×
Ad

ಹುತಾತ್ಮ ಯೋಧನ ಮನೆಗೆ ನಾನು ಹೋದರೆ ಆತ ಮರಳಿ ಬರುತ್ತಾನೆಯೇ ?

Update: 2018-02-16 23:42 IST

ಪಾಟ್ನ, ಫೆ.16: ಹುತಾತ್ಮ ಸಿಆರ್‌ಪಿಎಫ್ ಯೋಧನ ಕುರಿತು ಸಂವೇದನಾರಹಿತ ಹೇಳಿಕೆ ನೀಡಿರುವ ಬಿಹಾರದ ಸಚಿವ ವಿನೋದ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಆಗ್ರಹಿಸಿವೆ.

 ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಸಂದರ್ಭ ಹುತಾತ್ಮರಾಗಿದ್ದ ಸಿಆರ್‌ಪಿಎಫ್ ಯೋಧ ಮುಜಾಹಿದ್ ಖಾನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಹುಟ್ಟೂರಾದ ಬಿಹಾರದ ಪೀರೊ ಗ್ರಾಮದಲ್ಲಿ ನೆರವೇರಿತ್ತು. ಈ ಸಂದರ್ಭ, ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವಿನೋದ್ ಸಿಂಗ್ ಗೈರುಹಾಜರಾಗಿದ್ದರು.

ಗುರುವಾರ ಮುಜಾಹಿದ್ ಖಾನ್ ಅವರ ನಿವಾಸಕ್ಕೆ ಸಚಿವ ವಿನೋದ್ ಸಿಂಗ್ ಭೇಟಿ ನೀಡಿದ್ದಾಗ ಮಾಧ್ಯಮದವರು ಅಂತ್ಯಕ್ರಿಯೆ ಸಂದರ್ಭ ಗೈರುಹಾಜರಾಗಿದ್ದ ಕುರಿತು ಪ್ರಶ್ನಿಸಿದಾಗ ಸಿಂಗ್, ನಾನು ನನ್ನ ವಿಧಾನಸಭಾ ಕ್ಷೇತ್ರವಾದ ಕಟಿಹಾರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ ಎಂದು ಉತ್ತರಿಸಿದ್ದಾರೆ. ಆದರೂ ಮಾಧ್ಯಮದವರು ಸತತ ಪ್ರಶ್ನೆಗಳ ಸುರಿಮಳೆ ಸುರಿಸಿದಾಗ ತಾಳ್ಮೆ ಕಳೆದುಕೊಂಡ ಸಚಿವ ಸಿಂಗ್, ಈ ಮೊದಲೇ ನಾನು ಪೀರೊ ಗ್ರಾಮಕ್ಕೆ ಬಂದಿದ್ದರೆ ಮುಜಾಹಿದ್ ಖಾನ್ ಜೀವಂತವಾಗಿ ಮರಳುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

 ವಿನೋದ್ ಸಿಂಗ್‌ರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ವಿಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಆಗ್ರಹಿಸಿವೆ. ಹುತಾತ್ಮ ಯೋಧರಿಗೆ ಸೂಕ್ತ ಗೌರವ ನೀಡಲು ತಿಳಿಯದ ವ್ಯಕ್ತಿ ಸಚಿವ ಹುದ್ದೆಯಲ್ಲಿರಲು ಯೋಗ್ಯರಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News