ಆಯುಷ್ಮಾನ್ ಭಾರತ್ ಯೋಜನೆಯಿಂದ ಆರೋಗ್ಯಕ್ಷೇತ್ರದಲ್ಲಿ ಮಾದರಿ ಮಾರ್ಪಾಡು: ಮೋದಿ

Update: 2018-02-15 15:30 GMT

ಇಟಾನಗರ, ಫೆ.15: ದೇಶದಾದ್ಯಂತದ ಸುಮಾರು 50 ಕೋಟಿ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಲ್ಲಿಸುವ ಉದ್ದೇಶದಿಂದ ‘ಆಯುಷ್ಮಾನ್ ಭಾರತ್’ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವದ ಅತ್ಯಂತ ಬೃಹತ್ ಪ್ರಮಾಣದ ಸರಕಾರಿ ಅನುದಾನಿತ ಆರೋಗ್ಯರಕ್ಷಣೆ ಕಾರ್ಯಕ್ರಮ ಎಂದು ಹೇಳಲಾಗಿರುವ ಈ ಯೋಜನೆಯಿಂದ ಆರೋಗ್ಯಕ್ಷೇತ್ರದಲ್ಲಿ ಮಾದರಿ ಬದಲಾವಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಅವರು ಅರುಣಾಚಲಪ್ರದೇಶದ ರಾಜಧಾನಿ ಇಟಾನಗರದಲ್ಲಿ ಟೋಮೊ ರಿಬಾ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಗಾಂಧಿಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.

ನೂತನ ಆರೋಗ್ಯ ಯೋಜನೆಯನ್ನು ರೂಪಿಸಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಆಕರ್ಷಿಸುವಂತೆ ಅವರು ರಾಜ್ಯ ಸರಕಾರಗಳಿಗೆ ಕರೆ ನೀಡಿದರು. 2018-19ರ ಬಜೆಟ್‌ನಲ್ಲಿ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ವಿತ್ತಸಚಿವ ಅರುಣ್ ಜೇಟ್ಲಿ ಘೋಷಿಸಿದ್ದರು. ದಿಲ್ಲಿ- ನಹಾರ್ಲಗನ್ ಎಕ್ಸ್‌ಪ್ರೆಸ್ ರೈಲಿಗೆ ‘ಅರುಣಾಚಲ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡಲಾಗುವುದು ಹಾಗೂ ದಿಲ್ಲಿ- ಅರುಣಾಚಲ ಪ್ರದೇಶದ ನಡುವಿನ ಈ ರೈಲಿನ ಸಂಚಾರವನ್ನು ವಾರಕ್ಕೆ ಎರಡು ಬಾರಿಗೆ ವಿಸ್ತರಿಸಲಾಗುವುದು. ಈ ರೈಲು ರಾಜ್ಯದ ಜನತೆಯನ್ನು ದೇಶದ ಮುಖ್ಯಭೂಮಿಗೆ ಸಂಪರ್ಕಿಸುತ್ತದೆ ಎಂದು ಬುಡಕಟ್ಟು ಜನರ ಸಾಂಪ್ರದಾಯಿಕ ದಿರಿಸು ತೊಟ್ಟು ಗಮನ ಸೆಳೆಯುತ್ತಿದ್ದ ಪ್ರಧಾನಿ ಮೋದಿ ಹೇಳಿದರು.

ಆಧಾರ್ ಮೂಲಕ ಸರಕಾರದ ಸುಮಾರು 400 ಯೋಜನೆಗಳ ನೆರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವುದರಿಂದ ಕೇಂದ್ರ ಸರಕಾರ 54,000 ಕೋಟಿ ರೂ. ಉಳಿತಾಯ ಮಾಡಿದೆ . ನೇರವಾಗಿ ಬ್ಯಾಂಕ್‌ಗೆ ವರ್ಗಾಯಿಸುವ ಯೋಜನೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಪ್ರಧಾನಿ ತಿಳಿಸಿದರು. ಬಳಿಕ ಪ್ರಧಾನಿಯವರು ದೋರ್ಜಿ ಖಂಡು ಸಮಾವೇಶ ಕೇಂದ್ರದ ನಾಮಫಲಕ ಅನಾವರಣಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News