ನಾಗಲ್ಯಾಂಡ್ ಕಾಂಗ್ರೆಸ್‌ಗೆ ಆರ್ಥಿಕ ಮುಗ್ಗಟ್ಟು !

Update: 2018-02-16 04:30 GMT

ಕೋಹಿಮಾ, ಫೆ. 16: ನಾಗಾಲ್ಯಾಂಡ್ ವಿಧಾನಸಭೆಗೆ ಈ ತಿಂಗಳ 27ರಂದು ನಡೆಯುವ ಚುನಾವಣೆಯ ಕಣದಿಂದ ಕಾಂಗ್ರೆಸ್ ಪಕ್ಷ ಐವರು ಅಭ್ಯರ್ಥಿ ಗಳನ್ನು ವಾಪಾಸು ಕರೆಸಿಕೊಂಡಿದೆ. ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯ 18 ಸ್ಥಾನಗಳಿಗಷ್ಟೇ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.

ಪಕ್ಷ ಫೆಬ್ರವರಿ 6ರಂದು 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಲಿಮಾವತಿ ಜಮೀರ್, ಹೊಬೆಟೊ ಕಿಬಾ, ಶಮಿ ಅಂಗ್, ಚೋಕ್ಪಾ ಕೊನ್ಯಕ್ ಮತ್ತು ಐಮಂಗ್ ಲಮ್ ಅವರ ನಾಮಪತ್ರಗಳನ್ನು ಪಾವಾಸು ಪಡೆದಿದೆ. "ಹಣಕಾಸು ಸಂಪನ್ಮೂಲದ ಕೊರತೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

"ಕಾಂಗ್ರೆಸ್ ಇಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಆದ್ದರಿಂದ ಸಂಪನ್ಮೂಲವನ್ನು ಇಲ್ಲಿಗೆ ಹರಿಸುವುದರಲ್ಲಿ ಅರ್ಥವಿಲ್ಲ. ಈಶಾನ್ಯ ರಾಜ್ಯಗಳ ಪ್ರಧಾನ ಕಾರ್ಯದರ್ಶಿ ಸಿ.ಪಿ.ಜೋಶಿಯವರು ಈ ಭಾಗದಲ್ಲಿ ಪಕ್ಷದ ವ್ಯವಹಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೊಡ್ಡ ಪ್ರಮಾಣದ ಹಣಕಾಸು ಮುಗ್ಗಟ್ಟಿನಿಂದಾಗಿ ಕೇವಲ 23 ಸ್ಥಾನಕ್ಕೆ ಸ್ಪರ್ಧಿಸಲು ಆರಂಭದಲ್ಲೇ ನಿರ್ಧರಿಸಲಾಗಿತ್ತು ಎಂದು ಪಕ್ಷದ ನಾಗಾಲ್ಯಾಂಡ್ ಘಟಕದ ಅಧ್ಯಕ್ಷ ಕೆವ್ ಖಾಪ್ ಥೆರಿ ಒಪ್ಪಿಕೊಂಡಿದ್ದಾರೆ. ಎಐಸಿಸಿ ಸಮಿತಿ ನಮಗೆ ಸಂಪನ್ಮೂಲ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಸಿ.ಪಿ.ಜೋಶಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ವಿರೋಧ ಪಕ್ಷವಾಗಿರುವ ನಾವು ಸಾಕಷ್ಟು ಸಂಪನ್ಮೂಲವಿಲ್ಲದೇ ಭ್ರಷ್ಟ ಸರ್ಕಾರವನ್ನು ಎದುರಿಸುವುದು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News