ವಿಶ್ವ ಟೆನಿಸ್ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ಹಿರಿಯ ಆಟಗಾರ ಫೆಡರರ್

Update: 2018-02-17 05:44 GMT

 ರೋಟರ್‌ಡಮ್, ಫೆ.17: ರೋಡರ್‌ಡಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ ಹಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

36ರ ಹರೆಯದ ಫೆಡರರ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಂಡ್‌ನ ರಾಬಿನ್ ಹಾಸೆ ಅವರನ್ನು 4-6, 6-1, 6-1 ಸೆಟ್‌ಗಳಿಂದ ಮಣಿಸಿದ್ದಾರೆ. ಈ ಮೂಲಕ ವಿಶ್ವ ರ್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್‌ರನ್ನು ಹಿಂದಿಕ್ಕಿ ನಂ.1 ಸ್ಥಾನ ತಲುಪಿದ್ದಾರೆ.

ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಫೆಡರರ್ ಆ್ಯಂಡ್ರೆ ಅಗಾಸ್ಸಿ ದಾಖಲೆಯನ್ನು ಮುರಿದರು. 2003ರಲ್ಲಿ ಅಗಾಸ್ಸಿ ತನ್ನ 33ನೇ ಹರೆಯದಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದರು.

ಫೆಡರರ್ 2012ರ ಅಕ್ಟೋಬರ್ ಬಳಿಕ ನಂ.1 ಸ್ಥಾನಕ್ಕೆ ವಾಪಸಾಗಿದ್ದಾರೆ. 2004ರ ಫೆಬ್ರವರಿಯಲ್ಲಿ ಮೊದಲ ಬಾರಿ ಅಗ್ರ ಸ್ಥಾನ ತಲುಪಿದ್ದರು.

‘‘ನಂ.1 ಸ್ಥಾನಕ್ಕೇರುವುದು ಟೆನಿಸ್‌ನಲ್ಲಿನ ಮಹತ್ವದ ಸಾಧನೆ. ನಮಗೆ ವಯಸ್ಸಾಗಿದ್ದರೆ ಅಗ್ರಸ್ಥಾನಕ್ಕೇರಲು ಹೆಚ್ಚು ಶ್ರಮಿಸಬೇಕಾಗುತ್ತದೆ. 1998ರಲ್ಲಿ ಮೊದಲ ಬಾರಿ ವೈಲ್ಡ್‌ಕಾರ್ಡ್ ಪಡೆದು ಟೆನಿಸ್‌ಗೆ ಪ್ರವೇಶಿಸಿದ ನನ್ನ ವೃತ್ತಿಜೀವನ ಸುದೀರ್ಘವಾದುದು. ಇದೀಗ ನನ್ನ ಕನಸು ನನಸಾಗಿದೆ’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News