ಸೂ ಕಿ ರೊಹಿಂಗ್ಯಾ ಬಿಕ್ಕಟ್ಟಿನ ‘ಸಂಪೂರ್ಣ ಭಯಾನಕತೆ’ ಅರ್ಥ ಮಾಡಿಕೊಂಡಿಲ್ಲ

Update: 2018-02-12 17:34 GMT

 ಲಂಡನ್, ಫೆ. 12: ರೊಹಿಂಗ್ಯಾ ಮುಸ್ಲಿಮ್ ಬಿಕ್ಕಟ್ಟಿನ ‘ಪೂರ್ಣ ಭಯಾನಕತೆ’ಯನ್ನು ಅರ್ಥಮಾಡಿಕೊಳ್ಳುವಲ್ಲಿ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ವಿಫಲರಾಗಿದ್ದಾರೆ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿ ಬೊರಿಸ್ ಜಾನ್ಸನ್ ಆರೋಪಿಸಿದ್ದಾರೆ.

ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯವು ‘ಜನಾಂಗೀಯ ನಿರ್ಮೂಲನೆಯ ಜ್ವಲಂತ ಉದಾಹರಣೆ’ ಎಂಬುದಾಗಿ ವಿಶ್ವಸಂಸ್ಥೆ ಈಗಾಗಲೇ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಹಿಂಸೆ ಸ್ಫೋಟಗೊಂಡ ಬಳಿಕ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಜಾನ್ಸನ್ ಪ್ರಸಕ್ತ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರವಾಸದಲ್ಲಿದ್ದಾರೆ.

ಯಾಂಗನ್‌ನಲ್ಲಿ ಸೂ ಕಿಯನ್ನು ಭೇಟಿಯಾದ ಬಳಿಕ ಬಿಬಿಸಿಯೊಂದಿಗೆ ಮಾತನಾಡಿದ ಜಾನ್ಸನ್, ‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ರೊಹಿಂಗ್ಯಾ ಬಿಕ್ಕಟ್ಟಿನ ಸಂಪೂರ್ಣ ಭಯಾನಕತೆಯನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ನನಗನಿಸುವುದಿಲ್ಲ. ನಾವು ನೋಡಿರುವುದನ್ನು ನೋಡಲು ಅವರು ಹೆಲಿಕಾಪ್ಟರ್ ಹತ್ತಿದ್ದಾರೆ ಎಂದು ನನಗನಿಸುವುದಿಲ್ಲ. ಅವರ ನಾಯಕತ್ವದಲ್ಲಿ ನನಗೆ ವಿಶ್ವಾಸವಿದೆ, ಆದರೆ, ಬರ್ಮಾಕ್ಕೆ ಬಂದಿರುವ ಪರಿಸ್ಥಿತಿಯನ್ನು ನೋಡಿ ದುಃಖವಾಗುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News