ಟ್ರಂಪ್ ಪುತ್ರನ ಮನೆಗೆ ನಿಗೂಢ ಬಿಳಿಹುಡಿ ಪ್ಯಾಕೆಟ್: ಸೊಸೆ ಆಸ್ಪತ್ರೆಗೆ ದಾಖಲು

Update: 2018-02-13 07:08 GMT

ವಾಷಿಂಗ್ಟನ್, ಫೆ.13: ನಿಗೂಢ ಬಿಳಿ ಹುಡಿ ಇದ್ದ ಪ್ಯಾಕೆಟ್ ಒಂದು ಪೋಸ್ಟ್ ಮೂಲಕ ಟ್ರಂಪ್ ಅವರ ಪುತ್ರನ ನ್ಯೂಯಾರ್ಕ್ ನಿವಾಸಕ್ಕೆ ತಲುಪಿದ್ದು ಅದನ್ನು ಪಡೆದುಕೊಂಡ ಟ್ರಂಪ್ ಅವರ ಸೊಸೆ ವೆನೆಸ್ಸಾ ಟ್ರಂಪ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ಬಿಳಿ ಹುಡಿಯಿದ್ದ ಪ್ಯಾಕೆಟ್ ಜೂನಿಯರ್ ಟ್ರಂಪ್ ಅವರಿಗೆಂದು ಬಂದಿತ್ತೆನ್ನಲಾಗಿದೆ. ಈ ಹುಡಿಯನ್ನು ಪರೀಕ್ಷಿಸಲಾಗಿದ್ದು, ಅದು ಅಪಾಯಕಾರಿಯಲ್ಲವೆಂದು ತಿಳಿದು ಬಂದಿದೆ ಎಂದು ಪೊಲೀಸ್ ವಕ್ತಾರೆಯೊಬ್ಬರು ತಿಳಿಸಿದ್ದಾರೆ.

ವೆನೆಸ್ಸಾ ಅವರನ್ನು ನ್ಯೂಯಾರ್ಕ್ ಪ್ರೆಸ್ಬಿಟೆರಿಯನ್ ವೀಲ್ ಕಾರ್ನೆಲ್ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿದ್ದು, ಪ್ಯಾಕೆಟ್ ನಲ್ಲಿದ್ದ ಹುಡಿ ಅಪಾಯಕಾರಿಯಾಗಿಲ್ಲದೇ ಇದ್ದ ಕಾರಣ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಟ್ರಂಪ್ ಕುಟುಂಬದ ರಿಯಲ್ ಎಸ್ಟೇಟ್ ಉದ್ಯಮವನ್ನು ಜನವರಿ 2017ರಲ್ಲಿ ಟ್ರಂಪ್ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ನಿರ್ವಹಿಸುತ್ತಿದ್ದಾರೆ.

ವೆನೆಸ್ಸಾ ಟ್ರಂಪ್ ಅವರು ಐವರು ಮಕ್ಕಳ ತಾಯಿಯಾಗಿದ್ದಾರೆ. ‘‘ವೆನೆಸ್ಸಾ ಮತ್ತು ನನ್ನ ಮಕ್ಕಳು ಈ ಭೀತಿ ಹುಟ್ಟಿಸುವಂತಹ ಸನ್ನಿವೇಶದ ಹೊರತಾಗಿಯೂ ಸುರಕ್ಷಿತರಾಗಿದ್ದಾರೆಂಬುದು ಸಮಾಧಾನಕರ. ಕೆಲ ವ್ಯಕ್ತಿಗಳು ತಮ್ಮ ವಿರೋಧವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿರುವುದು ಖೇದಕರ’’ ಎಂದು ಜೂನಿಯರ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News