ಬಂಧಿತ ನ್ಯಾಯಾಧೀಶರ ‘ಸಂಪತ್ತು’ ತನಿಖೆಗೆ ವಿದೇಶಿ ನೆರವು ಕೋರಿಕೆ

Update: 2018-02-17 17:51 GMT

 ಜಿನೇವ (ಸ್ವಿಟ್ಸರ್‌ಲ್ಯಾಂಡ್), ಫೆ. 17: ಮಾಲ್ದೀವ್ಸ್ ದೇಶವನ್ನು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಸುವುದಕ್ಕಾಗಿ, ಲಂಚ ಪಡೆದು ಸುಪ್ರೀಂ ಕೋರ್ಟನ್ನು ‘ಅಪಹರಿಸಿದ್ದಾರೆಂದು’ ಶಂಕಿಸಲಾಗಿರುವ ನ್ಯಾಯಾಧೀಶರ ವಿರುದ್ಧ ತನಿಖೆ ನಡೆಸಲು ವಿದೇಶಗಳ ನೆರವು ಕೋರಲಾಗುವುದು ಎಂದು ಹಿಂದೂ ಮಹಾಸಾಗರ ದ್ವೀಪ ರಾಷ್ಟ್ರದ ಹಿರಿಯ ರಾಜತಾಂತ್ರಿಕರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರತಿಪಕ್ಷಗಳ 9 ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಫೆಬ್ರವರಿ 5ರಂದು ದೇಶದಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಿದ ಹಿನ್ನೆಲೆಯಲ್ಲಿ ಆ ದೇಶದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ.

‘‘ಇದು ಇಡೀ ದೇಶವನ್ನು ಸ್ತಬ್ಧಗೊಳಿಸಿ ಬಿಕ್ಕಟ್ಟು ಸೃಷ್ಟಿಸಲು ಸುಪ್ರೀಂ ಕೋರ್ಟ್ ಮಾಡಿದ ಉದ್ದೇಶಪೂರ್ವಕ ಯತ್ನ’’ ಎಂದು ಐರೋಪ್ಯ ಒಕ್ಕೂಟಕ್ಕೆ ಮಾಲ್ದೀವ್ಸ್ ರಾಯಭಾರಿ ಅಹ್ಮದ್ ಶಿಯಾನ್ ಹೇಳುತ್ತಾರೆ.

2,15,000 ಡಾಲರ್ (ಸುಮಾರು 1.38 ಕೋಟಿ ರೂಪಾಯಿ) ಮತ್ತು 1,50,000 ರುಫಿಯಾ (ಸುಮಾರು 6.25 ಲಕ್ಷ ಭಾರತೀಯ ರೂಪಾಯಿ) ನಗದು ಹೊಂದಿರುವ ಚೀಲವೊಂದು ಸುಪ್ರೀಂ ಕೋರ್ಟ್‌ನ ಓರ್ವ ನ್ಯಾಯಾಧೀಶರ ಬಳಿ ಪತ್ತೆಯಾಗಿದೆ ಎಂಬುದಾಗಿ ತೋರಿಸುವ ಪೊಲೀಸ್ ಹೇಳಿಕೆಯೊಂದನ್ನು ಅವರು ಪ್ರದರ್ಶಿಸಿದರು.

ಅದೂ ಅಲ್ಲದೆ, 2.4 ಮಿಲಿಯ ಡಾಲರ್ (ಸುಮಾರು 15.45 ಕೋಟಿ ರೂಪಾಯಿ) ಮೊತ್ತವನ್ನು ಈ ನ್ಯಾಯಾಧೀಶರಿಗೆ ಖಾಸಗಿ ಸಂಸ್ಥೆಯೊಂದು ಪ್ರತ್ಯೇಕವಾಗಿ ಕಳುಹಿಸಿದೆ ಎಂದು ಮಾಲ್ದೀವ್ಸ್ ರಾಯಭಾರಿ ಆರೋಪಿಸಿದರು.

ಮಾಜಿ ಅಧ್ಯಕ್ಷ ವೌಮೂನ್ ಅಬ್ದುಲ್ ಗಯೂಮ್‌ರ ಪರವಾಗಿ ಕೆಲವು ತೀರ್ಪುಗಳನ್ನು ನೀಡುವುದಕ್ಕಾಗಿ ಅವರಿಂದ ಲಂಚ ಸೀಕರಿಸಿದ ಆರೋಪದಲ್ಲಿ ಈ ನ್ಯಾಯಾಧೀಶರನ್ನು ಹಾಗೂ ಸುಪ್ರೀಂ ಕೋರ್ಟ್‌ನ ಇನ್ನೊಂದು ನ್ಯಾಯಾಧೀಶರನ್ನು ಬಂಧಿಸಲಾಗಿದೆ ಎಂದು ಶಿಯಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News