ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟ ಆರಂಭ

Update: 2018-02-16 16:02 GMT

ಹೊಸದಿಲ್ಲಿ,ಫೆ.16: ಕಾವೇರಿ ಜಲವಿವಾದ ಕುರಿತು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತನ್ನ ತೀರ್ಪು ಪ್ರಕಟಿಸಿದ ಬೆನ್ನಿಗೇ ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟ ಆರಂಭಗೊಂಡಿದೆ. ರಾಜಕೀಯ ಲಾಭಗಳಿಕೆಗಾಗಿ ರಾಜ್ಯ ಸರಕಾರವು ಎಲ್ಲವನ್ನೂ ಹಾಳು ಮಾಡುತ್ತಿದೆ ಎಂದು ಪ್ರತಿಪಕ್ಷ ಡಿಎಂಕೆ ಆರೋಪಿಸಿದೆ.

 ತೀರ್ಪನ್ನು ‘ಅತ್ಯಂತ ಆಘಾತಕಾರಿ’ ಎಂದು ಹಿರಿಯ ಡಿಎಂಕೆ ನಾಯಕ ದುರೈ ಮುರುಗನ್ ಅವರು ಬಣ್ಣಿಸಿದರೆ, ಇನ್ನೋರ್ವ ಹಿರಿಯ ನಾಯಕ ಪಕ್ಷದ ಕಾರ್ಯದರ್ಶಿ ಟಿಕೆಎಸ್ ಇಳಂಗೋವನ್ ಅವರು, ಈ ತೀರ್ಪಿಗೆ ಎಐಎಡಿಎಂಕೆ ಹೊಣೆಯಾಗಿದೆ. ರಾಜಕೀಯ ಲಾಭಗಳಿಕೆಗಾಗಿ ಅದು ಎಲ್ಲವನ್ನೂ ಹಾಳುಗೆಡವುತ್ತಿದೆ. ಡಿಎಂಕೆ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಿತ್ತು, ಆದರೆ ಎಐಎಡಿಎಂಕೆ ಆ ಬಗ್ಗೆ ಆಸಕ್ತಿಯನ್ನೇ ವಹಿಸಲಿಲ್ಲ ಎಂದು ದೂರಿದರು.

ಕರ್ನಾಟಕದಿಂದ 192 ಟಿಎಂಸಿ ಅಡಿ ನೀರಿಗಾಗಿ ನಾವು ಯಾವಾಗಲೂ ಆಗ್ರಹಿಸುತ್ತಿದ್ದರಿಂದ ಈ ತೀರ್ಪು ನಮಗೆ ಆಘಾತವನ್ನುಂಟು ಮಾಡಿದೆ ಎಂದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪು ತಮಿಳುನಾಡಿನ ಜನತೆಗೆ ಮಾಡಿರುವ ಅನ್ಯಾಯವಾಗಿದೆ ಎಂದು ಹೇಳಿದ ಹಿರಿಯ ಎಐಎಡಿಎಂಕೆ ನಾಯಕ ವಿ.ಮೈತ್ರೇಯನ್ ಅವರು, ಸರ್ವೋಚ್ಚ ನ್ಯಾಯಾಲಯವು ತನ್ನ ಶುಕ್ರವಾರದ ತೀರ್ಪಿನಲ್ಲಿ ಸೂಚಿಸಿರುವಂತೆ ಕಾವೇರಿ ನೀರಿನ ಹರಿವನ್ನು ನಿಯಂತ್ರಿಸಲು ಕಾವೇರಿ ನಿರ್ವಹಣೆ ಮಂಡಳಿಯನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ರಾಜ್ಯದಲ್ಲಿಯ ಕೃಷಿ ಬಿಕ್ಕಟ್ಟನ್ನು ಪರಿಗಣಿಸಿದರೆ ತೀರ್ಪು ಗೊಂದಲಕಾರಿಯಾಗಿದೆ ಎಂದು ಹೇಳಿದ ಮಾಜಿ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರ ವಕ್ತಾರ ಇಲಂತಮಿಳ್ ಅರವಳನ್ ಅವರು, ರಾಜ್ಯದಲ್ಲಿ 24 ಲಕ್ಷ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕೃಷಿಯಿದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯ ಈ ನಿರ್ಧಾರಕ್ಕೆ ಬಂದಿದ್ದು ಹೇಗೆ ಎನ್ನುವುದು ತನಗೆ ಅರ್ಥವಾಗಿಲ್ಲ. ಇದು ಆಘಾತವನ್ನುಂಟು ಮಾಡಿದೆ ಎಂದರು.

ಅಂತರ್ಜಲದ ನೆಪವೊಡ್ಡಿ ನೀರಿನ ಪ್ರಮಾಣವನ್ನು ಕಡಿತಗೊಳಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಪ್ರತಿಕ್ರಿಯಿಸಿದರು.

ವಿವಾದದಲ್ಲಿ ರಾಜ್ಯದ ಹಕ್ಕುಗಳನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಸರಕಾರವನ್ನು ದೂರಿದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ತೀರ್ಪಿನ ಕುರಿತು ಚರ್ಚಿಸಲು ಸರಕಾರವು ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವೂ ತೀರ್ಪಿನ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದೆ. ಕರ್ನಾಟಕವನ್ನಾಳಿದ ಸರಕಾರಗಳು ಎಂದಿಗೂ ನ್ಯಾಯಾಲಯದ ಆದೇಶಗಳಿಗೆ ವಿಧೇಯತೆಯನ್ನು ವ್ಯಕ್ತಪಡಿಸಿಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ತಿರುನಾವುಕ್ಕರಸರ್ ಹೇಳಿದರು. ಸಿಪಿಎಂ ಮತ್ತು ಬಿಜೆಪಿ ಕೂಡ ತೀರ್ಪಿಗೆ ವಿರೋಧ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News