ನಕಲಿ ನೋಟುಗಳನ್ನು ಗುರುತಿಸುವಲ್ಲಿ ನೆರವಾಗುವ ಈ ಆ್ಯಪ್ ಬಗ್ಗೆ ನಿಮಗೆ ಗೊತ್ತೇ?

Update: 2018-02-15 11:20 GMT

ಇಂದು ದೊಡ್ಡ ಮುಖಬೆಲೆಯ ನೋಟು ಕೈಯಲ್ಲಿ ಬಂದಾಗಲೆಲ್ಲ ಇದು ನಕಲಿಯಾಗಿ ರಬಹುದೇ ಎಂಬ ಅನುಮಾನ ಹೆಚ್ಚಿನವರನ್ನು ಕಾಡುವುದು ಸಾಮಾನ್ಯವಾಗಿದೆ. ನಕಲಿ ನೋಟುಗಳು ಬಹುದೊಡ್ಡ ಸಮಸ್ಯೆಯಾಗಿದ್ದು, ಅವು ಚಲಾವಣೆಯಲ್ಲಿರುವ ಕುರಿತು ಸುದ್ದಿಗಳನ್ನು ನಾವು ಓದುತ್ತಲೇ ಇರುತ್ತೇವೆ. ಈಗ ನಕಲಿ ನೋಟುಗಳ ಬಗ್ಗೆ ತಿಳಿದುಕೊಳ್ಳಲು ‘ಚಕ್‌ಫೇಕ್(Chkfake)’ ಆ್ಯಪ್ ನಿಮಗೆ ನೆರವಾಗಬಲ್ಲುದು.

ಈ ಮೊಬೈಲ್ ಆ್ಯಪ್ ಯಾವುದು ಅಸಲಿ, ಯಾವುದು ನಕಲಿ ನೋಟು ಎನ್ನುವುದನ್ನು ನಿಮಗೆ ತಿಳಿಸುತ್ತದೆ. ಜಾಗತಿಕ ನೋಟುಗಳ ಋುಜುತ್ವ ಪರೀಕ್ಷೆಗಾಗಿಯೇ ಈ ಆ್ಯಪ್‌ನ್ನು ಅಭಿವೃದ್ಧಿಗೊಳಿಸಲಾಗಿದೆ. ಇದು ಜಗತ್ತಿನಲ್ಲಿ ಇಂತಹ ಏಕೈಕ ಆ್ಯಪ್ ಆಗಿದೆ. ನಮ್ಮ ಆರ್‌ಬಿಐನಂತೆ ಹೆಚ್ಚುಕಡಿಮೆ ಎಲ್ಲ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಹೊಸದಾಗಿ ಕರೆನ್ಸಿ ನೋಟುಗಳನ್ನು ಬಿಡುಗಡೆಗೊಳಿಸಿದಾಗ ಅದರಲ್ಲಿ ನೂತನ ಭದ್ರತಾ ಅಂಶಗಳನ್ನು ಅಳವಡಿಸಿರುತ್ತವೆ. ಇವುಗಳನ್ನು ನಕಲು ಮಾಡುವುದು ಖೋಟಾನೋಟು ಖದೀಮರಿಗೆ ಸುಲಭವಲ್ಲ, ಹಾಗೆಯೇ ಬಳಕೆದಾರರಿಗೂ ಇವುಗಳನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಹೀಗಾಗಿ ಕರೆನ್ಸಿ ನೋಟುಗಳಲ್ಲಿನ ಭದ್ರತಾ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಚಕ್‌ಫೇಕ್ ಆ್ಯಪ್ ನೋಟುಗಳಲ್ಲಿಯ ಭದ್ರತಾ ಲಕ್ಷಣಗಳನ್ನು ‘ಸರ್ಚ್-ಸಿಲೆಕ್ಟ್-ವೆರಿಫೈ’ ಈ ಮೂರು ಸರಳ ಹೆಜ್ಜೆಗಳ ಮೂಲಕ ಗುರುತಿಸಿ ಅವು ಅಸಲಿಯೇ ನಕಲಿಯೇ ಎನ್ನವುದನ್ನು ಖಚಿತಪಡಿಸುತ್ತದೆ.

ಬಳಕೆದಾರರು ಈ ಆ್ಯಪ್ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ತಮ್ಮ ಕರೆನ್ಸಿ ನೋಟಿಗಾಗಿ ಹುಡುಕಬೇಕು ಮತ್ತು ಅದರಲ್ಲಿಯ ಭದ್ರತಾ ಲಕ್ಷಣಗಳನ್ನು ಗುರುತಿಸಲು ಆ್ಯಪ್ ನೆರವಾಗುತ್ತದೆ.

ಇದು ಉಚಿತ ಆ್ಯಪ್ ಆಗಿದ್ದು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಅದನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಲಾಗುತ್ತದೆ.

ನೋಟುಗಳನ್ನು ಪರೀಕ್ಷಿಸುವುದು ಹೇಗೆ?

http://www.chkfake.com/ ಮೊದಲು ವೆಬ್‌ಸೈಟ್‌ಗೆ ಭೇಟಿ ನೀಡಿ ಚಕ್‌ಫೇಕ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ನಿಮಗೆ ಬೇಕಾದ ಕರೆನ್ಸಿಯನ್ನು ಸರ್ಚ್ ಮಾಡಿ ಅದನ್ನು ಕನ್ಫರ್ಮ್ ಮಾಡಿ.

ಈಗ ವೆರಿಫಿಕೇಷನ್ ಆರಂಭಿಸಿ. ನಿಮ್ಮ ಕೈಯಲ್ಲಿರುವ ನೋಟಿನಲ್ಲಿಯ ವಿವಿಧ ಭದ್ರತಾ ಲಕ್ಷಣಗಳನ್ನು ಖಚಿತಪಡಿಸಿಕೊಳ್ಳಲು ಸರಳ ಟೆಕ್ಸ್ಟ್ ಮತ್ತು ವಿಜುವಲ್ ಸೂಚನೆಗಳನ್ನು ಅನುಸರಿಸಿ.

ಈಗ ನಿಮ್ಮ ಪರಿಶೀಲನೆಯ ವಿವರಗಳನ್ನು ಆ್ಯಪ್‌ಗೆ ಒದಗಿಸಿದರೆ ಅದು ನೋಟು ನಕಲಿಯೇ ಅಸಲಿಯೇ ಎನ್ನುವುದನ್ನು ಖಚಿತಪಡಿಸುತ್ತದೆ.

ಚಕ್‌ಫೇಕ್ ತಂಡವು ವಿಶ್ವದ ಪ್ರಮುಖ ನಕಲಿ ನೋಟು ನಿಗ್ರಹ ತಂತ್ರಜ್ಞಾನ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಅವು ಅಭಿವೃದ್ಧಿಗೊಳಿಸುವ ನೂತನ ತಂತ್ರಜ್ಞಾನಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳುತ್ತಿರುತ್ತದೆ ಮತ್ತು ಪ್ರತಿ ತಿಂಗಳು ಹೊಸ ಹೊಸ ಪಾಲುದಾರರನ್ನು ಸೇರಿಸಿಕೊಳ್ಳುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News