ಬಿಜೆಪಿ ಸಿದ್ಧಾಂತ ಮತ್ತು ಭಾರತದಲ್ಲಿ ವೈಜ್ಞಾನಿಕ ರಂಗದ ಭವಿಷ್ಯ

Update: 2018-02-12 18:45 GMT

ಎಲ್ಲ ಜ್ಞಾನವೂ ನಮ್ಮ ಪವಿತ್ರ ಗ್ರಂಥಗಳಲ್ಲಿ, ಶಾಸ್ತ್ರ ಗ್ರಂಥಗಳಲ್ಲಿ ಇವೆ ಮತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ನಡೆಯುವ ಸಂಶೋಧನೆಗಳು ಈ ಜ್ಞಾನದ ಹಾದಿಯಲ್ಲೇ ನಡೆಯಬೇಕು ಎಂಬುದು ಈ ಎಲ್ಲ ವಾದಗಳು ಹೊಂದಿರುವ ಉದ್ದೇಶ.

ಭಾರತಕ್ಕೆ ಸ್ವಾತಂತ್ರ ದೊರಕಿ ಭಾರತೀಯ ಸಂವಿಧಾನ ಅನುಷ್ಠಾನಗೊಳ್ಳುವುದ ರೊಂದಿಗೆ ದೇಶದಲ್ಲಿ ಅಭಿವೃದ್ಧಿಗೆ ಅಡಿಪಾಯ ಹಾಸಿದಂತಾಯಿತು. ಸಕಲ ರಂಗಗಳ ಅಭಿವೃದ್ಧಿಗೆ ವೈಜ್ಞಾನಿಕ ಮನೋಭಾವದ ತತ್ವಗಳು ಆಧಾರವಾದವು. ಆಧುನಿಕ ಭಾರತದ ರೂವಾರಿ ಜವಾಹರಲಾಲ್ ನೆಹರೂ ಈ ಪ್ರಕ್ರಿಯೆಯ ಮೂಲ ಶಕ್ತಿಯಾಗಿದ್ದರು. ಅಭಿವೃದ್ಧಿಯ ಈ ಹಾದಿಯಲ್ಲಿ ದೋಷಗಳು, ದೌರ್ಬಲ್ಯಗಳು ಇರಲಿಲ್ಲವೆಂದಲ್ಲ. ಆದರೆ, ಈ ಹಾದಿಯ ದಿಕ್ಕು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯದಾಗಿತ್ತು. ‘‘ವೈಜ್ಞಾನಿಕ ಮನೋಭಾವ’’ವನ್ನು ಬೆಳೆಸುವುದು ನಾಗರಿಕರ ‘ಮೂಲಭೂತ ಕರ್ತವ್ಯ’ ಎನ್ನುವ ಸಂವಿಧಾನದ 51 ಎ ನಿಬಂಧನೆಗೆ ಅನುಗುಣವಾಗಿಯೇ ಈ ಹಾದಿಯಲ್ಲಿ ದೇಶ ಮುನ್ನಡೆದಿತ್ತು.

ಈಗ ದೇಶದ ವೈಜ್ಞಾನಿಕ ಸಂಶೋಧನೆ ಮತ್ತು ಬೆಳವಣಿಗೆಯನ್ನು ನಿರ್ದೇಶಿಸುತ್ತಿರುವ ಬಿಜೆಪಿ ಮತ್ತು ಅದರ ನಾಯಕರು ಮಾತ್ರ ಇದಕ್ಕಿಂತ ಭಿನ್ನವಾದ ವಿಚಾರಗಳನ್ನು ಹೊಂದಿರುವಂತೆ ಕಾಣುತ್ತದೆ. ಅವರು ವೈಜ್ಞಾನಿಕ ಚಿಂತನೆಯನ್ನು ವಿರುದ್ಧ ದಿಕ್ಕಿನಲ್ಲಿ ಒಯ್ಯುತ್ತಿರುವುದು ಕಂಡು ಬರುತ್ತದೆ.
ಕಳೆದ ಸುಮಾರು 70 ವರ್ಷಗಳಲ್ಲಿ ನಮ್ಮ ಸಂಸ್ಥೆಗಳು ಬೆಳೆದು ಅಭಿವೃದ್ಧಿ ಹೊಂದಿದ ರೀತಿಯಲ್ಲೇ ಅವುಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಹೆಚ್ಚಿನ ಕ್ಷೇತ್ರಗಳಿಗೆ ನೀಡಿದ ಭಾರೀ ಕೊಡುಗೆ ಗೋಚರಿಸುತ್ತದೆ. ಆದರೆ, ಹಿಂದಿನ ಬಿಜೆಪಿ ನೇತ್ವೃದ ಎನ್‌ಡಿಎ ಸರಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ವಿಶ್ವವಿದ್ಯಾನಿಲಯಗಳಲ್ಲಿ ಜ್ಯೋತಿಷ್ಯಶಾಸ್ತ್ರ ಮತ್ತು ಪೌರೋಹಿತ್ಯದಂತಹ ಕೋರ್ಸ್ ಗಳನ್ನು ಆರಂಭಿಸಿದಾಗ ಈ ಹಿಮ್ಮುಖ ಚಲನೆ ಆರಂಭಗೊಂಡಿತು. ಇದರ ಮುಂದುವರಿಕೆಯಾಗಿ ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿರುವ ಡಾ. ಸತ್ಯಪಾಲ್ ಸಿಂಗ್ ಇತ್ತೀಚೆಗೆ ಡಾರ್ವಿನ್‌ನ ಸಿದ್ಧಾಂತ ತಪ್ಪು; ಯಾಕೆಂದರೆ ನಮ್ಮ ಪೂರ್ವಜರು ನಮ್ಮ ಶಾಸ್ತ್ರ ಗ್ರಂಥಗಳಲ್ಲಿ ಮಂಗ ಮನುಷ್ಯನಾಗಿ ಬದಲಾಗುವುದನ್ನು ತಾವು ನೋಡಿದ್ದೇವೆ ಎಂದು ಹೇಳಿಲ್ಲವೆಂಬುದಾಗಿ ಹೇಳಿಕೆ ನೀಡಿದ್ದಾರೆ. ಈಗ ಬಿಜೆಪಿ ನಾಯಕರಾಗಿರುವ ಆರೆಸ್ಸೆಸ್ ಸಿದ್ಧಾಂತಿ ರಾಮ್ ಮಾಧವ್ ಕೂಡ ಸಚಿವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

ಸ್ವಲ್ಪ ಸಮಯದ ಹಿಂದೆ, ಸ್ವತಃ ಅವರೇ ರೈಟ್ಸ್ ಸಹೋದರರು ವಿಮಾನ ಕಂಡುಹಿಡಿದ ಮೊದಲಿಗರಲ್ಲ. ಅದನ್ನು ಕಂಡುಹಿಡಿದವರು ಓರ್ವ ಭಾರತೀಯ, ಶಿವಕರ್ ಬಾಪೂಜಿ ತಾಳ್ಪಡೆ ಎಂಬವರು ಎಂದು ಹೇಳಿಕೆ ನೀಡಿದ್ದರು. ತಾಳ್ಪಡೆಯವರನ್ನು ಶಾಲಾ ಪುಸ್ತಕಗಳಲ್ಲಿ ಸೇರಿಸಬೇಕು ಎಂದೂ ಅವರು ಒತ್ತಿ ಹೇಳಿದರು. ಡಾರ್ವಿನ್‌ನ ವಿಕಾಸ ವಾದದ ಸಿದ್ಧಾಂತ ವಿಜ್ಞಾನದ ಶೋಧನೆಗಳಲ್ಲೇ ಒಂದು ಮುಖ್ಯ ಮೈಲಿಗಲ್ಲು. ಆದರೆ, ಮೂಲಭೂತವಾದಿಗಳು ವಿಜ್ಞಾನದ ವಿಧಾನಗಳಿಗೆ ಬದಲಾಗಿ, ಎಲ್ಲ ಜ್ಞಾನವೂ ಪವಿತ್ರ ಗ್ರಂಥಗಳಲ್ಲಿ ಈಗಾಗಲೇ ಇದೆ ಎಂದು ಹೇಳುತ್ತಲೇ ಇರುತ್ತಾರೆ. ಸಿಂಗ್‌ರವರ ಹೇಳಿಕೆ ಭಾರತದ ವೈಜ್ಞಾನಿಕ ಸಮುದಾಯವನ್ನು ಘಾಸಿಗೊಳಿಸಿದೆ. ಈ ಸಚಿವರಿಗೆ ಕಳುಹಿಸಿದ ಪತ್ರವೊಂದರಲ್ಲಿ ಈ ಸಮುದಾಯದ ಹಲವಾರು ಮಂದಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ವೇದಗಳಲ್ಲಿ ಉತ್ತರವಿದೆ ಎಂಬ ಸಚಿವರ ಹೇಳಿಕೆ ಒಂದು ಉತ್ಪ್ರೇಕ್ಷೆಯಾಗಿದ್ದು, ಅದು ‘‘ಭಾರತೀಯ ವೈಜ್ಞಾನಿಕ ಪರಂಪರೆಗಳ ಇತಿಹಾಸದ ಕುರಿತಾಗಿ ನಡೆದಿರುವ ನಿಜವಾದ ಸಂಶೋಧನೆಗೆ ಮಾಡಿದ ಅವಮಾನ’’ ಎಂದೂ ಆ ಪತ್ರದಲ್ಲಿ ಬರೆಯಲಾಗಿದೆ.

ಇನ್ನೊಂದು ಮಟ್ಟದಲ್ಲಿ ಕೌರವರು ನಮ್ಮ ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಲಾಗಿರುವ ತಂತ್ರಗಳ ಮೂಲಕ ಜನಿಸಿದವರು ಎಂದು ಹೇಳಲಾಗುತ್ತಿದೆ. ಈ ತಂತ್ರಗಳನ್ನಾಧರಿಸಿ ಬಾಲಕ ಕ್ರಿಶನ್ ಗಣಪತ್ ಮಾತಾಪುರ್‌ಕರ್ ದೇಹದ ಅಂಗಗಳ ಸೃಷ್ಟಿಯ ತಂತ್ರಕ್ಕೆ ಪೇಟೆಂಟ್ ಪಡೆದಿದ್ದಾರೆ. ಇದಕ್ಕೆ ಗಾಂಧಾರಿ ನೂರು ಗಂಡು ಮಕ್ಕಳಿಗೆ ಜನ್ಮ ನೀಡಿರುವುದು ಮತ್ತು ಕರ್ಣ, ಕುಂತಿಯ ಕಿವಿಯಿಂದ ಜನ್ಮ ಪಡೆದದ್ದು ಸ್ಫೂರ್ತಿ ಎಂದು ಹೇಳಲಾಗಿದೆ. ಇಷ್ಟೇ ಕುತೂಹಲಕಾರಿ, ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯ ಮುಖ್ಯಸ್ಥ ವೈ. ಸುದರ್ಶನ್‌ರವರ ತಿಳುವಳಿಕೆಯ ಮಟ್ಟ. ಇವರು ಹೇಳುವ ಪ್ರಕಾರ, ಮಹಾಭಾರತದಲ್ಲಿ ವರ್ಣಿಸಲ್ಪಟ್ಟಿರುವ ಅಸ್ತ್ರಗಳು ಪರಮಾಣು ಸಂಯೋಜನೆಯ ಪರಿಣಾಮ. ಸ್ಟೆಮ್ ಸೆಲ್ ಸಂಶೋಧನೆ ಕೂಡ ಭಾರತದಲ್ಲಿ ಕಬ್ಬಿಣ ಯುಗದಲ್ಲೇ ಇತ್ತು ಎನ್ನುತ್ತಾರೆ ಇವರು.

ನಮ್ಮ ಯೋಜನಾ ರೂಪಕರ ಇಂತಹ ಯೋಚನಾ ರೀತಿಯಿಂದ ನಮ್ಮ ವಿಜ್ಞಾನ ನೀತಿಗೆ ಧಕ್ಕೆಯಾಗುತ್ತದೆಂದು ಬೇರೆ ಹೇಳಬೇಕಾಗಿಲ್ಲ. ಈಗ ಕೇವಲ ಕಲ್ಪನೆಯನ್ನಾಧರಿಸಿರುವ ವಿಷಯಗಳ ಬಗ್ಗೆ ಸಂಶೋಧನೆ ಮಾಡಲು ಧನಸಹಾಯ ನೀಡುವುದೇ ಸರಕಾರದ ಯೋಜನೆಯಾಗಿದೆ. ಪಂಚಗವ್ಯಕ್ಕೆ ಇತ್ತೀಚೆಗೆ ಉನ್ನತಮಟ್ಟದಲ್ಲಿ ಭಾರೀ ಧನಸಹಾಯವನ್ನು ಪ್ರಕಟಿಸಲಾಗಿದೆ. (ಹಸುವಿನ ಮೂತ್ರ, ಸೆಗಣಿ, ತುಪ್ಪ, ಮೊಸರು ಮತ್ತು ಹಾಲಿನ ಒಂದು ಮಿಶ್ರಣವೇ ಪಂಚಗವ್ಯ.) ಭಾರತ ಮತ್ತು ಶ್ರೀಲಂಕಾ ನಡುವಿನ ರಾಮ ಸೇತುವೆ(ಆ್ಯಡಮ್ಸ್ ಬ್ರಿಜ್)ಯು ನಿಜವಾಗಿಯೂ ರಾಮ ಮತ್ತು ಆತನ ವಾನರ ಸೇನೆಯಿಂದ ನಿರ್ಮಿಸಲ್ಪಟ್ಟಿದ್ದು ಎಂದು ಸಾಬೀತುಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳ ಐತಿಹಾಸಿಕತೆಯನ್ನು ಸಾಬೀತುಪಡಿಸಲು ಸರಸ್ವತಿ ನದಿಯ ಅಸ್ತಿತ್ವವನ್ನು ರುಜುವಾತುಪಡಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ.

ಎಲ್ಲ ಜ್ಞಾನವೂ ನಮ್ಮ ಪವಿತ್ರ ಗ್ರಂಥಗಳಲ್ಲಿ, ಶಾಸ್ತ್ರ ಗ್ರಂಥಗಳಲ್ಲಿ ಇವೆ ಮತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ನಡೆಯುವ ಸಂಶೋಧನೆಗಳು ಈ ಜ್ಞಾನದ ಹಾದಿಯಲ್ಲೇ ನಡೆಯಬೇಕು ಎಂಬುದು ಈ ಎಲ್ಲ ವಾದಗಳು ಹೊಂದಿರುವ ಉದ್ದೇಶ. ಎರಡನೆಯದಾಗಿ, ಎಲ್ಲ ಶೋಧನೆಗಳ ಬೇರು ಇಲ್ಲೇ, ಭಾರತದಲ್ಲೇ ಇದೆ; ವಿಶೇಷವಾಗಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಇಲ್ಲಿಗೆ ಬರುವ ಮೊದಲೇ ಆ ಬೇರುಗಳು ಇಲ್ಲಿದ್ದವು ಎಂದು ವಾದಿಸಲಾಗುತ್ತಿದೆ. ಇದು ಭಾರತವನ್ನು ಹಿಂದುಗಳು ಮತ್ತು ಹಿಂದುಧರ್ಮದ ಜೊತೆಗೆ ಸಮೀಕರಿಸುವುದರ ಜೊತೆಜೊತೆಯಲ್ಲೇ ಸಾಗುತ್ತಿರುವಂತೆ ತೋರುತ್ತದೆ. ಕಳೆದ ಹಲವಾರು ದಶಕಗಳಲ್ಲಿ ವಿಜ್ಞಾನರಂಗದಲ್ಲಿ ಸಂಶೋಧನೆಗೆ ಉತ್ತಮ ಅಡಿಪಾಯ ಹಾಕಲಾಗಿದೆ. ಈ ಅಡಿಪಾಯವನ್ನೇ ಅಲುಗಾಡಿಸುವ ಪ್ರಯತ್ನವನ್ನು ವಿರೋಧಿಸಲು ವಿಜ್ಞಾನಿಗಳು ಮತ್ತು ಭಾರತೀಯ ಸಮಾಜ ಸಮರ್ಥವಾದೀತೇ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ. ವೈಚಾರಿಕ ಚಿಂತನೆ ಮತ್ತು ವಿಜ್ಞಾನದ ಸಾಧನೆಗಳಿಂದ ನಮ್ಮ ಮುಂದಿನ ತಲೆಮಾರುಗಳು ಪ್ರಯೋಜನ ಪಡೆಯಲು ಸಮರ್ಥವಾದಾವೇ?

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ