ಕಾಡ್ಗಿಚ್ಚೆಂಬ ರಾಜಕೀಯ

Update: 2018-02-14 04:26 GMT

ಕಳೆದ ವರ್ಷ ಕರ್ನಾಟಕದಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ಕಾಡುಗಳು ಬೆಂಕಿಗೆ ಬಲಿಯಾಗಿತ್ತು. ಬಂಡಿಪುರ, ನಾಗರಹೊಳೆ, ಚಿಕ್ಕಮಗಳೂರು ಕಾಡ್ಗಿಚ್ಚಿಗಾಗಿ ಸದಾ ಸುದ್ದಿಯಲ್ಲಿರುತ್ತದೆ. ನಾಗರಹೊಳೆ ಅಭಯಾರಣ್ಯದಲ್ಲಿ 1999ರಲ್ಲಿ ಎರಡು ಸಾವಿರಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಬೆಂಕಿಗಾಹುತಿಯಾಯಿತು. 2004ರಲ್ಲಿ 9,000ಕ್ಕೂ ಅಧಿಕ ಹೆಕ್ಟೇರ್, 2012ರಲ್ಲಿ 4000 ಹೆಕ್ಟೇರ್ ಅರಣ್ಯ ಬೂದಿಯಾಯಿತು. ಬಂಡಿಪುರದಲ್ಲಿ 2004ರಲ್ಲಿ ನಡೆದ ಅಗ್ನಿದುರಂತ ಮರೆಯಲಸಾಧ್ಯ. ಈ ಸಂದರ್ಭದಲ್ಲಿ 22 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಆಹುತಿಯಾಯಿತು. ಭದ್ರಾ ಅಭಯಾರಣ್ಯದಲ್ಲೂ ಈ ಕಾಡ್ಗಿಚ್ಚು ಪದೇ ಪದೇ ಸುದ್ದಿ ಮಾಡಿದೆ. ಅಪಾರ ಜೀವ ಸಂಕುಲವನ್ನು ಬಲಿ ತೆಗೆದುಕೊಂಡಿದೆ.

1999ರಿಂದ 2015ರವರೆಗೆ ಭದ್ರಾ ಅಭಯಾರಣ್ಯದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಬೆಂಕಿಗೆ ಬಲಿಯಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಅಗ್ನಿ ಅನಾಹುತದಿಂದ ಪ್ರತೀ ವರ್ಷ 60 ಕೋಟಿ ರೂಪಾಯಿ ವೌಲ್ಯದ ಮರಗಳು ನಾಶವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅಂದ ಹಾಗೆ ಇವುಗಳ ಜೊತೆಗೆ ನಾಶವಾಗುವ ಜೀವ ವೈವಿಧ್ಯಕ್ಕಂತೂ ಬೆಲೆ ಕಟ್ಟುವುದಕ್ಕೇ ಸಾಧ್ಯವಿಲ್ಲ. ಇದು ಕರ್ನಾಟಕಕ್ಕೆ ಸೀಮಿತವಾಗಿದ್ದರೆ, ಭಾರತದ ಹಿಮಾಲಯದ ತಪ್ಪಲು ಮತ್ತು ಈಶಾನ್ಯ ರಾಜ್ಯಗಳಲ್ಲಿ ಇದಕ್ಕಿಂತ ಭೀಕರವಾದ ಪರಿಸ್ಥಿತಿ ಇದೆ. ಭಾರತದಲ್ಲಿ ಅತೀ ಹೆಚ್ಚು ಕಾಡ್ಗಿಚ್ಚು ಸಂಭವಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಒಡಿಶಾ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಮೂರನೆಯ ಸ್ಥಾನದಲ್ಲಿ ಕೂತಿದೆ.

ಕಾಡ್ಗಿಚ್ಚುಗಳ ಬೆದರಿಕೆಯನ್ನು ಗಮನಕ್ಕೆ ತೆಗೆದುಕೊಂಡಿರುವ ಸರಕಾರವು ಇದೇ ಮೊದಲ ಬಾರಿಗೆ 2017ನೇ ಸಾಲಿನ ಅರಣ್ಯಗಳ ಸ್ಥಿತಿ ಕುರಿತು ವರದಿಯಲ್ಲಿ ಕಾಡ್ಗಿಚ್ಚುಗಳ ಕುರಿತು ಸಂಪೂರ್ಣ ದತ್ತಾಂಶಗಳನ್ನು ಪ್ರಕಟಿಸಿದೆ.2003-2016ರ ನಡುವಿನ 13 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಉಂಟಾದ ಕಾಡ್ಗಿಚ್ಚುಗಳ ಸಂಖ್ಯೆಯಲ್ಲಿ ಸುಮಾರು ಶೇ.38ರಷ್ಟು ಏರಿಕೆಯಾಗಿ ವಾರ್ಷಿಕ ನಾಶವಾಗುವ ಅರಣ್ಯಗಳ ವಿಸ್ತಾರ ಸರಾಸರಿ 24,550ರಿಂದ 33,664 ಹೆಕ್ಟೇರ್‌ಗೆ ತಲುಪಿದೆ. ಶೇ.95ಕ್ಕೂ ಹೆಚ್ಚಿನ ಕಾಡ್ಗಿಚ್ಚುಗಳಿಗೆ ಮಾನವರೇ ಕಾರಣರಾಗಿದ್ದಾರೆ ಎಂದು ಅರಣ್ಯಗಳ ಮಹಾ ನಿರ್ದೇಶಕ ಸಿದ್ಧಾಂತ ದಾಸ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕಾಡ್ಗಿಚ್ಚುಗಳಿಂದ ಭಾರತವು ಪ್ರತೀ ವರ್ಷ 550 ಕೋ.ರೂ. ನಷ್ಟವನ್ನು ಅನುಭವಿಸುತ್ತಿದೆ ಎಂದು ಸಚಿವಾಲಯವು ಅಂದಾಜಿಸಿದೆ.

ಸರಕಾರ ಇಲ್ಲಿ ನಷ್ಟವನ್ನು ಅಂದಾಜಿಸುವುದು ಬೆಲೆಬಾಳುವ ಮರಗಳು ಮತ್ತು ಅರಣ್ಯ ಇಲಾಖೆ ಅಧಿಕೃತವಾಗಿ ಗುರುತಿಸಿರುವ ವನ್ಯ ಜೀವಿಗಳ ಆಧಾರದಿಂದ. ಆದರೆ ಕಾಡಿನಲ್ಲಿ ಬದುಕುವ ಒಂದು ಜೀರುಂಡೆಯೂ ಈ ಜೀವವೈವಿಧ್ಯದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಕಾಡಿನ ಜೊತೆ ಜೊತೆಗೆ ಜೀವ ಸರಪಣಿಗಳು ಸಂಬಂಧ ಕಡಿದುಕೊಳ್ಳುತ್ತವೆ. ನಮ್ಮ ಪರಿಸರದ ಮೇಲೆ ಇದು ಬೀರುವ ಪರಿಣಾಮ ಸಣ್ಣದೇನೂ ಅಲ್ಲ. ದೇಶದಲ್ಲಿ ಕಾಡ್ಗಿಚ್ಚು ಹೆಚ್ಚುತ್ತಲೇ ಹೋಗುತ್ತಿದೆಯಾದರೂ ಈ ಬಗ್ಗೆ ಸರಕಾರ ಗಂಭೀರ ಕ್ರಮವನ್ನು ತೆಗೆದುಕೊಂಡೇ ಇಲ್ಲ. ಕಾಡ್ಗಿಚ್ಚು ಹರಡಿದಾಗ ಅರಣ್ಯದ ಮಧ್ಯ ಪ್ರವೇಶಿಸಿ ಬೆಂಕಿ ಆರಿಸಲು ಸಾಮರ್ಥ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಸರಕಾರ ಇನ್ನೂ ಆಸಕ್ತಿ ವಹಿಸಿಲ್ಲ. ಅರಣ್ಯ ಸಿಬ್ಬಂದಿ ಈ ಬೆಂಕಿಯ ಮುಂದೆ ಅಸಹಾಯಕರಾಗಿ ನಿಂತು ಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಕಾಡ್ಗಿಚ್ಚುಗಳ ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ಮೂರು ತಿಂಗಳಲ್ಲಿ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಸಚಿವಾಲಯಕ್ಕೆ ಸೂಚಿಸಿತ್ತಾದರೂ ಅಂತಹ ನೀತಿಯೊಂದನ್ನು ಈವರೆಗೆ ರೂಪಿಸಲಾಗಿಲ್ಲ.ಅಂದರೆ ಕಾಡಿನ ಬೆಂಕಿಯನ್ನು ಆರಿಸುವ ಇಚ್ಛಾಶಕ್ತಿಯೇ ನಮ್ಮ ಸರಕಾರಕ್ಕೆ ಇಲ್ಲವಾಗಿದೆ.

ಭಾರತದಲ್ಲಿ ಕಾಡ್ಗಿಚ್ಚು ಹಬ್ಬಲು ಪರಿಸರವನ್ನು ತಜ್ಞರು ಹೊಣೆ ಮಾಡುತ್ತಿದ್ದಾರೆ. ಕಾಡ್ಗಿಚ್ಚುಗಳು ಭಾರೀ ಪ್ರಮಾಣದಲ್ಲಿ ಅಂಗಾರಾಮ್ಲ ವಾಯುವನ್ನೂ ಬಿಡುಗಡೆ ಗೊಳಿಸುತ್ತಿದ್ದು, ಇದು ಭಾರತದ ಹಸಿರು ಮನೆ ಅನಿಲ ಸೂಸುವಿಕೆ ಗುರಿ ಸಾಧನೆಗೂ ಬೆದರಿಕೆ ಒಡ್ಡುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಅರಣ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಸಂಗ್ರಹ ಹೊಂದಿರುವಂತಾಗಲು ಅವುಗಳ ಗುಣಮಟ್ಟದಲ್ಲಿ ಸುಧಾರಣೆಯಾಗಬೇಕಿದೆ. ನಾವೀಗ ಅದನ್ನು ಮಾಡುತ್ತಿರುವ ವೇಗದಿಂದ ಪ್ಯಾರಿಸ್ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಗೂ ಕಾಡ್ಗಿಚ್ಚುಗಳಿಗೂ ಸಂಬಂಧವಿದೆ. ಅರಣ್ಯವು ಒಣಗಿದಷ್ಟೂ ಅದು ಕಾಡ್ಗಿಚ್ಚಿಗೆ ಗುರಿಯಾ ಗುವ ಸಾಧ್ಯತೆ ಹೆಚ್ಚು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಭಾರತದಲ್ಲಿ ಪ್ರಾಕೃತಿಕ ಕಿಚ್ಚಿಗಿಂತ ಕೃತಕ ಕಿಚ್ಚಿಗೆ ಕಾಡುಗಳು ಬಲಿಯಾಗಿರುವುದೇ ಹೆಚ್ಚು. ಕಾಡ್ಗಿಚ್ಚಿನ ಹಿಂದೆ ‘ಅಭಿವೃದ್ಧಿ ರಾಜಕಾರಣ’ವೊಂದು ತಳಕು ಹಾಕಿಕೊಂಡಿದೆ.

ಹಲವು ಸ್ಥಾಪಿತ ಹಿತಾಸಕ್ತಿಗಳಿಗೆ ಇಂತಹ ಕಾಡ್ಗಿಚ್ಚುಗಳ ಅಗತ್ಯವಿದೆ. ಆದುದರಿಂದ ಅವರು ಈ ಕಿಚ್ಚನ್ನು ಕೃತಕವಾಗಿ ಸೃಷ್ಟಿಸುತ್ತಿದ್ದಾರೆ ಎನ್ನುವುದು ಆದಿವಾಸಿ ಮುಖಂಡರ ಅನಿಸಿಕೆಯಾಗಿದೆ. ಅಕ್ರಮ ಗಣಿಗಾರಿಕಾ ಮಾಫಿಯಾಗಳು, ಬೃಹತ್ ಉದ್ದಿಮೆದಾರರು ಕಾಡಿನ ಮೇಲೆ ತಮ್ಮ ಹಿಡಿತ ಸಾಧಿಸಲು ಕಾಡ್ಗಿಚ್ಚನ್ನು ಬಳಸಿಕೊಳ್ಳುತ್ತಾರೆ. ಮೊದಲು ಬೆಂಕಿ ಹಚ್ಚಿ, ಬಳಿಕ ನಂದಿಸುವ ಮಾತನ್ನಾಡುತ್ತಾರೆ. ಆದಿವಾಸಿಗಳನ್ನು ಕಾಡಿನಿಂದ ಓಡಿಸುವುದಕ್ಕಾಗಿಯೂ ಕಾಡ್ಗಿಚ್ಚನ್ನು ನೆಪವಾಗಿ ಬಳಸುವುದಿದೆ. ಈಶಾನ್ಯ ಭಾಗದಲ್ಲಿ ಕಾಡ್ಕಿಚ್ಚು ಹೆಚ್ಚಾಗಲು ಸೇನೆ ಮತ್ತು ನಕ್ಸಲೀಯರ ನಡುವಿನ ತಿಕ್ಕಾಟವೂ ಒಂದು ಎನ್ನುವ ಅಂಶವನ್ನು ಗಮನಿಸಬೇಕು. ಬೃಹತ್ ಉದ್ಯಮಗಳನ್ನು ಸ್ಥಾಪಿಸುವುದಕ್ಕೆ, ಅಥವಾ ಗಣಿಗಾರಿಕೆಗಳನ್ನು ನಡೆಸುವುದಕ್ಕೆ ಕಾಡುಗಳನ್ನು ವಶಪಡಿಸಿಕೊಳ್ಳಲು ಕೆಲವೊಮ್ಮೆ ಉದ್ಯಮಿಗಳೇ ಸಂಬಂಧಪಟ್ಟವರನ್ನು ಮುಂದಿಟ್ಟು ಕಾಡಿಗೆ ಬೆಂಕಿ ಹಚ್ಚಿ, ಅದನ್ನು ನೈಸರ್ಗಿಕ ವಿಕೋಪ ಎಂದು ಹೇಳುವುದಿದೆ. ಕೆಲವೊಮ್ಮೆ ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಅರಣ್ಯಾಧಿಕಾರಿಗಳೇ ಕಾಡಿಗೆ ಬೆಂಕಿ ಹಚ್ಚಿದ ಉದಾಹರಣೆಗಳೂ ಇವೆ.

ಸ್ಥಳೀಯರೊಂದಿಗೆ ಅಕ್ರಮ ಮರ ಕಡಿಯಲು ಶಾಮೀಲಾಗಿ, ಮೇಲಧಿಕಾರಿಗಳಿಗೆ ಇದು ತಿಳಿದು ಅನಾಹುತವಾಗಬಾರದು ಎಂದು ರಾತ್ರೋ ರಾತ್ರಿ ಅಧಿಕಾರಿಗಳೇ ಕಾಡಿಗೆ ಬೆಂಕಿ ಹಚ್ಚಿ ಸಾಕ್ಷಗಳನ್ನು ಅಳಿಸಿ ಹಾಕುತ್ತಾರೆ. ಹೀಗೆ ಈ ದೇಶದ ಕಾಡಿಗೆ ಬೆಂಕಿಗಿಂತ ಅದನ್ನು ಸುತ್ತಿಕೊಂಡಿರುವ ರಾಜಕೀಯವೇ ಹೆಚ್ಚು ಅಪಾಯಕಾರಿಯಾಗಿದೆ. ತಾವೇ ಬೆಂಕಿ ಹಚ್ಚಿ ತಾವೇ ಆರಿಸುವ ನಾಟಕ ಮಾಡಿದರೆ, ಈ ದೇಶ ಇನ್ನೊಂದು 25 ವರ್ಷಗಳಲ್ಲಿ ತನ್ನ ಶೇ. 25ರಷ್ಟು ಕಾಡನ್ನು ಕಳೆದುಕೊಳ್ಳಬೇಕಾಗುತ್ತದೆ. ಅದು ಸಹಜವಾಗಿಯೇ ಪರಿಸರದ ಮೇಲೆ ಮತ್ತು ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಆದುದರಿಂದ ಕೋಟೆ ಪೂರ್ಣ ಸೂರೆ ಹೋಗುವ ಮೊದಲೇ ದಿಡ್ಡಿ ಬಾಗಿಲನ್ನು ಹಾಕಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News