ದಕ್ಷಿಣ ಆಫ್ರಿಕದ ಅಧ್ಯಕ್ಷ ಜಾಕಬ್ ಝುಮಾ ರಾಜೀನಾಮೆ

Update: 2018-02-15 04:54 GMT

ಜೋಹಾನ್ಸ್‌ಬರ್ಗ್, ಫೆ.14: ಆಡಳಿತರೂಢ ಆಫ್ರಿಕ ನ್ಯಾಶನಲ್ ಕಾಂಗ್ರೆಸ್(ಎಎನ್‌ಸಿ)ಅಧಿಕಾರ ತ್ಯಜಿಸುವಂತೆ 48 ಗಂಟೆಗಳ ಗಡುವು ವಿಧಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕದ ಅಧ್ಯಕ್ಷ ಹುದ್ದೆಗೆ ಜಾಕಬ್ ಝುಮಾ ರಾಜೀನಾಮೆ ಸಲ್ಲಿಸಿದ್ದಾರೆ.

75ರ ಹರೆಯದ ಝುಮಾ 9 ವರ್ಷ ಅಧಿಕಾರದಲ್ಲಿದ್ದಾಗ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರು. ಬುಧವಾರ 30 ನಿಮಿಷಗಳ ಕಾಲ ವಿದಾಯದ ಭಾಷಣ ಮಾಡಿದ ಝುಮಾ,‘‘ ತನ್ನನ್ನು ಅಧಿಕಾರದಿಂದ ಕೆಳಗಿಳಿಸುತ್ತಿರುವ ಎಎನ್‌ಸಿ ನಾಯಕತ್ವದ ನಿರ್ಧಾರವನ್ನು ನಾನು ಒಪ್ಪಲಾರೆ. ನಾನು ಯಾವಾಗಲೂ ಎಎನ್‌ಸಿಯ ಶಿಸ್ತಿನ ಸದಸ್ಯನಾಗಿದ್ದೆ. ಆದರೆ, ಸರಕಾರದ ಆದೇಶವನ್ನು ಪಾಲಿಸುವೆ. ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ’’ ಎಂದು ಹೇಳಿದ್ದಾರೆ.

ಎಎನ್‌ಸಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉಪಾಧ್ಯಕ್ಷ ಸಿರಿಲ್ ರಾಮಾಫೊಸಾರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಮಂಗಳವಾರ ಝುಮಾಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಯುವಂತೆ ಸೂಚಿಸಿತ್ತು. ಬುಧವಾರ ತನಕ ಝುಮಾ ರಾಜೀನಾಮೆ ನೀಡಿರಲಿಲ್ಲ. ಸಂಸತ್ತಿನಲ್ಲಿ ವಿಪಕ್ಷಗಳ ಬೆಂಬಲದಿಂದ ಅವಿಶ್ವಾಸ ಗೊತ್ತುವಳಿ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂದು ಸರಕಾರ ಝುಮಾಗೆ ಎಚ್ಚರಿಕೆ ನೀಡಿತ್ತು.

‘‘ನನಗೆ ಅವಿಶ್ವಾಸ ಗೊತ್ತುವಳಿ ಎದುರಿಸುವ ಭಯ ಎದುರಾಗಿದೆ. ..ಇದರಿಂದ ನನ್ನ ಹೆಸರಿನಲ್ಲಿ ಎಎನ್‌ಸಿ ವಿಭಜನೆಯಾಗಬಾರದು’’ ಎಂದು ಝುಮಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News