ವಿಜಯ್ ಮಲ್ಯಗೆ ಪ್ರತಿವಾರಕ್ಕೆ 16 ಲಕ್ಷ ರೂ.!

Update: 2018-02-15 16:21 GMT

 ಲಂಡನ್, ಫೆ. 15: ಭಾರತದ ಬ್ಯಾಂಕ್‌ಗಳಿಗೆ ಸುಮಾರು 10,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ ಮಲ್ಯಗೆ ಪ್ರತಿ ವಾರ 18,000 ಪೌಂಡ್ (ಸುಮಾರು 16.20 ಲಕ್ಷ ರೂಪಾಯಿ) ಭತ್ತೆ ನೀಡುವಂತೆ ಬ್ರಿಟನ್ ಹೈಕೋರ್ಟ್ ಆದೇಶಿಸಿದೆ.

ಇದು ಈ ಹಿಂದೆ ಆತನಿಗೆ ಸಿಗುತ್ತಿದ್ದ ಭತ್ತೆಗಿಂತ 3 ಪಟ್ಟು ಅಧಿಕವಾಗಿದೆ.

ವಿವಿಧ ದೇಶಗಳಲ್ಲಿ ಇರುವ ವಿಜಯ ಮಲ್ಯನ ಸುಮಾರು 1.5 ಬಿಲಿಯ ಡಾಲರ್ (ಸುಮಾರು 9,600 ಕೋಟಿ ರೂಪಾಯಿ) ಆಸ್ತಿಯನ್ನು ಕಳೆದ ವರ್ಷ ಮುಟ್ಟುಗೋಲು ಹಾಕಲಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜೀವನ ನಿರ್ವಹಣೆ ವೆಚ್ಚವನ್ನು ನೀಡುವಂತೆ ಕೋರಿ ಮಲ್ಯನ ವಕೀಲರು ನ್ಯಾಯಾಲಯಕ್ಕೆ ಹೋಗಿದ್ದರು.

ಮಲ್ಯನ ‘ಸಾಮಾನ್ಯ ಜೀವನ ನಿರ್ವಹಣೆ ಭತ್ತೆ’ಯನ್ನು ವಾರಕ್ಕೆ ಗರಿಷ್ಠ 18,325 ಪೌಂಡ್‌ಗೆ ಹೆಚ್ಚಿಸಬಹುದಾಗಿದೆ ಎಂಬುದಾಗಿ ಜನವರಿ 30ರಂದು ನೀಡಿದ ಆದೇಶದಲ್ಲಿ ನ್ಯಾಯಾಧೀಶ ರಾಬಿನ್ ನೋಲ್ಸ್ ಹೇಳಿದ್ದಾರೆ.

 ಕಳೆದ ವರ್ಷ ಕರ್ನಾಟಕದ ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಮಲ್ಯನಿಗೆ ವಾರಕ್ಕೆ 5,000 ಪೌಂಡ್ ಜೀವನ ನಿರ್ವಹಣೆ ಭತ್ತೆ (ಸುಮಾರು 4.50 ಲಕ್ಷ ರೂಪಾಯಿ) ನೀಡಲು ಆರಂಭದಲ್ಲಿ ಇದೇ ನ್ಯಾಯಾಲಯ ಅನುಮತಿ ನೀಡಿತ್ತು. ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಹಾಲಿ ಮೊತ್ತವು ಗಮನಾರ್ಹ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News