ಕೋಮುಗಲಭೆ: ಕರ್ನಾಟಕಕ್ಕೆ ಕಳಂಕ

Update: 2018-02-15 04:33 GMT

ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಕರೆಯುತ್ತಿದ್ದರು. ನೂರಾರು ವರ್ಷಗಳಿಂದ ಈ ನೆಲದಲ್ಲಿ ವಿವಿಧ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ, ಸಮುದಾಯಗಳ ಜನರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸೌಹಾರ್ದದ ಹೆಮ್ಮೆಯ ತಾಣ ಈಗ ಕೋಮು ಹಿಂಸಾಚಾರಕ್ಕೆ ಕುಖ್ಯಾತಿ ಪಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ. ಕೇಂದ್ರ ಸರಕಾರ ಇತ್ತೀಚೆಗೆ ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳು ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಉತ್ತರಪ್ರದೇಶದ ಬಳಿಕ ಎರಡನೇ ಸ್ಥಾನದಲ್ಲಿದೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2017ರಲ್ಲಿ ರಾಜ್ಯದಲ್ಲಿ ಕೋಮುಗಲಭೆಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂಬುದು ಸಮಾಧಾನಕರ ಸಂಗತಿ.

ಸಂಸತ್ತಿನಲ್ಲಿ ಕೇಂದ್ರ ಗೃಹಖಾತೆಯ ರಾಜ್ಯಸಚಿವ ಹನ್ಸ್‌ರಾಜ್ ಅಹಿರ್ ನೀಡಿದ ಮಾಹಿತಿಯನ್ವಯ 2017ರಲ್ಲಿ ದೇಶದಲ್ಲಿ ಒಟ್ಟಾರೆ 822 ಕೋಮುಗಲಭೆಗಳು ನಡೆದಿವೆ. ಇದರಲ್ಲಿ 111 ಮಂದಿ ಸಾವಿಗೀಡಾಗಿದ್ದಾರೆ. 2,384 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ದೇಶದಲ್ಲಿ 2017ರಲ್ಲಿ ಕೋಮು ಹಿಂಸಾಚಾರದ ಪ್ರಕರಣಗಳು ಶೇ.15ರಷ್ಟು ಹೆಚ್ಚಳವಾಗಿರುವುದು ನಿಜ. ಆದರೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ 2017ರಲ್ಲಿ ರಾಜ್ಯದಲ್ಲಿ ಕೋಮುಗಲಭೆಗಳ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ 2015ರಲ್ಲಿ 105, 2016ರಲ್ಲಿ 101 ಹಾಗೂ 2017ರಲ್ಲಿ 100 ಕೋಮುಹಿಂಸಾಚಾರ ಪ್ರಕರಣಗಳು ನಡೆದಿವೆ. ಇತ್ತೀಚೆಗೆ ರಾಜ್ಯ ವಿಧಾನಪರಿಷತ್‌ನಲ್ಲಿ ಈ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಗೃಹ ಸಚಿವರು ಕೆಲ ಅಂಕಿಅಂಶಗಳನ್ನು ನೀಡಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ 8,885 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ವರೆಗೆ 7,759 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ. ಅಂಕಿಅಂಶಗಳು ಏನನ್ನೇ ಹೇಳಲಿ ಕರ್ನಾಟಕದ ಬದುಕು ಹಿಂದಿನಂತೆ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿಲ್ಲ. ಕುವೆಂಪು ವರ್ಣಿಸುತ್ತಿದ್ದ ಸರ್ವ ಜನಾಂಗದ ಶಾಂತಿಯ ತೋಟವಾಗಿ ಈ ನಾಡು ಉಳಿದಿದೆಯೇ ಎಂಬ ಸಂದೇಹ ಬರುವಂತೆ ಆತಂಕದ ಘಟನೆಗಳು ನಡೆಯುತ್ತಿವೆ.

ಇಡೀ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಇಲ್ಲವಾದರೂ ಕೆಲ ಜಿಲ್ಲೆಗಳಲ್ಲಿ ಭಯಾನಕ ಪರಿಸ್ಥಿತಿ ಉಂಟಾಗಿರುವುದು ನಿಜ. ಒಂದು ಕಾಲದಲ್ಲಿ ಸೌಹಾರ್ದದ ತಾಣವಾಗಿದ್ದ ಕನ್ನಡನಾಡು ಹೀಗಾಗಲು ಏನು ಕಾರಣ ಎಂದು ಅವಲೋಕಿಸುತ್ತಾ ಹೊರಟರೆ ಇದರ ಹಿಂದಿರುವ ಧರ್ಮದ ಮುಖವಾಡ ಧರಿಸಿದ ಪಾತಕಿ ಶಕ್ತಿಗಳು ಗೋಚರಿಸುತ್ತವೆ. ಕರ್ನಾಟಕವನ್ನು ದಕ್ಷಿಣ ಭಾರತದ ಅಯೋಧ್ಯೆಯನ್ನಾಗಿ ಮಾಡುವುದಾಗಿ ಕೇಂದ್ರ ಸಚಿವ ಅನಂತಕುಮಾರ್ 10 ವರ್ಷಗಳ ಹಿಂದೆಯೇ ಹೇಳಿದ್ದರು. ಅದು ಬರೀ ಅವರ ಹೇಳಿಕೆಯಾಗಿರಲಿಲ್ಲ. ಸಂಘಪರಿವಾರದ ಕಾರ್ಯಸೂಚಿಯ ಭಾಗವಾಗಿ ಕರ್ನಾಟಕದಲ್ಲಿ ಕೋಮು ಆಧಾರದಲ್ಲಿ ಜನರನ್ನು ವಿಭಜನೆ ಮಾಡುವ ಚಟುವಟಿಕೆಗಳು 80ರ ದಶಕದ ಕೊನೆಯಿಂದಲೇ ಆರಂಭವಾದವು. ಮಲೆನಾಡಿನ ಸೌಹಾರ್ದದ ತಾಣವಾಗಿದ್ದ ಬಾಬಾ ಬುಡಾನ್‌ಗಿರಿಯ ಮೇಲೆ ಕಣ್ಣು ಹಾಕಿದ ಕೋಮುವಾದಿ ಶಕ್ತಿಗಳು ಅಲ್ಲಿ ದತ್ತಪೀಠ ಇದೆ. ಅದಕ್ಕಾಗಿ ಅದನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಬ್ರಾಹ್ಮಣ ಅರ್ಚಕರನ್ನು ಅಲ್ಲಿ ನೇಮಕ ಮಾಡಬೇಕೆಂದು 90ರ ದಶಕದ ಆರಂಭದಲ್ಲಿ ಸಂಘಪರಿವಾರದಿಂದ ಕೋಮುಭಾವನೆಯನ್ನು ಕೆರಳಿಸುವ ಚಟುವಟಿಕೆಗಳು ಆರಂಭವಾದವು.

ಆಗಿನಿಂದ ಪ್ರತೀ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಬಂದರೆ ಇಡೀ ಮಲೆನಾಡಿನ ಜನ ಆತಂಕದಿಂದ ದಿನವನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಯಿತು. ಇದರ ರಾಜಕೀಯ ಲಾಭ ಬಿಜೆಪಿಗೆ ತಟ್ಟಿ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ, ಶೃಂಗೇರಿಯಲ್ಲಿ ಜೀವರಾಜ್ ಸೇರಿದಂತೆ ಮಲೆನಾಡಿನ ಕೆಲ ವಿಧಾನಸಭಾ ಕ್ಷೇತ್ರಗಳನ್ನು ಅದು ಗೆದ್ದುಕೊಂಡಿತು. ಒಂದೆಡೆ ಮಲೆನಾಡಿನ ಮೇಲೆ ಕಣ್ಣು ಹಾಕಿದ ಕೋಮುವಾದಿ ಶಕ್ತಿಗಳು ಇನ್ನೊಂದು ಕಡೆ ಕರಾವಳಿಯಲ್ಲಿ ಕೂಡಾ ತಮ್ಮ ಚಟುವಟಿಕೆಗಳನ್ನು ಆರಂಭಿಸಿದವು. ಸಂಘಪರಿವಾರದ ಷಡ್ಯಂತ್ರದ ಭಾಗವಾಗಿ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸುವ ರಹಸ್ಯ ಕಾರ್ಯಾಚರಣೆ ಆರಂಭವಾಯಿತು. ಮೊದಲು ದನಗಳ ರಕ್ಷಣೆಯ ಹೆಸರಿನಲ್ಲಿ ಆ ನಂತರ ಲವ್ ಜಿಹಾದ್ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡ ಫ್ಯಾಶಿಸ್ಟ್ ಶಕ್ತಿಗಳು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರುಬಿಟ್ಟವು. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಗಳು ನಡೆಯತೊಡಗಿದವು. ಕೊಲೆ ಘಟನೆಗಳೂ ನಡೆದವು. ದಕ್ಷಿಣ ಕನ್ನಡವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಲು ಇಷ್ಟು ಮಾತ್ರ ಸಾಲದೆಂದು ತಿಳಿದುಕೊಂಡ ಈ ಶಕ್ತಿಗಳು ಅನೈತಿಕ ಪೊಲೀಸ್‌ಗಿರಿಯನ್ನು ಹುಟ್ಟುಹಾಕಿದವು.

ವಿಭಿನ್ನ ಧರ್ಮದ ಯುವಕ ಮತ್ತು ಯುವತಿ ಜೊತೆಯಾಗಿ ಓಡಾಡಿದರೆ, ಮಾತನಾಡಿದರೆ ಅವರ ಮೇಲೆ ಹಲ್ಲೆಗಳು ನಡೆಯತೊಡಗಿದವು. ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮಂಗಳೂರು ಮತ್ತು ಉಡುಪಿಗಳಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದು ಅನೇಕ ಕಡೆ ಶಿಲುಬೆಗಳನ್ನೂ ಭಗ್ನಗೊಳಿಸಲಾಯಿತು. ಇಂತಹದ್ದೇ ಚಟುವಟಿಕೆಗಳು ಇಷ್ಟು ತೀವ್ರ ಸ್ವರೂಪವಾಗಿ ಇಲ್ಲದಿದ್ದರೂ ಬೇರೆ ರೀತಿಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದವು. ಇದ್ಯಾವುದೂ ಆಕಸ್ಮಿಕವಾಗಿ ಆವೇಶದಲ್ಲಿ ನಡೆದ ಘಟನೆಗಳಲ್ಲ. ದಕ್ಷಿಣಭಾರತದಲ್ಲಿ ನೆಲೆಯೂರಲು ಆರೆಸ್ಸೆಸ್ ರೂಪಿಸಿದ ರಹಸ್ಯ ಕಾರ್ಯತಂತ್ರ ಇದು. ಉತ್ತರಭಾರತದಂತೆ ದಕ್ಷಿಣಭಾರತದಲ್ಲಿ ನೆಲೆಯೂರುವುದು ಅಷ್ಟು ಸುಲಭವಲ್ಲ ಎಂದು ಸಂಘಪರಿವಾರಕ್ಕೆ ಗೊತ್ತಿದೆ. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳು, ತಮಿಳುನಾಡಿನಲ್ಲಿ ದ್ರಾವಿಡಪಕ್ಷಗಳು ಹಾಗೂ ಆಂಧ್ರಪ್ರದೇಶದಲ್ಲಿ ತೆಲುಗು ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿರುವುದರಿಂದ ಕರ್ನಾಟಕದಲ್ಲಿ ಮಾತ್ರ ನೆಲೆಯೂರಲು ಸಾಧ್ಯವೆಂದು ಈ ರಾಜ್ಯವನ್ನು ಆಯ್ಕೆ ಮಾಡಿಕೊಂಡ ಸಂಘಪರಿವಾರ ಅದಕ್ಕೆ ತಕ್ಕುದಾದ ಕಾರ್ಯಸೂಚಿಯನ್ನು ಸಿದ್ಧಗೊಳಿಸಿತು.

ನಿರ್ದಿಷ್ಟವಾಗಿ ದಕ್ಷಿಣಕನ್ನಡದಂತಹ ಕೆಲ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ರಹಸ್ಯ ಕಾರ್ಯಾಚರಣೆ ಆರಂಭಿಸಿತು. ಆರೆಸ್ಸೆಸ್‌ನ ಜಾಲ ಎಷ್ಟು ವ್ಯಾಪಕವಾಗಿದೆಯೆಂದರೆ ಕರಾವಳಿಯ ಜಿಲ್ಲೆಗಳಲ್ಲಿ ಧರ್ಮದ ಹೆಸರಿನಲ್ಲಿ ಅದು ನಡೆಸುವ ಚಟುವಟಿಕೆಗಳನ್ನು ನಿಯಂತ್ರಿಸಲು ಸರಕಾರದಿಂದಲೂ ಸಾಧ್ಯವಾಗುತ್ತಿಲ್ಲ. ಈ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಜನ ಆರೆಸ್ಸೆಸ್ ಕಾರ್ಯಕರ್ತರು ಇದ್ದಾರೆಂದು ವಿಶ್ವಹಿಂದೂ ಪರಿಷತ್‌ನ ಪದಾಧಿಕಾರಿಗಳು ಬಹಿರಂಗವಾಗಿ ಹೇಳುತ್ತಾರೆ. ಅಂತಲೇ ಸಂಘಪರಿವಾರ ನಡೆಸುವ ಪುಂಡಾಟಿಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಅವರು ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ದಕ್ಷಿಣ ಕನ್ನಡದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಂಘಪರಿವಾರದ ನಿಯಂತ್ರಣದಲ್ಲಿ ಇದೆಯೇನೋ ಎಂಬ ಸಂದೇಹ ಪದೇ ಪದೇ ಉಂಟಾಗುತ್ತದೆ.

ಕರ್ನಾಟಕ ಕೋಮುಗಲಭೆಯಲ್ಲಿ ಇಷ್ಟು ಕುಖ್ಯಾತಿ ಗಳಿಸಲು ಕಾರಣ ಸಂಘಪರಿವಾರ ಮಾತ್ರವಲ್ಲ ಈ ರಾಜ್ಯವನ್ನು ಆಳಿಕೊಂಡು ಬಂದ ಸರಕಾರಗಳ ಆಡಳಿತ ವೈಫಲ್ಯ ಕೂಡಾ ಕಾರಣವಾಗಿದೆ. ವಿಶ್ವಹಿಂದೂ ಪರಿಷತ್ ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತಿದ್ದ ಸಮಾವೇಶಗಳನ್ನು ಮತ್ತು ಅಲ್ಲಿ ಮಾಡುತ್ತಿದ್ದ ಪ್ರಚೋದನಾಕಾರಿ ಭಾಷಣಗಳನ್ನು ಸರಕಾರ ನಿಯಂತ್ರಿಸಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ವಿಷಾದದ ಸಂಗತಿಯೆಂದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ನಾಯಕರು ಮತ್ತು ಕಾರ್ಯಕರ್ತರೂ ವಿಶ್ವಹಿಂದೂ ಪರಿಷತ್‌ನ ಈ ಸಮಾಜೋತ್ಸವದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮೇಲ್ನೋಟಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವ ದೃಢವಾದ ಸಂಕಲ್ಪ ಇತ್ತೀಚೆಗೆ ಮಾಡಿದ್ದರೂ ಕಾಂಗ್ರೆಸ್ ಪಕ್ಷದ ಕೆಳಹಂತದ ಕೆಲ ಕಾರ್ಯಕರ್ತರು ಇಂದಿಗೂ ಕೋಮುವಾದಿ ಶಕ್ತಿಗಳಿಗೆ ಪರೋಕ್ಷವಾಗಿ ನೆರವು ನೀಡುತ್ತಲೇ ಇದ್ದಾರೆ. ಅಷ್ಟೇ ಅಲ್ಲದೇ ಕೆಲ ಮಠಾಧೀಶರೂ ಇಂತಹ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಸರಿಪಡಿಸಿಕೊಳ್ಳಬೇಕಾಗಿದೆ. ಈಗಂತೂ ಕರಾವಳಿ ಬಿಟ್ಟರೆ ರಾಜ್ಯದ ಉಳಿದ ಜಿಲ್ಲೆಗಳ ಪರಿಸ್ಥಿತಿ ಅಷ್ಟೊಂದು ಆತಂಕದಿಂದ ಕೂಡಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News