ಕಾವೇರಿ ತೀರ್ಪಿಗೆ ರಾಜ್ಯದ ಸ್ವಾಗತ

Update: 2018-02-16 15:57 GMT

ಬೆಂಗಳೂರು,ಫೆ.16: ಕಾವೇರಿ ಜಲವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನೀಡಿರುವ ತೀರ್ಪನ್ನು ಕರ್ನಾಟಕವು ಸಂಭ್ರಮದಿಂದ ಸ್ವಾಗತಿಸಿದೆ.

ಸುದೀರ್ಘ ಕಾವೇರಿ ಹೋರಾಟದ ನೇತೃತ್ವ ವಹಿಸಿದ್ದ ಮಾಜಿ ಸಂಸದ ಹಾಗು ರೈತ ಹಿತರಕ್ಷಣಾ ಸಮಿತಿಯ ನಾಯಕ ಜಿ.ಮಾದೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕಕ್ಕೆ ಕಾವೇರಿ ನದಿನೀರಿನ ಪಾಲನ್ನು ಹೆಚ್ಚಿಸಿರುವುದು ತನಗೆ ಹರ್ಷವನ್ನುಂಟು ಮಾಡಿದೆ ಎಂದರು. ಆದರೆ ಮುಂದಿನ ಕ್ರಮವನ್ನು ನಿರ್ಧರಿಸುವ ಮುನ್ನ ತೀರ್ಪಿನ ಅಧ್ಯಯನ ನಡೆಸುವುದಾಗಿ ಮತ್ತು ನಾಯಕರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿಯಡಿ ಕೃಷಿ ಪ್ರದೇಶದ ವಿಸ್ತರಣೆಗೆ ಸರ್ವೋಚ್ಚ ನ್ಯಾಯಾಲಯವು ಹಸಿರು ನಿಶಾನೆಯನ್ನು ತೋರಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಮಂಡ್ಯ ಮತ್ತು ಮೈಸೂರುಗಳಲ್ಲಿಯೂ ರೈತರು ತೀರ್ಪಿನ ವಿಜಯೋತ್ಸವ ಆಚರಿಸಿದರು.

ತೀರ್ಪಿನಿಂದ ರೈತರು ಖುಷಿಯಾಗಿದ್ದರಿಂದ ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ಸುಗಮವಾಗಿತ್ತು. ರೈಲು ಮತ್ತು ವಾಹನಗಳ ಸಂಚಾರ ಎಂದಿನಂತೆ ಇತ್ತಾದರೂ ಪೊಲೀಸರು ಮುಖ್ಯವಾಗಿ ಮಂಡ್ಯ ಮತ್ತು ಶ್ರೀರಂಗಪಟ್ಟಣಗಳಲ್ಲಿ ಕಟ್ಟೆಚ್ಚರ ವಹಿಸಿದ್ದರು. ಆದರೆ ಅಂತರರಾಜ್ಯ ಬಸ್ ಸೇವೆಗಳು ವ್ಯತ್ಯಯಗೊಂಡಿದ್ದವು. ತಮಿಳುನಾಡಿನ ಬಸ್ಸುಗಳು ಕರ್ನಾಟಕದ ತನಿಖಾ ಠಾಣೆಯವರೆಗೆ ಮಾತ್ರ ಕಾರ್ಯಾಚರಿಸುತ್ತಿದ್ದರೆ, ಕರ್ನಾಟಕದ ಬಸ್ಸುಗಳು ಪುಣಂಜನೂರು ತನಿಖಾ ಠಾಣೆಯವರೆಗೆ ಸಂಚರಿಸುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News