‘ಏಕತೆಯ ವರ್ಷ’ ಆಚರಿಸುವಂತೆ ಇರಾನ್ ಜನತೆಗೆ ರೂಹಾನಿ ಕರೆ

Update: 2018-02-11 18:02 GMT

 ಟೆಹರಾನ್,ಫೆ.11: ಇರಾನ್ ರವಿವಾರ ಇಸ್ಲಾಮಿಕ್ ಕ್ರಾಂತಿಗೆ ರವಿವಾರ 39 ವರ್ಷ ತುಂಬಿರುವಂತೆಯೇ, ಕಳೆದ ತಿಂಗಳು ದೇಶಾದ್ಯಂತ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಯ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ಅಧ್ಯಕ್ಷ ಹಸನ್ ರೂಹಾನಿ ಅವರು ಈ ವರ್ಷವನ್ನು ‘ಏಕತೆಯ ವರ್ಷ’ವಾಗಿ ಆಚರಿಸಬೇಕೆಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

 ಭವಿಷ್ಯತ್ತಿನ ಚುನಾವಣೆಗಳಲ್ಲಿ ಸುಧಾರಣಾವಾದಿ ಅಭ್ಯರ್ಥಿಗಳಿಗೆ ಅಡ್ಡಗಾಲು ಹಾಕಕೂಡದು ಹಾಗೂ ಇಸ್ಲಾಮಿಕ್ ಗಣರಾಜ್ಯದ ಬಗ್ಗೆ ಜನತೆಗೆ ಮಹತ್ತರವಾದ ವಿಶ್ವಾಸವನ್ನು ಮೂಡಿಸುವಂತೆ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದ್ದಾರೆ.

  ‘‘ಆ ವರ್ಷವು ಏಕತೆಯ ವರ್ಷವಾಗಿರಬೇಕು. ಈ ಸಂದರ್ಭದಲ್ಲಿ ಎಲ್ಲಾ ಸಂಪ್ರದಾಯವಾದಿಗಳು, ಸುಧಾರಣಾವಾದಿಗಳು, ಆಧುನಿಕತಾವಾದಿಗಳು ಹಾಗೂ ಎಲ್ಲ ಪಕ್ಷಗಳು ಹಾಗೂ ಜನರು ಜೊತೆಗೂಡಬೇಕಾಗಿದೆ’’ ಎಂದು ರೂಹಾನಿ ಟೆಹರಾನ್‌ನಲ್ಲಿ ರವಿವಾರ ಬೃಹತ್ ಜನಸ್ತೋಮವನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ತಿಳಿಸಿದರು.

 2013 ಹಾಗೂ 2017ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಗಳಿಸಿರುವ ರೂಹಾನಿ ಅವರು ಸುಧಾರಣಾವಾದಿಗಳನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ. ಪಾಶ್ಚಾತ್ಯದೇಶಗಳ ಜೊತೆಗಿನ ಬಾಂಧವ್ಯವನ್ನು ಮರುಸ್ಥಾಪಿಸುವ ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ಉದಾರಗೊಳಿಸುವ ಅವರ ಕ್ರಮಗಳಿಗೆ ಸಂಪ್ರದಾಯವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News