸಿ ಅಥವಾ ಕುದಿಸಿ ಸಿದ್ಧಗೊಳಿಸಿದ ಮಾಂಸವನ್ನು ಸೇವಿಸುವುದು ಒಳ್ಳೆಯದು. ಹೆಚ್ಚು ಮಸಾಲೆಭರಿತ ಆಹಾರವನ್ನು ನಿವಾರಿಸಿ.

* ಹೆಚ್ಚು ಕೊಬ್ಬಿರುವ ಆಹಾರಗಳು
ನಿಮ್ಮ ಆಹಾರದಲ್ಲಿ ಅತಿಯಾದ ಕೊಬ್ಬು ಹೊಂದಿರುವ ಚೀಸ್‌ನಂತಹ ಪದಾರ್ಥಗಳಿರಬಾರದು. ಕಡಿಮೆ ಕೊಬ್ಬು ಇರುವ ಡೇರಿ ಉತ್ಪನ್ನಗಳನ್ನು ನೀವು ಸೇವಿಸಬಹುದಾಗಿದೆ. ನಿಮ್ಮ ಬ್ರೇಕ್‌ಫಾಸ್ಟ್‌ನಲ್ಲಿ ಸ್ಕಿಮ್ಡ್ ಮಿಲ್ಕ್ ಸೇವನೆ ಒಳ್ಳೆಯದು. ಹೆಚ್ಚು ಕೊಬ್ಬಿರುವ ಆಹಾರಗಳ ಸೇವನೆಯಿಂದ ಕೊಬ್ಬು ನಿಮ್ಮ ಶರೀರದಲ್ಲಿ ಸಂಗ್ರಹಗೊಂಡು ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

* ಕ್ಯಾಲ್ಸಿಯಂ ಸಮೃದ್ಧ ಆಹಾರಗಳು
ನೀವು ಮೂತ್ರಪಿಂಡ ಕಲ್ಲುಗಳಿಂದ ನರಳುತ್ತಿದ್ದರೆ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಅನ್ನು ಒಳಗೊಂಡಿರುವ ಆಹಾರಗಳನ್ನು ಕಟ್ಟುನಿಟ್ಟಾಗಿ ದೂರವಿರಿಸಬೇಕು. ಅಧಿಕ ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಅಂಟಾಸಿಡ್‌ಗಳ ಬಗ್ಗೆಯೂ ಎಚ್ಚರಿಕೆಯಿರಲಿ. ನೀವು ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ಸೇವಿಸಬಹುದಾದರೂ ಅವು ಅತ್ಯಲ್ಪ ಪ್ರಮಾಣದಲ್ಲಿರಲಿ.

* ಆಕ್ಸಲೇಟ್ ಸಮೃದ್ಧ ಆಹಾರಗಳು
 ನೀವು ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲಿನಿಂದ ನರಳುತ್ತಿದ್ದರೆ ಆಕ್ಸಲೇಟ್‌ಗಳನ್ನು ಒಳಗೊಂಡಿರುವ ಆಹಾರಗಳನ್ನು ವರ್ಜಿಸಬೇಕು. ಚಹಾ, ಕಾಫಿ, ಬೀಟ್, ಸಿಹಿಗೆಣಸು, ಪಾಲಕ್, ಟೊಮೆಟೊ, ಸೂಪ್, ಕ್ಯಾನ್ಡ್ ಫ್ರುಟ್ ಸಲಾಡ್, ಸ್ಟ್ರಾಬೆರಿ ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಜೊತೆಗೆ ಚಾಕಲೇಟ್ ಇತ್ಯಾದಿಗಳನ್ನೂ ತಿನ್ನಬಾರದು.

* ಮದ್ಯಪಾನ
ಮದ್ಯಪಾನ ಮತ್ತು ಮೂತ್ರಪಿಂಡ ಕಲ್ಲುಗಳು ಉಂಟಾಗುವುದಕ್ಕೆ ನೇರ ಸಂಬಂಧವಿಲ್ಲವಾದರೂ ಅದು ಈ ಕಲ್ಲುಗಳು ರೂಪುಗೊಳ್ಳಲು ಉತ್ತೇಜನ ನೀಡುತ್ತದೆ. ಅದು ಯೂರಿಕ್ ಆ್ಯಸಿಡ್ ಕಲ್ಲುಗಳನ್ನುಂಟು ಮಾಡುವ ಪುರಿನ್ ಅನ್ನು ಒಳಗೊಂಡಿರುತ್ತದೆ. ಅಲ್ಲದೆ ಮದ್ಯಪಾನವು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ.

* ಬೊಳ್ಳಂಜಿ/ಕೊಲ್ಲತರು ಮೀನು
ಕೊಬ್ಬನ್ನು ಹೊಂದಿರುವ ಈ ಮೀನುಗಳು ತಿನ್ನಲು ರುಚಿಯಾಗಿರುತ್ತವೆ ಯಾದರೂ ಅವು ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುತ್ತವೆ. ಹೀಗಾಗಿ ನೀವು ಮೂತ್ರಪಿಂಡ ಕಲ್ಲುಗಳಿಂದ ನರಳುತ್ತಿದ್ದರೆ ಈ ಮೀನುಗಳ ಸೇವನೆಯಿಂದ ದೂರವಿರಿ.

* ಶತಾವರಿ
ಶತಾವರಿಯನ್ನು ಮೂತ್ರವರ್ಧಕವನ್ನಾಗಿ ಬಳಸಲಾಗುತ್ತದೆ. ಮೂತ್ರಪಿಂಡ ಕಲ್ಲುಗಳನ್ನು ಹೊಂದಿರುವ ರೋಗಿಗಳು ಇದರ ಸೇವನೆಯನ್ನು ನಿವಾರಿಸಬೇಕು.

* ಬೇಕಿಂಗ್ ಯೀಸ್ಟ್
ಇದರಲ್ಲಿ ಪುರಿನ್ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡ ಕಲ್ಲು ರೋಗಿಗಳಿಗೆ ಒಳ್ಳೆಯದಲ್ಲ. ಇಂತಹ ರೋಗಿಗಳು ಕಾಲಿಫ್ಲವರ್, ಅಣಬೆ, ಆಲಿವ್ ಎಣ್ಣೆ, ಸಾರ್ಡಿನ್ ಮೀನುಗಳು ಹಾಗೂ ಆಡಿನ ಕಿಡ್ನಿ ಮತ್ತು ಲಿವರ್‌ನಿಂದ ತಯಾರಿಸಿದ ಖಾದ್ಯಗಳ ಸೇವನೆಯಿಂದಲೂ ದೂರವಿರಬೇಕು.

ನೆನಪಿಡಿ, ಈ ಸಮಸ್ಯೆಯಿಂದ ಬಳಲುತ್ತಿರುವರು ಪ್ರತೀ ಊಟದಲ್ಲಿ 85 ಗ್ರಾಂಗಳಿಗಿಂತ ಅಧಿಕ ಮಾಂಸವನ್ನು ಸೇವಿಸಬಾರದು. ಐಸ್‌ಕ್ರೀಂ, ಕರಿದ ಆಹಾರ ಮತ್ತು ಸಲಾಡ್ ಡ್ರೆಸ್ಸಿಂಗ್‌ಗಳನ್ನು ತಿನ್ನುವ ಆಸೆಗೆ ಕಡಿವಾಣ ಹಾಕುವುದು ಒಳ್ಳೆಯದು. ಮೂತ್ರಪಿಂಡ ಕಲ್ಲುಗಳಾಗುವುದನ್ನು ತಡೆಯಲು ಕಾರ್ಬೊಹೈಡ್ರೇಟ್‌ಗಳು, ಕಿತ್ತಳೆ, ಲಿಂಬೆ ಮತ್ತು ಲೆಮನೇಡ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.
 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News