ಏಷ್ಯನ್ ಗೇಮ್ಸ್ ಪದಕ ಜಯಿಸುವೆ: ಸಾನಿಯಾ ವಿಶ್ವಾಸ

Update: 2018-02-14 18:35 GMT

ಹೊಸದಿಲ್ಲಿ, ಫೆ.14: ಗಾಯದ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಚೇತರಿಸಿಕೊಂಡರೆ ಈವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಮತ್ತೊಂದು ಪದಕ ಜಯಿಸುವೆ ಎಂದು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ 2006ರ ಬಳಿಕ ಪ್ರತಿಯೊಂದು ಏಷ್ಯಾ ಗೇಮ್ಸ್‌ನಲ್ಲಿ ಪದಕ ಗೆಲ್ಲುತ್ತಾ ಬಂದಿದ್ದಾರೆ. ಈ ವರ್ಷ ಇಂಡೋನೇಷ್ಯಾದಲ್ಲಿ ನಡೆಯಲಿರುವ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದಾಗಿ ಹೇಳಿದ್ದಾರೆ.

ಮಂಡಿನೋವಿನಿಂದ ಬಳಲುತ್ತಿರುವ 31ರ ಹರೆಯದ ಸಾನಿಯಾ ಕಳೆದ ವರ್ಷದ ಅಕ್ಟೋಬರ್‌ನಿಂದ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದಾರೆ. ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿರುವ ಭಾರತದ ಮೊದಲ ಆಟಗಾರ್ತಿ ಸಾನಿಯಾ ಇದೀಗ 14ನೇ ರ್ಯಾಂಕಿಗೆ ಕುಸಿದಿದ್ದಾರೆ.

‘‘ಒಂದು ವೇಳೆ ನನ್ನ ಗಾಯ ವಾಸಿಯಾದರೆ ಆಗಸ್ಟ್‌ನಲ್ಲಿ ಆರಂಭವಾಗಲಿರುವ ಗೇಮ್ಸ್‌ನಲ್ಲಿ ಭಾಗವಹಿಸುವ ಗುರಿ ಹಾಕಿಕೊಂಡಿದ್ದೇನೆ. ಇನ್ನು ಕೆಲವೇ ತಿಂಗಳಲ್ಲಿ ಟೆನಿಸ್ ಅಂಗಣಕ್ಕೆ ವಾಪಸಾಗುವೆ. ಏಷ್ಯನ್ ಗೇಮ್ಸ್‌ನಲ್ಲಿ ನಾನು ಪ್ರತಿಬಾರಿಯೂ ಪದಕ ಗೆದ್ದುಕೊಂಡಿರುವೆ. ಈ ಬಾರಿಯೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೇನೆ’’ ಎಂದರು.

  2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾಡ್‌ನಲ್ಲಿ ಭಾಗವಹಿಸಿದ್ದ ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಹಾಗೂ ಡಬಲ್ಸ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. 2005ರಲ್ಲಿ ಡಬ್ಲುಟಿಎ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅದೇ ವರ್ಷ ಯುಎಸ್ ಓಪನ್‌ನಲ್ಲಿ 4ನೇ ಸುತ್ತು ತಲುಪಿದ್ದರು. 2007ರಲ್ಲಿ ವಿಶ್ವ ಶ್ರೇಷ್ಠ 30 ಟೆನಿಸ್ ಆಟಗಾರ್ತಿಯರ ಪೈಕಿ ಒಬ್ಬರೆನಿಸಿಕೊಂಡಿದ್ದರು.

ಮಣಿಕಟ್ಟು ನೋವಿನಿಂದ ಸಾನಿಯಾರ ಸಿಂಗಲ್ಸ್ ಕನಸು ಕೊನೆಗೊಂಡಿತ್ತು. ಡಬಲ್ಸ್‌ನತ್ತ ಹೆಚ್ಚು ಗಮನ ನೀಡಲಾರಂಭಿಸಿದರು. ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಮೂರು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದರು. 2016ರಲ್ಲಿ ಹಿಂಗಿಸ್‌ರಿಂದ ಬೇರ್ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News