ಫ್ಲೋರಿಡಾ ಶಾಲೆಯಲ್ಲಿ ಶೂಟೌಟ್: 17 ಮಂದಿ ಬಲಿ

Update: 2018-02-15 15:04 GMT

ವಾಶಿಂಗ್ಟನ್, ಫೆ.15: ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಶೂಟಿಂಗ್ ಪ್ರಕರಣವೆಂದು ಹೇಳಲಾಗುತ್ತಿರುವ ಘಟನೆಯಲ್ಲಿ ಉಚ್ಛಾಟಿತ ಹಳೆ ವಿದ್ಯಾರ್ಥಿಯೊಬ್ಬ ಅತ್ಯಾಧುನಿಕ ಬಂಧೂಕಿನಿಂದ ಯದ್ವಾತದ್ವಾ ಗುಂಡು ಹಾರಿಸಿದ ಪರಿಣಾಮವಾಗಿ 17 ಮಂದಿ ಬಲಿಯಾಗಿ ಹಲವಾರು ಮಂದಿ ಗಾಯಗೊಂಡ ಘಟನೆ ಫ್ಲೊರಿಡಾ ಪ್ರೌಢ ಶಾಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಂಡಿಯನ್-ಅಮೆರಿಕನ್ ವಿದ್ಯಾರ್ಥಿ ಕೂಡಾ ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಗೆ ಸಂಬಂಧಿಸಿದಂತೆ ಅಶಿಸ್ತಿನ ಕಾರಣಕ್ಕಾಗಿ ಉಚ್ಛಾಟನೆಗೊಂಡಿದ್ದ ಪಾರ್ಕ್‌ಲ್ಯಾಂಡ್‌ನ ಮರ್ಜೊರಿ ಸ್ಟೋನ್‌ಮ್ಯಾನ್ ಡಾಗ್ಲಸ್ ಪ್ರೌಢ ಶಾಲೆಯ ವಿದ್ಯಾರ್ಥಿ 19ರ ಹರೆಯದ ನಿಕೊಲಸ್ ಕ್ರುಝ್‌ನನ್ನು ಬಂಧಿಸಲಾಗಿದೆ.

ಫ್ಲೋರಿಡಾ ಪ್ರೌಢ ಶಾಲೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು ಘಟನೆಯಲ್ಲಿ ಸಮುದಾಯದ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ತನ್ನ ಪ್ರೇಯಸಿಯ ಹೊಸ ಗೆಳೆಯನ ಜೊತೆ ಜಗಳ ಮಾಡಿದ ಕಾರಣಕ್ಕಾಗಿ ಕ್ರುಝ್‌ನನ್ನು ಶಾಲೆಯಿಂದ ಉಚ್ಛಾಟಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ಕ್ರುಝ್ ಅವುಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಕ್ರುಝ್ ಬಳಿ ಹಲವು ರೈಫಲ್‌ಗಳಿದ್ದವು. ಜೊತೆಗೆ ಆತನ ಬಳಿ ಗ್ಯಾಸ್ ಮಾಸ್ಕ್ ಮತ್ತು ಹೊಗೆ ಗ್ರೆನೇಡ್‌ಗಳೂ ಇದ್ದವು. ಗುಂಡಿನ ದಾಳಿಗೆ ಹೆಚ್ಚು ಜನರು ಬಲಿಯಾಗಬೇಕು ಎಂಬ ಉದ್ದೇಶದಿಂದ ಕ್ರುಝ್ ದಾಳಿಗೂ ಮುನ್ನ ಅಗ್ನಿದುರಂತ ಸೂಚನೆ ನೀಡುವ ಅಲಾರ್ಮನ್ನು ಒತ್ತಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಬರುವಂತೆ ಮಾಡಿದ್ದ. ಆದರೆ ಅದೇ ದಿನ ಶಾಲೆಯಲ್ಲಿ ಅಗ್ನಿದುರಂತ ನಡೆದಾಗ ಏನು ಮಾಡಬೇಕು ಎಂಬ ಬಗ್ಗೆ ಕಾರ್ಯಾಗಾರ ನಡೆದಿದ್ದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಅದು ಸುಳ್ಳು ಅಲಾರ್ಮ್ ಎಂದು ಸುಮ್ಮನಾಗಿದ್ದರು ಎಂದು ಮಾಧ್ಯಮಗಳು ತಿಳಿಸಿವೆ.

ಶಾಲೆಯ ಹೊರಗೆ ಗುಂಡಿನ ದಾಳಿ ಆರಂಭಿಸಿದ ಕ್ರುಝ್ ನಂತರ ತರಗತಿಯ ಒಳಗೆ ಪ್ರವೇಶಿಸಿ ಗುಂಡು ಹಾರಿಸಿದ್ದ. ಇದರ ಪರಿಣಾಮವಾಗಿ 12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ ಎಂದು ವರದಿ ತಿಳಿಸಿದೆ.

ಘಟನೆಯ ತನಿಖೆಯ ನಡೆಸಲು ಸ್ಥಳೀಯ ಅಧಿಕಾರಿಗಳ ಜೊತೆ ಎಫ್‌ಬಿಐ ಕೈಜೋಡಿಸಿದೆ. ಈ ಘಟನೆಯಲ್ಲಿ ಆರೋಪಿ ಒಬ್ಬನೇ ಗುಂಡಿನ ದಾಳಿ ನಡೆಸಿದ್ದಾನೆ. ಆತನ ಜೊತೆ ಸಹಚರರು ಇದ್ದ ಬಗ್ಗೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ತನಿಖಾ ತಂಡ ತಿಳಿಸಿದೆ.

ಟ್ರಂಪ್ ಸಂತಾಪ:

ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ಅತ್ಯಂತ ಹೀನಾಯ ಕೃತ್ಯವಾಗಿದೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ದೇವರು ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಸುರಕ್ಷಿತ ಪಟ್ಟಣದಲ್ಲಿ ನಡೆದ ಘಟನೆ:

31,000 ಜನಸಂಖ್ಯೆಯುಳ್ಳ ಪಾರ್ಕ್‌ಲ್ಯಾಂಡ್ ಅನ್ನುಕಳೆದ ವರ್ಷ ಫ್ಲೋರಿಡಾದ ಅತ್ಯಂತ ಸುರಕ್ಷಿತ ಪಟ್ಟಣ ಎಂದು ವಿಶ್ಲೇಷಿಸಲಾಗಿತ್ತು. ಈ ದಾಳಿಯು, 2012ರಲ್ಲಿ ಕನೆಕ್ಟಿಕಟ್‌ನ ಸ್ಯಾಂಡಿ ಹುಕ್ ಶಾಲೆಯಲ್ಲಿ 26 ಜನರನ್ನು ಬಲಿಪಡೆದುಕೊಂಡ ಶೂಟಿಂಗ್ ಪ್ರಕರಣದ ನಂತರ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಪ್ರತಿದಿನ 46 ಮಕ್ಕಳು ಗುಂಡಿಗೆ ಬಲಿ;

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಅಮೆರಿಕನ್ ಕಾಂಗ್ರೆಸ್‌ನ ಡೊನಾಲ್ಡ್ ಎಂ. ಪೇಯ್ನ್, ಅಮೆರಿಕದಲ್ಲಿ ಪ್ರತಿದಿನ 46 ಮಕ್ಕಳು ಗುಂಡಿನ ದಾಳಿಗೆ ಸಾವನ್ನಪ್ಪುತ್ತಿದ್ದಾರೆ. ಜಗತ್ತಿನ ಇತರ ಯಾವುದೇ ಹೆಚ್ಚು ಆದಾಯ ಹೊಂದಿರುವ ದೇಶದಲ್ಲಿ ಇಷ್ಟು ಮಕ್ಕಳ ಸಾವು ಸಂಭವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಜಗತ್ತನ್ನು ಮಕ್ಕಳಿಗೆ ಸುರಕ್ಷಿತ ತಾಣವನ್ನಾಗಿ ಮಾಡಲು ಯುಎಸ್ ಕಾಂಗ್ರೆಸ್‌ನ ಸದಸ್ಯರು ತಮ್ಮ ಅಧಿಕಾರವನ್ನು ಬಳಸುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News