ಕಿಮ್ ಜಾಂಗ್ ಸೋದರಿ ಜೊತೆ ದ.ಕೊರಿಯ ಅಧ್ಯಕ್ಷರ ಮಾತುಕತೆ

Update: 2018-02-10 17:01 GMT

ಸಿಯೋಲ್/ಪ್ಯಾಂಗ್‌ಚಾಂಗ್ (ದಕ್ಷಿಣ ಕೊರಿಯ), ಫೆ. 10: ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉಭಯ ಕೊರಿಯಗಳ ನಡುವೆ ಮೂಡಿರುವ ಸಹಮತವನ್ನು ಈ ದೇಶಗಳ ನಡುವೆ ನೆಲೆಸಿರುವ ಉದ್ವಿಗ್ನತೆಯ ನಿವಾರಣೆಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಇಂಗಿತದೊಂದಿಗೆ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಶನಿವಾರ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್‌ಉನ್ ಸಹೋದರಿಯ ಜೊತೆ ಮಾತುಕತೆ ನಡೆಸಿದರು.

 ಸಿಯೋಲ್‌ನಲ್ಲಿರುವ ಅಧ್ಯಕ್ಷರ ‘ಬ್ಲೂ ಹೌಸ್’ನಲ್ಲಿ ಕಿಮ್ ಯೊ ಜಾಂಗ್ ಜೊತೆ ಮಧ್ಯಾಹ್ನ ಭೋಜನ ಸೇವಿಸುತ್ತಾ ಅಧ್ಯಕ್ಷ ಮೂನ್ ಮಾತುಕತೆ ನಡೆಸಿದರು.

ದಕ್ಷಿಣ ಕೊರಿಯದ ಪ್ಯಾಂಗ್‌ಚಾಂಗ್‌ನಲ್ಲಿ ಶುಕ್ರವಾರ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಕಿಮ್ ಯೊ ಜಾಂಗ್ ದಕ್ಷಿಣ ಕೊರಿಯಕ್ಕೆ ಆಗಮಿಸಿದ್ದಾರೆ. ಇಬ್ಬರೂ ನಾಯಕರು ಮೊದಲ ಮುಖಾಮುಖಿ ಮಾತುಕತೆಯನ್ನು ಅಲ್ಲೇ ನಡೆಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ, ಉತ್ತರ ಕೊರಿಯದ ನಿಯೋಗ ಮತ್ತು ಅಮೆರಿಕದ ನಿಯೋಗದ ನಡುವೆ ಯಾವುದೇ ಸಂಪರ್ಕ ಇರಲಿಲ್ಲ.

ಮಾತುಕತೆಗಾಗಿ ಕಿಮ್ ಜಾಂಗ್‌ರಿಂದ ಮೂನ್‌ಗೆ ಆಹ್ವಾನ

ಮಾತುಕತೆ ನಡೆಸುವುದಕ್ಕಾಗಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್‌ರನ್ನು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಪ್ಯಾಂಗ್‌ಯಾಂಗ್‌ಗೆ ಆಹ್ವಾನಿಸಿದ್ದಾರೆ ಎಂದು ದಕ್ಷಿಣ ಕೊರಿಯ ಸರಕಾರ ಶನಿವಾರ ಹೇಳಿದೆ.

‘ಎಷ್ಟು ಸಾಧ್ಯವೋ ಅಷ್ಟು ಬೇಗ’ ದಕ್ಷಿಣ ಕೊರಿಯದ ನಾಯಕರನ್ನು ಭೇಟಿಯಾಗಲು ಕಿಮ್ ಬಯಸುತ್ತಾರೆ ಎಂದು ದಕ್ಷಿಣ ಕೊರಿಯ ಭೇಟಿಯಲ್ಲಿರುವ ಕಿಮ್ ಜಾಂಗ್ ಉನ್‌ರ ಸಹೋದರಿ ಮೂಲಕ ನೀಡಲಾದ ಆಹ್ವಾನ ಹೇಳಿದೆ ಎಂದು ಅಧ್ಯಕ್ಷರ ‘ಬ್ಲೂ ಹೌಸ್’ನ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News