ವಿದೇಶಿ ವಿನಿಮಯ ಹೆಚ್ಚಿಸಲು ಚೀನಾದಿಂದ 3,220 ಕೋಟಿ ರೂ. ಸಾಲ ಪಡೆದ ಪಾಕ್

Update: 2018-02-17 18:00 GMT

ಇಸ್ಲಾಮಾಬಾದ್, ಫೆ. 17: ಪಾಕಿಸ್ತಾನವು ತನ್ನ ಬತ್ತುತ್ತಿರುವ ವಿದೇಶಿ ವಿನಿಮಯವನ್ನು ತುಂಬಲು ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್‌ನಿಂದ ಹೊಸದಾಗಿ 500 ಮಿಲಿಯ ಡಾಲರ್ (ಸುಮಾರು 3,220 ಕೋಟಿ ಭಾರತೀಯ ರೂಪಾಯಿ) ವಿದೇಶಿ ವಾಣಿಜ್ಯ ಸಾಲವನ್ನು ಪಡೆದುಕೊಂಡಿದೆ.

ಇದರೊಂದಿಗೆ ಅಮೆರಿಕ ಡಾಲರ್‌ನ ಎದುರು ಪಾಕಿಸ್ತಾನಿ ರೂಪಾಯಿಯನ್ನು ಬಲಪಡಿಸುವುದಕ್ಕಾಗಿ ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಕೇವಲ 3 ತಿಂಗಳ ಅವಧಿಯಲ್ಲಿ ಪಾಕಿಸ್ತಾನಕ್ಕೆ ನೀಡಿದ ಸಾಲದ ಮೊತ್ತ 1 ಬಿಲಿಯ ಡಾಲರ್ (ಸುಮಾರು 6450 ಕೋಟಿ ಭಾರತೀಯ ರೂಪಾಯಿ)ಗೆ ಏರಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

 ಸರಕಾರವು ಜನವರಿ 15ರಂದು 4.5 ಶೇಕಡ ಬಡ್ಡಿ ದರದಲ್ಲಿ ಈ ಸಾಲ ಪಡೆದುಕೊಂಡಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಜನವರಿಯಲ್ಲಿ ಪಾಕಿಸ್ತಾನವು ಒಟ್ಟು 704 ಡಾಲರ್ ಮಿಲಿಯ (ಸುಮಾರು 4,500 ಕೋಟಿ ಭಾರತೀಯ ರೂಪಾಯಿ) ಮೊತ್ತದ ಹೊಸ ಸಾಲಗಳನ್ನು ಪಡೆದುಕೊಂಡಿದೆ. ಈ ಮೂಲಕ, ಪ್ರಸಕ್ತ ಹಣಕಾಸು ವರ್ಷದ ಕೇವಲ 7 ತಿಂಗಳಲ್ಲಿ ವಿದೇಶಗಳಿಂದ ಪಾಕಿಸ್ತಾನ ಪಡೆದ ಸಾಲಗಳ ಮೊತ್ತ 6.6 ಬಿಲಿಯ ಡಾಲರ್ (ಸುಮಾರು 42,500 ಕೋಟಿ ಭಾರತೀಯ ರೂಪಾಯಿ)ಗೆ ಏರಿದೆ.

ಕಳೆದ ವರ್ಷದ ಜೂನ್‌ನಲ್ಲಿ ಪಾಕಿಸ್ತಾನದ ಸಂಸತ್ತು ಅಂಗೀಕರಿಸಿದ ವಾರ್ಷಿಕ ಬಜೆಟ್‌ನ 86 ಶೇಕಡ ಭಾಗವನ್ನು ವಿದೇಶಿ ಸಾಲದಿಂದಲೇ ತುಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News