ನಿಮಗೆ ಗೊತ್ತೇ...? ಇದು ಹೃದಯಾಘಾತವನ್ನು ತಡೆಯುತ್ತದೆ

Update: 2018-02-14 10:33 GMT

ಆಸ್ಪಿರಿನ್ ಅತ್ಯಂತ ಹಳೆಯ ಔಷಧಿಗಳಲ್ಲೊಂದಾಗಿದ್ದು, ನೋವನ್ನು ನಿವಾರಿಸುವ ಮತ್ತು ಹೃದಯಾಘಾತವನ್ನು ತಡೆಯುವ ತನ್ನ ವಿಶಿಷ್ಟ ಗುಣದಿಂದಾಗಿ ಹೆಸರುವಾಸಿಯಾಗಿದೆ. ಪ್ರತಿದಿನ ಸಣ್ಣ ಪ್ರಮಾಣದಲ್ಲಿ ಆಸ್ಪಿರಿನ್ ಸೇವನೆಯು ಹೃದಯಾಘಾತವನ್ನು ತಡೆಯುವಲ್ಲಿ ನೆರವಾಗುತ್ತದೆ ಎನ್ನುವುದು ಈಗಾಗಲೇ ಸಿದ್ಧಗೊಂಡಿದೆ.

ಹೃದಯಾಘಾತದ ಪ್ರಾಥಮಿಕ ತಡೆಯುವಿಕೆಯ ಪರಿಕಲ್ಪನೆ

  ಹೃದಯಾಘಾತದ ನೈಸರ್ಗಿಕ ಕಾರಣಗಳು ಮತ್ತು ಅಪಾಯದ ಅಂಶಗಳನ್ನು ಗುರಿಯಾಗಿಸಿಕೊಂಡು ಹೃದ್ರೋಗದ ಸಾಧ್ಯತೆಯನ್ನು ದೂರ ಮಾಡುವುದು ಪ್ರಾಥಮಿಕ ತಡೆಯುವಿಕೆಯ ಉದ್ದೇಶವಾಗಿದೆ. ಕೆಲವರಲ್ಲಿ ಮೊದಲ ಹೃದಯಾಘಾತ ಅಥವಾ ಪಾರ್ಶ್ವವಾಯುವನ್ನು ತಡೆಯುವಲ್ಲಿ ಆಸ್ಪಿರಿನ್ ನೆರವಾಗಬಹುದು. ಅದು ಅಪಧಮನಿ ಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ತನ್ಮೂಲಕ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ದೂರ ಮಾಡುತ್ತದೆ. ಹೃದ್ರೋಗದ ಅಪಾಯವನ್ನೆ ದುರಿಸುತ್ತಿರುವ ರೋಗಿಗಳು ಆಸ್ಪಿರಿನ್ ಪಾತ್ರದ ಬಗ್ಗೆ ತಮ್ಮ ವೈದ್ಯರೊಂದಿಗೆ ಅಗತ್ಯವಾಗಿ ಚರ್ಚಿಸಬೇಕು.

ಭಾರತದಲ್ಲಿ ಸಾವುಗಳಿಗೆ ಪ್ರಮುಖ ಕಾರಣ ಹೃದ್ರೋಗಗಳು

ವಿಶ್ವದಲ್ಲಿ ಹೃದ್ರೋಗಗಳಿಂದ ಅತ್ಯಂತ ಹೆಚ್ಚಿನ ಸಾವುಗಳು ಭಾರತದಲ್ಲಿ ಉಂಟಾಗುತ್ತಿವೆ. ಜಾಗತಿಕವಾಗಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 235 ಸಾವುಗಳು ಹೃದ್ರೋಗಗಳಿಂದ ಸಂಭವಿಸುತ್ತಿದ್ದರೆ, ನಮ್ಮ ದೇಶದಲ್ಲಿ 272 ಜೀವಗಳು ಬಲಿಯಾಗುತ್ತಿವೆ. ಕಳೆದ 60 ವರ್ಷಗಳಲ್ಲಿ ಹೃದ್ರೋಗಿಗಳ ಸಂಖ್ಯೆ ನಗರ ಜನಸಂಖ್ಯೆಯ ಶೇ.1ರಿಂದ ಶೇ.10ಕ್ಕೆ ಏರಿಕೆಯಾಗಿದ್ದರೆ, ಗ್ರಾಮೀಣ ಭಾರತದಲ್ಲಿ ಶೇ.1ರಿಂದ ಶೇ.6ಕ್ಕೆ ಹೆಚ್ಚಳವಾಗಿದೆ. ನಮ್ಮ ದೇಶದಲ್ಲಿ ಶೇ.52ರಷ್ಟು ಹೃದ್ರೋಗ ಸಾವುಗಳು 70 ವರ್ಷ ಪ್ರಾಯಕ್ಕೆ ಮೊದಲೇ ಸಂಭವಿಸುತ್ತಿವೆ.

ಹೃದ್ರೋಗಗಳನ್ನು ತಡೆಯಲು ಏನು ಮಾಡಬಹುದು?

ಶೇ.80ರಷ್ಟು ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳನ್ನು ತಡೆಯಬಹುದಾಗಿದೆ. ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಸೇವನೆ, ಧೂಮ್ರಪಾನ, ತಂಬಾಕು ಸೇವನೆ ಮತ್ತು ಮದ್ಯಪಾನಗಳ ವರ್ಜನೆಯಂತಹ ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ಹೃದ್ರೋಗಗಳು ಮತ್ತು ಪಾರ್ಶ್ವವಾಯುವಿನ ಪ್ರಾಥಮಿಕ ತಡೆ ಸಾಧ್ಯ.

49ರಿಂದ 79 ವರ್ಷ ವಯೋಮಾನದವರು ಮತ್ತು ಹೃದ್ರೋಗಗಳ ಅತ್ಯಂತ ಹೆಚ್ಚಿನ ಅಪಾಯ ಸಾಧ್ಯತೆಯಿರುವವರು ವೈದ್ಯರ ಸಲಹೆಯ ಮೇರೆಗೆ ಆಸ್ಪಿರಿನ್, ಸ್ಟಾಟಿನ್ ಮತ್ತು ರಕ್ತದೊತ್ತಡವನ್ನು ತಗ್ಗಿಸುವ ಔಷಧಿಗಳನ್ನು ನಿಯಮಿತವಾಗಿ ಸೇವಿಸಿದರೆ ಅವಧಿಗೆ ಮೊದಲೇ ಸಾವುಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಬಹುದು.

ತಂಬಾಕು ಉತ್ಪನ್ನಗಳ ವರ್ಜನೆ, ಹೆಚ್ಚಿನ ಹಣ್ಣು ಮತ್ತು ತರಕಾರಿಗಳ ಸೇವನೆ, ಉಪ್ಪು, ಸಕ್ಕರೆ ಮತ್ತು ಹೆಚ್ಚು ಕೊಬ್ಬಿರುವ ಆಹಾರಗಳ ಸೇವನೆಯ ಮೆಲೆ ಮಿತಿ, ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ದೇಹತೂಕವನ್ನು ಕಾಯ್ದುಕೊಳ್ಳುವಿಕೆ, ಹಾನಿಕಾರಕ ಮದ್ಯ ಸೇವಿಸದಿರುವುದು, ವೈದ್ಯರ ಶಿಫಾರಸಿನಂತೆ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ ಔಷಧಿಗಳ ಸೇವನೆಯ ಮೂಲಕ ಹೃದ್ರೋಗಗಳ ಅಪಾಯದಿಂದ ಪಾರಾಗಬಹುದಾಗಿದೆ.

ಹೃದ್ರೋಗಗಳ ಪ್ರಾಥಮಿಕ ತಡೆಗೆ ಆಸ್ಪಿರಿನ್ ಬಳಕೆ

ಪ್ರತಿದಿನ 75 ಮಿ.ಗ್ರಾಂ ಆಸ್ಪಿರಿನ್ ಸೇವನೆಯು ಹೃದ್ರೋಗಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅದು ಮಾರಣಾಂತಿಕ ಹೃದಯಾಘಾತಗಳ ಸಂಖ್ಯೆಯನ್ನು ಶೇ.23ರಷ್ಟು ತಗ್ಗಿಸುತ್ತದೆ. ತೀವ್ರ ಹ್ರದ್ರೋಗಗಳ ಸಾಧ್ಯತೆಯನ್ನು ಶೇ.12ರಷ್ಟು ಕಡಿಮೆ ಮಾಡುತ್ತದೆ.

ಆಸ್ಪಿರಿನ್ ಬಳಕೆಗೆ ಮಾರ್ಗಸೂಚಿಗಳು

ಹೃದಯಾಘಾತದ ಹೆಚ್ಚಿನ ಅಪಾಯವನ್ನೆದುರಿಸುತ್ತಿರುವ ವ್ಯಕ್ತಿಗಳು ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ಆಸ್ಪಿರಿನ್ ಸೇವಿಸಬೇಕು ಮತ್ತು ಹೃದಯಾಘಾತದಿಂದ ಬದುಕುಳಿ ದಿರುವವರು ನಿತ್ಯವೂ ನಿಯಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಶಿಫಾರಸು ಮಾಡಿದೆ.

ಹೃದ್ರೋಗಗಳ ಹೆಚ್ಚಿನ ಅಪಾಯವಿರುವ ಟೈಪ್-1 ಅಥವಾ ಟೈಪ್-2 ಮಧುಮೇಹ ರೋಗಿಗಳು ಪ್ರತಿದಿನ 75-163 ಮಿ.ಗ್ರಾಂ.ಆಸ್ಪಿರಿನ್ ಸೇವಿಸಬೇಕು ಎಂದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಶಿಫಾರಸು ಮಾಡಿದೆ.

ಆದರೆ ಈ ಶಿಫಾರಸುಗಳನ್ನು ಅನುಸರಿಸುವ ಮುನ್ನ ತಜ್ಞವೈದ್ಯರ ಸಲಹೆಗಳನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News