ಪತ್ನಿ ಪೀಡನೆ ಆರೋಪ: ಶ್ವೇತಭವನದ ಇನ್ನೋರ್ವ ಅಧಿಕಾರಿಯ ತಲೆದಂಡ

Update: 2018-02-11 17:56 GMT

ವಾಶಿಂಗ್ಟನ್,ಫೆ.10: ಪತ್ನಿ ಪೀಡನೆಯ ಆರೋಪದ ಹಿನ್ನೆಲೆಯಲ್ಲಿ ಒಂದೇ ವಾರದ ಅವಧಿಯಲ್ಲಿ ಶ್ವೇತಭವನದ ಇನ್ನೋರ್ವ ಅಧಿಕಾರಿ ಪದತ್ಯಾಗ ಮಾಡಿದ್ದಾರೆ. ತನ್ನ ಪತಿ ತನ್ನನ್ನು ಮಾನಹಾನಿಕರವಾಗಿ ನಿಂದಿಸುತ್ತಿದ್ದಾರೆಂದು ಆರೋಪಿಸಿದ ಬೆನ್ನಲ್ಲೇ ಶ್ವೇತಭವನದ ಭಾಷಣರಚನಕಾರ (ಸ್ಪೀಚ್‌ರೈಟರ್)ರಾದ ಡೇವಿಡ್ ಸೊರೆನ್ಸೆನ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕಳೆದ ವಾರ ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿ ರಾಬ್ ಪೋರ್ಟರ್ ಅವರು ಪತ್ನಿ ಪೀಡನೆಯ ಆರೋಪದಲ್ಲಿ ರಾಜೀನಾಮೆ ನೀಡಿದ್ದರು.

ತಮ್ಮ ಎರಡೂವರೆ ವರ್ಷಗಳ ದಾಂಪತ್ಯ ಬದುಕಿನಲ್ಲಿ ತನ್ನ ಪತಿ ತನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಡೇವಿಡ್ ಸೊರೆನ್ಸನ್ ಅವರ ಪರಿತ್ಯಕ್ತ ಪತ್ನಿ ಜೆಸ್ಸಿಕಾ ಕೊರ್ಬೆಟ್ ಆರೋಪಿಸಿದ್ದರು. ಈ ದಂಪತಿ ಕಳೆದ ಸೆಪ್ಟೆಂಬರ್‌ನಲ್ಲಿ ವಿವಾಹವಿಚ್ಛೇದನಕ್ಕೊಳಗಾಗಿದ್ದರು.

ತನ್ನ ವಿಚ್ಛೇದಿತ ಪತ್ನಿಯ ಆರೋಪಗಳನ್ನು ಸೊರೆನ್ಸನ್ ನಿರಾಕರಿಸಿದ್ದಾರೆ, ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದವರು ಶನಿವಾರ ತಿಳಿಸಿದ್ದಾರೆ. ತನ್ನ ವಿರುದ್ಧದ ಆರೋಪಗಳು ತನ್ನನ್ನು ವಿಚಲಿತಗೊಳಿಸಕೂಡದೆಂಬ ಕಾರಣಕ್ಕಾಗಿ ತಾನು ಪದತ್ಯಾಗ ಮಾಡಿರುವುದಾಗಿ ಸೊರೆನ್ಸನ್ ಹೇಳಿದ್ದಾರೆ.

ಅಮೆರಿಕದ ಜನತೆಗಾಗಿ ಟ್ರಂಪ್ ಹಮ್ಮಿಕೊಂಡಿರುವ ಐತಿಹಾಸಿಕ ಕ್ರಮಗಳನ್ನು ಈಡೇರಿಸುವತ್ತ ಶ್ವೇತಭವನವು ಗಮನಹರಿಸಬೇಕೆಂದು ಸೊರೆನ್ಸನ್ ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಈ ಮಧ್ಯೆ ಟ್ರಂಪ್ ಆಡಳಿತವು ಹೇಳಿಕೆಯೊಂದನ್ನು ನೀಡಿ, ಸೊರೆನ್ಸನ್ ವಿರುದ್ಧದ ಆರೋಪಗಳ ಬಗ್ಗೆ ಗುರುವಾರ ಮಧ್ಯರಾತ್ರಿ ಮಾಹಿತಿ ಲಭ್ಯವಾಗಿರುವುದಾಗಿ ತಿಳಿಸಿದರು. ‘‘ತಕ್ಷಣವೇ ನಾವು ಸೊರೆನ್ಸನ್ ಅವರನ್ನು ಸಂಪರ್ಕಿಸಿದ್ದು, ಅವರು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಆದರೆ ಇಂದು ಅವರು ರಾಜೀನಾಮೆ ಸಲ್ಲಿಸಿದ್ದಾರೆ’’ ಎಂದು ಶ್ವೇತಭವನದ ವಕ್ತಾರ ರಾಜ್‌ಶಾ, ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸೊರೆನ್ಸನ್ ವಿರುದ್ಧ ವಿಚ್ಛೇದಿತ ಪತ್ನಿಯ ಆರೋಪ

 ಪತಿ ಸೊರೆನ್ಸನ್ ತನ್ನ ಕಾಲಿನ ಮೇಲೆ ಕಾರುಹರಿಸಿದ್ದರು, ಕೈಮೇಲೆ ಸಿಗರೇಟ್ ಸುಟ್ಟಿದ್ದರು ಹಾಗೂ ತನ್ನನ್ನು ಬಲವಾಗಿ ಗೋಡೆಗೆ ಗುದ್ದಿದ್ದರು ಎಂದು ಕಾರ್ಬೆಟ್ ಆರೋಪಿಸಿದ್ದರು.

ತನ್ನ ವಿರುದ್ಧ ಪ್ರತೀಕಾರದ ಕ್ರಮಕೈಗೊಳ್ಳುವ ಸಾಧ್ಯತೆಯಿರುವುದರಿಂದ ತನಗಾದ ದೈಹಿಕ ಹಾಗೂ ಮಾನಸಿಕ ಹಿಂಸೆಯ ವಿರುದ್ಧ ಯಾವುದೇ ಕಾನೂನುಜಾರಿ ಸಂಸ್ಥೆಗೆ ಪತಿಯ ವಿರುದ್ಧ ದೂರು ನೀಡಿರಲಿಲ್ಲವೆಂದು ಕೊರ್ಬೆಟ್ ಹೇಳಿದ್ದರು.

ಕ್ಷುಲ್ಲಕ ಆರೋಪಗಳಿಂದ ಬದುಕು ಭಗ್ನ: ಟ್ರಂಪ್ ಕಳವಳ

ಪತ್ನಿ ಪೀಡನೆಯ ಆರೋಪದ ಹಿನ್ನೆಲೆಯಲ್ಲಿ ಶ್ವೇತಭವನದ ಇಬ್ಬರು ಅಧಿಕಾರಿಗಳ ಸರಣಿ ರಾಜೀನಾಮೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಷುಲ್ಲಕ ಆರೋಪಗಳಿಗಾಗಿ ಜನರ ಜೀವನಗಳು ಭಗ್ನಗೊಳ್ಳುತ್ತಿವೆಯೆಂದು ಹೇಳಿದ್ದಾರೆ.

  ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿ ರಾಬ್ ಪೋರ್ಟರ್ ಹಾಗೂ ಭಾಷಣ ಬರಹಗಾರ ಡೇವಿಡ್ ಸೊರೆನ್ಸನ್ ಕಳೆದ ಒಂದು ವಾರದಲ್ಲಿ ರಾಜೀನಾಮೆ ನೀಡಿದ ಬಳಿಕ ಈ ಬಗ್ಗೆ ಇಂದು ಟ್ರಂಪ್ ಟ್ವೀಟ್ ಮಾಡಿ, ಕ್ಷುಲ್ಲಕ ಸಂಗತಿಗಳಿಗಾಗಿ ಜನರ ಬದುಕು ಚೂರಾಗುತ್ತಿದೆ ಹಾಗೂ ನಾಶವಾಗುತ್ತಿದೆ ಹೇಳಿದ್ದಾರೆ.

ಈ ಆರೋಪಗಳಲ್ಲಿ ಕೆಲವು ಸತ್ಯ ಹಾಗೂ ಇನ್ನು ಕೆಲವು ನಕಲಿ. ಕೆಲವು ಆರೋಪಗಳು ಹಳೆಯವು ಹಾಗೂ ಇನ್ನು ಕೆಲವು ಹೊಸತು ಎಂದವರು ಹೇಳಿದ್ದಾರೆ.

‘‘ಯಾರಾದರೂ ಸುಳ್ಳು ಆರೋಪಕ್ಕೆ ಸಿಲುಕಿಕೊಂಡಲ್ಲಿ, ಆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರ ಬದುಕು ಹಾಗೂ ವೃತ್ತಿ ಎರಡೂ ನಾಶವಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News