ಮುಸ್ಲಿಂ ದೇಶಗಳ ಮೇಲೆ ಹೇರಿದ ನಿಷೇಧ 'ಅಸಾಂವಿಧಾನಿಕ' ಎಂದ ಫೆಡರಲ್ ಕೋರ್ಟ್

Update: 2018-02-16 17:08 GMT

ರಿಚ್‌ಮಂಡ್ (ಅಮೆರಿಕ), ಫೆ. 16: ಪ್ರಮುಖವಾಗಿ ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರಜೆಗಳ ಅಮೆರಿಕ ಪ್ರಯಾಣ ನಿಷೇಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿರುವ ಆದೇಶ ಅಸಾಂವಿಧಾನಿಕವಾಗಿದೆ, ಯಾಕೆಂದರೆ ಅದು ಧರ್ಮದ ಕಾರಣಕ್ಕಾಗಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಫೆಡರಲ್ ಮೇಲ್ಮನವಿ ನ್ಯಾಯಾಲಯವೊಂದು ಗುರುವಾರ ತೀರ್ಪು ನೀಡಿದೆ.

 ತಾನು ಟ್ರಂಪ್ ಹಾಗೂ ಅವರ ಆಡಳಿತದ ಇತರ ಅಧಿಕಾರಿಗಳು ನೀಡಿರುವ ಹೇಳಿಕೆಗಳನ್ನು ಹಾಗೂ ನಿಷೇಧದ ವಿವರಗಳನ್ನು ಪರಿಶೀಲಿಸಿದ್ದೇನೆ ಹಾಗೂ ಈ ನಿಷೇಧವು ಇಸ್ಲಾಮ್ ವೈರತ್ವದ ಕಾರಣಕ್ಕಾಗಿ ಅಸಾಂವಿಧಾನಿಕವಾಗಿದೆ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅಮೆರಿಕದ ಜಾರ್ಜಿಯ ರಾಜ್ಯದ ರಿಚ್‌ಮಂಡ್‌ನ 4ನೆ ಅಮೆರಿಕ ಮೇಲ್ಮನವಿ ಸರ್ಕೀಟ್ ನ್ಯಾಯಾಲಯವು 9-4ರ ಬಹುಮತದ ತೀರ್ಪಿನಲ್ಲಿ ಹೇಳಿದೆ.

ಚಾಡ್, ಇರಾನ್, ಲಿಬಿಯ, ಸೊಮಾಲಿಯ, ಸಿರಿಯ ಮತ್ತು ಯಮನ್ ದೇಶಗಳ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡುವುದನ್ನು ಅಮೆರಿಕದ ಅಧ್ಯಕ್ಷರು ತನ್ನ ಆದೇಶದ ಮೂಲಕ ನಿಷೇಧಿಸಿದ್ದರು.

ಅಮೆರಿಕದ ಪ್ರಜೆಗಳೊಂದಿಗೆ ನೈಜ ಸಂಬಂಧ ಹೊಂದಿರುವ ಈ ದೇಶಗಳ ಜನರ ವಿರುದ್ಧ ಪ್ರಯಾಣ ನಿಷೇಧ ಹೇರುವ ಆದೇಶದ ಜಾರಿಗೆ ಮೇರಿಲ್ಯಾಂಡ್‌ನ ಫೆಡರಲ್ ನ್ಯಾಯಾಧೀಶರೊಬ್ಬರು ನೀಡಿರುವ ತಡೆಯಾಜ್ಞೆಯನ್ನು ಈ ನ್ಯಾಯಾಲಯ ಎತ್ತಿ ಹಿಡಿದಿದೆ.

ನಿರ್ದಿಷ್ಟ ದೇಶಗಳ ಜನರು ಅಮೆರಿಕಕ್ಕೆ ಪ್ರಯಾಣಿಸುವುದನ್ನು ನಿಷೇಧಿಸುವ ಆದೇಶದ ಬಗ್ಗೆ ಎಪ್ರಿಲ್‌ನಲ್ಲಿ ವಿಚಾರಣೆ ನಡೆಸಲು ಅಮೆರಿಕದ ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿದೆ.

 ಅದೇ ವೇಳೆ, ನ್ಯಾಯಾಲಯಗಳಲ್ಲಿ ಮೇಲ್ಮನವಿಗಳು ದಾಖಲಾಗುತ್ತಿದ್ದರೂ, ಮುಸ್ಲಿಮ್ ಪ್ರಯಾಣ ನಿಷೇಧವನ್ನು ಸಂಪೂರ್ಣವಾಗಿ ಜಾರಿಗೊಳಿಸಬಹುದಾಗಿದೆ ಎಂಬುದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೈಕೋರ್ಟ್ ಆದೇಶ ನೀಡಿತ್ತು.

ಕುಟುಂಬ ಜೀವನವನ್ನೇ ನಿರಾಕರಿಸಿದ ನಿಷೇಧ

 ನಿರ್ದಿಷ್ಟ ದೇಶಗಳ ಜನರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಆದೇಶವನ್ನು 4ನೆ ಸರ್ಕೀಟ್ ಮೇಲ್ಮನವಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕಟು ಪದಗಳಲ್ಲಿ ಟೀಕಿಸಿದೆ. ಆದೇಶವು ನಿರ್ದಿಷ್ಟ ದೇಶಗಳ ನಾಗರಿಕರನ್ನು ನಿಷೇಧಿಸುವುದಕ್ಕಿಂತಲೂ ‘ತುಂಬಾ ಹೆಚ್ಚಿನ ‘ಹಾನಿಕಾರಕ ಪರಿಣಾಮ’ವನ್ನು ಹೊಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ನಿಷೇಧವು ಸಾವಿರಾರು ಅಮೆರಿಕನ್ನರು ಸಮಗ್ರ ಹಾಗೂ ಸಂಪೂರ್ಣ ಕುಟುಂಬವನ್ನು ಹೊಂದುವ ಸಾಧ್ಯತೆಯನ್ನೇ ನಿರಾಕರಿಸಿದೆ ಎಂದು ತೀರ್ಪು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News