ಆಪರೇಶನ್ ಸಿನಾಯ್: ಈಜಿಪ್ಟ್ ಸೇನೆಯಿಂದ 16 ಬಂಡುಕೋರರ ಹತ್ಯೆ

Update: 2018-02-11 18:00 GMT

   ಕೈರೋ,ಫೆ.11: ಈಜಿಪ್ಟ್‌ನ ಉದ್ವಿಗ್ನ ಸಿನಾಯ್ ಪ್ರಾಂತದಲ್ಲಿ ಈಜಿಪ್ಟ್ ಸೇನೆ ರವಿವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕನಿಷ್ಠ 16 ಮಂದಿ ಬಂಡುಕೋರರನ್ನು ಹತ್ಯೆಗೈದಿದೆ. ಈಜಿಪ್ಟ್‌ನ ಗಡಿ ಜಿಲ್ಲೆಗಳ ಮೇಲಿನ ನಿಯಂತ್ರಣವನ್ನು ಬಲಪಡಿಸುವ ಉದ್ದೇಶದಿಂದ ಈ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ 66 ಭಯೋತ್ಪಾದಕರ ಅಡಗುದಾಣಗಳು, ಅವರು ಬಳಸುತ್ತಿದ್ದ 11 ವಾಹನಗಳು ಹಾಗೂ 31 ಪರವಾನಿಗೆ ರಹಿತ ಮೋಟಾರ್‌ಬೈಕ್ ಹಾಗೂ ಶಸ್ತ್ರಾಗಾರಗಳನ್ನು ನಾಶಪಡಿಸಲಾಗಿದೆ.

 ಕಾರ್ಯಾಚರಣೆಯಲ್ಲಿ 30 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆಯೆಂದು ಸೇನೆ ತಿಳಿಸಿದೆ. ‘ಆಪರೇಶನ್ ಸಿನಾಯ್ 2018’ ಹೆಸರಿನಲ್ಲಿ ಈ ದಿಢೀರ್ ದಾಳಿ ಕಾರ್ಯಾಚರಣೆಯನ್ನು ನಡೆಸಲಾಗಿದೆಯೆಂದು ಅದು ಹೇಳಿದೆ. 2011ರ ಈಜಿಪ್ಟ್ ನಲ್ಲಿ ಈಜಿಪ್ಟ್ ಕ್ರಾಂತಿಯ ಬಳಿಕ ಉತ್ತರ ಸಿನಾಯ್ ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿತ್ತು. 2013ರಲ್ಲಿ ಅಧ್ಯಕ್ಷ ಮುಹಮ್ಮದ್ ಮೊರ್ಸಿಯವರನ್ನು ಸೇನೆ ಪದಚ್ಯುತಿಗೊಳಿಸಿದ ಬಳಿಕ ಉಗ್ರರು ಸೇನೆ ಹಾಗೂ ಪೊಲೀಸರನ್ನು ಗುರಿಯಿರಿಸೊಂಡು ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದರು.

ಕಳೆದ ವರ್ಷದ ನವೆಂಬರ್‌ನಲ್ಲಿ ಉಗ್ರರು ಶುಕ್ರವಾರದ ಪ್ರಾರ್ಥನೆಯ ಮಸೀದಿಯೊಳಗೆ ಬಾಂಬ್ ಸ್ಫೋಟಿಸಿ ಹಾಗೂ ಗುಂಡಿನ ಸುರಿಮಳೆಗೈದು ಕನಿಷ್ಠ 305 ಮಂದಿಯನ್ನು ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News