ಮುದ್ರಣಗೊಂಡಿದ್ದರೂ ಆರ್‌ಬಿಐ ತಲುಪದ 23,000 ಕೋಟಿ ರೂ.ಗಳು

Update: 2018-02-13 18:40 GMT

ಮಾಹಿತಿ ಹಕ್ಕು ಹೋರಾಟಗಾರ ಮನೋರಂಜನ್ ರೋಯ್ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು ನವೆಂಬರ್ 8, 2016ರಂದು ನಡೆದ ಐತಿಹಾಸಿಕ ನೋಟು ಅಮಾನ್ಯೀಕರಣದ ಮೇಲೆ ಸಾಕ್ಟು ಬೆಳಕು ಚೆಲ್ಲುವ ನಿರೀಕ್ಷೆಯಿದೆ.

ಬೃಹತ್ ಪ್ರಮಾಣದಲ್ಲಿ ಭಾರತೀಯ ಕರೆನ್ಸಿ ನೋಟುಗಳು ನಾಪತ್ತೆಯಾಗಿರುವ ಅಥವಾ ಅಧಿಕವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನಾಧರಿಸಿ 2015ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗಿದೆ.

2000ರಿಂದ 2011ರ ಮಧ್ಯೆ ಆರ್‌ಬಿಐ ನಾಸಿಕ್, ದೇವಸ್ ಮತ್ತು ಮೈಸೂರಿನಲ್ಲಿರುವ ಮೂರು ಭದ್ರತಾ ಮುದ್ರಣ ಸಂಸ್ಥೆಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು ಪಡೆದುಕೊಂಡಿತ್ತು ಎಂಬುದು ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯಲ್ಲಿ ತಿಳಿದಿರುವುದಾಗಿ ರೋಯ್ ತಿಳಿಸಿದ್ದಾರೆ.

ಆದರೆ ಈ ಮುದ್ರಣ ಸಂಸ್ಥೆಗಳಲ್ಲಿ ಮುದ್ರಿಸಲಾಗಿರುವ ಕರೆನ್ಸಿ ನೋಟುಗಳ ಸಂಖ್ಯೆ ಮತ್ತು ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಮುದ್ರಣ ಸಂಸ್ಥೆಗಳು, ರೂ. 500 ಮುಖಬೆಲೆಯ 19,45,40,00,000 ನೋಟುಗಳನ್ನು ಮುದ್ರಿಸಿ ಆರ್‌ಬಿಐಗೆ ಕಳುಹಿಸಿರುವುದಾಗಿ ತಿಳಿಸಿದೆ. ಆದರೆ ಆರ್‌ಬಿಐ ತಾನು ಕೇವಲ 18,98,46,84,000 ನೋಟುಗಳನ್ನು ಮಾತ್ರ ಪಡೆದಿರುವುದಾಗಿ ತಿಳಿಸಿದೆ. ಅಂದರೆ 46,93,16,000 ನೋಟುಗಳು ಅಥವಾ 23,464 ಕೋಟಿ ರೂ. ಕಡಿಮೆ ಎಂದು ಮಾಹಿತಿಯಿಂದ ತಿಳಿದುಬರುತ್ತದೆ.

ಇದೇ ವೇಳೆ, ರೂ. 1000 ಮುಖಬೆಲೆಯ 4,44,13,00,000 ನೋಟುಗಳನ್ನು ಮುದ್ರಿಸಿರುವುದಾಗಿ ಮುದ್ರಣ ಸಂಸ್ಥೆಗಳು ತಿಳಿಸಿದ್ದರೂ ಆರ್‌ಬಿಐ ಅಂಕಿಅಂಶಗಳ ಪ್ರಕಾರ 4,45,30,00,000 ನೋಟುಗಳನ್ನು ಪಡೆದಿರುವುದಾಗಿ ತಿಳಿಸುತ್ತದೆ. ಅಂದರೆ 1,17,00,000 ನೋಟುಗಳು ಅಥವಾ 1,170 ಕೋಟಿ ರೂ. ಹೆಚ್ಚುವರಿಯಾಗಿದೆ ಎಂದು ಮಾಹಿತಿ ಹಕ್ಕಿನ ಮೂಲಕ ಪಡೆದ ಅಂಕಿಅಂಶಗಳು ಹೇಳುತ್ತವೆ ಎಂದು ರೋಯ್ ತಿಳಿಸಿದ್ದಾರೆ.

2000-2011ರ ಅವಧಿಗೆ ಪಡೆದ ಮಾಹಿತಿ ಹಕ್ಕು ಅಂಕಿಅಂಶಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿ. ರೂ. 500 ಮುಖಬೆಲೆಯ 13,35,60,00,000 ನೋಟುಗಳು ಮತ್ತು ರೂ. 1000 ಮುಖಬೆಲೆಯ 3,35,48,60,000 ನೋಟುಗಳನ್ನು ಆರ್‌ಬಿಐಗೆ ಕಳುಹಿಸಿರುವುದಾಗಿ ತಿಳಿಸಿದೆ. ಆದರೆ ಆರ್‌ಬಿಐ ಈ ನೋಟುಗಳನ್ನು ಪಡೆಯಲೇ ಇಲ್ಲ ಅಥವಾ ಈ ಬಗ್ಗೆ ಯಾವುೇ ವಿವರಗಳನ್ನು ಬಹಿರಂಗಪಡಿಸಿಲ್ಲ.

ವಿವಿಧ ಸಂಸ್ಥೆಗಳು ನೀಡಿರುವ ಭಿನ್ನ ಅಂಕಿಅಂಶಗಳ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸರಕಾರದ ಮೂರು ಜವಾಬ್ದಾರಿಯುತ ಸಂಸ್ಥೆಗಳು ಹೇಗೆ ಈ ರೀತಿ ವಿಭಿನ್ನ ಅಂಕಿಅಂಶಗಳನ್ನು ನೀಡಲು ಸಾಧ್ಯ? ಈ ಅವ್ಯವಹಾರದ ಹಿಂದೆ ಇರುವ ಅಪರಾಧಿಗಳಾದರೂ ಯಾರು? ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮುದ್ರಣಗೊಂಡಿರುವ ನೋಟುಗಳು ಹೋಗುವುದಾದರೂ ಎಲ್ಲಿಗೆ? ಈ ಎಲ್ಲಾ ಪ್ರಶ್ನೆಗಳಿಗೆ ತನ್ನ ಅರ್ಜಿಯ ವಿಚಾರಣೆಯ ಮೂಲಕ ಉತ್ತರ ದೊರೆಯಲಿದೆ ಎಂದು ರೋಯ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ರೋಯ್ ತಮ್ಮ ದಾವೆಯಲ್ಲಿ ಪ್ರಧಾನ ಮಂತ್ರಿ, ವಿತ್ತ ಸಚಿವರು ಮತ್ತು ಗೃಹ ವ್ಯವಹಾರಗಳ ಸಚಿವಾಲಯವನ್ನು ಹೆಸರಿಸಿದ್ದಾರೆ. ಈ ಬಗ್ಗೆ ನಡೆದ ಹಿಂದಿನ ವಿಚಾರಣೆಯ ವೇಳೆ ಅಂದಿನ ಅಡಿಶನಲ್ ಸಾಲಿಸಿಟರ್-ಜನರಲ್ ಆಫ್ ಇಂಡಿಯಾ ಅನಿಲ್ ಸಿಂಗ್ ಅವರು, ದಾವೆಯಿಂದ ಪ್ರಧಾನಿ, ವಿತ್ತ ಸಚಿವ ಹಾಗೂ ಸಚಿವಾಲಯದ ಹೆಸರನ್ನು ಕೈಬಿಡುವಂತೆ ಮನವಿ ಮಾಡಿದ್ದರು.

2016ರ ಆಗಸ್ಟ್ 23ರಂದು ನ್ಯಾಯಾಧೀಶ ವಿ.ಎಂ. ಕಾನಡೆ ಮತ್ತು ಸ್ವಪ್ನ ಎಸ್. ಜೋಶಿಯವರನ್ನೊಳಗೊಂಡ ಪೀಠವು ಸರಿಯಾದ ವಿಚಾರಣೆ ನಡೆಸದೆ ಈ ದಾವೆಯನ್ನು ರದ್ದುಗೊಳಿಸಿದ್ದರು. 2016ರ ಸೆಪ್ಟಂಬರ್ 22ರಂದು ರೋಯ್ ಪುನರ್‌ಪರಿಶೀಲನಾ ಮನವಿಯನ್ನು ಸಲ್ಲಿಸಿದ್ದು ಆಮೂಲಕ ಪ್ರಕರಣವು ಜೀವಂತವಾಗುಳಿಯಿತು. ಇದೀಗ ಈ ಪ್ರಕರಣ ಪುನರ್‌ಪರಿಶೀಲನೆ ಮನವಿಯ ವಿಚಾರಣೆ ನಡೆಯಲಿದೆ.

ದಾವೆಯನ್ನು ರದ್ದುಗೊಳಿಸಿದ 75 ದಿನಗಳ ನಂತರ ಪ್ರಧಾನಿ ಮೋದಿಯವರು ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಅಪವೌಲ್ಯಗೊಳಿಸಿ ಆದೇಶ ನೀಡಿದ್ದರು. ಕಪ್ಪುಹಣ, ಉಗ್ರವಾದದ ವಿರುದ್ಧ ಹೋರಾಟ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿತ್ತು. ಆದರೆ ಭಾರತೀಯ ಕರೆನ್ಸಿ ನೋಟುಗಳ ಬೃಹತ್ ಪ್ರಮಾಣದ ಅವ್ಯವಹಾರದ ಬಗ್ಗೆ ಯಾವುದೇ ಉಲ್ಲೇಖ ಾಡಲಿಲ್ಲ ಎಂದು ರೋಯ್ ತಿಳಿಸಿದ್ದಾರೆ.

Writer - ಎಸ್. ಎಂ.

contributor

Editor - ಎಸ್. ಎಂ.

contributor

Similar News

ಜಗದಗಲ
ಜಗ ದಗಲ