2.6 ಮಿಲಿಯನ್ ಒಣ ಶೌಚಾಲಯಗಳು ಮತ್ತು 13,384 ಮಲಹೊರುವ ಕಾರ್ಮಿಕರು

Update: 2018-02-18 03:53 GMT

ಕೊನೆಗೂ ಮಾಧ್ಯಮಗಳು, ಚರಂಡಿಯೊಳಗೆ ಉಸಿರುಗಟ್ಟಿ ಸಾಯುತ್ತಿರುವ ಮಲಹೊರುವ ಕಾರ್ಮಿಕರ ಬಗ್ಗೆ ವರದಿ ಮಾಡಲು ಆರಂಭಿಸಿವೆ. ಆದರೆ ಶೇ. 95 ದಲಿತ ಮಹಿಳೆಯರೇ ಮಾಡುವ ಗೃಹ ಮತ್ತು ಸಮುದಾಯ ಆಧಾರಿತ ಮಲಹೊರುವ ಪದ್ಧತಿಯ ಬಗ್ಗೆ ಸರಕಾರಕ್ಕಿರುವ ತೀವ್ರ ನಿರ್ಲಕ್ಷದ ಕುರಿತ ವರದಿಗಳು ಈಗಲೂ ಮಾಧ್ಯಮಗಳಲ್ಲಿ ಸ್ಥಾನಪಡೆದುಕೊಳ್ಳುತ್ತಿಲ್ಲ. ಮಲಹೊರುವವರು ಎಂದರೆ ತಲೆಮಾರುಗಳಿಂದ ಮಹಿಳೆಯರಿಗೆ ಹಸ್ತಾಂತರಿಸಲಾಗಿರುವ ಜಾತ್ಯಾಧಾರಿತ ಕಾರ್ಮಿಕರ ವಿಭಾಗ. ಈ ಮಹಿಳೆಯರು ತಮ್ಮದೇ ಗ್ರಾಮ ಅಥವಾ ಸಮೀಪದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಒತ್ತಾಯಪೂರ್ಕ ವ್ಯವಸ್ಥೆಯಲ್ಲಿ ಸಿಲುಕಿರುತ್ತಾರೆ.

ಈ ಜಾತಿಗೆ ವಿವಾಹ ಮಾಡಿಕೊಡಲ್ಪಟ್ಟ ಮಹಿಳೆಯರು ಈ ಅಮಾನವೀಯ ಪದ್ಧತಿಯ ಕಾರಣದಿಂದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸುತ್ತಾರೆ. ಈ ಮಹಿಳೆಯರು ಮಲ ತುಂಬಿದ ಬಿದಿರಿನ ಭಾರವಾದ ಬಿಟ್ಟಿಯನ್ನು ಹೊತ್ತು ಅದನ್ನು ವಿಲೇವಾರಿ ಮಾಡಬೇಕಾದ ಸ್ಥಳಕ್ಕೆ ಸಾಗಿಸುತ್ತಾರೆ. ಬೇಸಿಗೆಯ ಬಿಸಿಲು ಮತ್ತು ಮಳೆಗಾಲದ ಸಮಯದಲ್ಲಿ ಈ ಮಲವು ಅವರ ಮುಖ ಮತ್ತು ದೇಹದ ಮೇಲೆ ಸೋರುತ್ತದೆ. ಆ ದುರ್ನಾತ ಮತ್ತು ಕೆಲಸದ ಪರಿಸ್ಥಿತಿಯನ್ನು ಸಹಿಸುವುದು ಅಸಾಧ್ಯ. ಪುರುಷರು ಮೃತ ಜಾನುವಾರುಗಳ ವಿಲೇವಾರಿ, ಹೆರಿಗೆಯ ನಂತರ ಹೊಕ್ಕುಳಬಳ್ಳಿಯ ಸ್ವಚ್ಛತೆ ಮತ್ತು ಇದೇ ಮಾದರಿಯ ಹಲವು ಕೆಲಸಗಳನ್ನು ಮಾಡುತ್ತಾರೆ. ಈ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಲೈಂಗಿಕ ಶೋಷಣೆ, ಹಿಂಸೆಯ ಕುರಿತು ನೂರಾರು ಪ್ರಮಾಣಗಳನ್ನು ಒದಗಿಸಲಾಗಿದ್ದರೂ ಅನೇಕ ಸರಕಾರಗಳು ಅದನ್ನು ನಿರಾಕರಿಸುತ್ತಲೇ ಬಂದಿವೆ.

ಮಲಹೊರುವ ಕಾರ್ಮಿಕರ ಮತ್ತು ಜನರ ಸುದೀರ್ಘ ಹೋರಾಟದ ನಂತರ ಕೇಂದ್ರ ಸರಕಾರವು 2013ರಲ್ಲಿ ಮಲಹೊರುವ ಪದ್ಧತಿಯ ನಿಷೇಧ ಮತ್ತು ಸಮುದಾಯದ ಪುನರ್ವಸತಿ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮಲಹೊರುವ ಉದ್ಯೋಗವನ್ನು ನಿಷೇಧಿಸುತ್ತದೆ. ಶೌಚಾಲಯಗಳ ನಿರ್ಮಾಣ, ಒಂದು ಸಲದ ಆರ್ಥಿಕ ನೆರವಿನೊಂದಿಗೆ ಮಲಹೊರುವ ಕಾರ್ಮಿಕರ ಪುನರ್ವಸತಿ, ಮಕ್ಕಳಿಗೆ ವಿದ್ಯಾರ್ಥಿವೇತನ, ಮನೆ ನಿರ್ಮಿಸಲು ನಗದು ನೆರವಿನೊಂದಿಗೆ ಜಮೀನು ನೀಡುವಿಕೆ, ಇವು ಈ ಕಾಯ್ದೆಯಲ್ಲಿ ಉಲ್ಲೇಖಿಸಲಾದ ಇತರ ಅಂಶಗಳಾಗಿವೆ.

ಈ ಕಾಯ್ದೆಯ ಪ್ರಮುಖ ಅಂಶವೆಂದರೆ ಸಮೀಕ್ಷೆಯ ಮೂಲಕ ದೇಶಾದ್ಯಂತವಿರುವ ಮಲಹೊರುವ ಕಾರ್ಮಿಕರನ್ನು ಗುರುತಿಸುವುದು. 2017ರ ಅಕ್ಟೋಬರ್‌ವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಭಾರತದ ಹನ್ನೊಂದು ರಾಜ್ಯಗಳಲ್ಲಿ ಕೇವಲ 13,384 (ನಗರದಲ್ಲಿ 4375, ಗ್ರಾಮೀಣ ಪ್ರದೇಶದಲ್ಲಿ 9014) ಮಲಹೊರುವ ಕಾರ್ಮಿಕರನ್ನು ಗುರುತಿಸಿದೆ. ಈ ಪೈಕಿ, 12,640 ಮಂದಿ ಸರಕಾರದಿಂದ ಒಂದು ಸಲದ ನಗದು ನೆರವನ್ನು ಪಡೆದುಕೊಂಡಿದ್ದಾರೆ ಮತ್ತು 4,643 ಮಂದಿ ಔದ್ಯೋಗಿಕ ತರಬೇತಿ ಪಡೆದುಕೊಂಡಿದ್ದಾರೆ.

ಭಾರತೀಯ ಗಣತಿಯ (2011) ಪ್ರಕಾರ ಮಾನವರು ಮಲವನ್ನು ಸ್ವಚ್ಛಗೊಳಿಸುವ 7,94,390 ಒಣ ಶೌಚಾಲಯಗಳಿವೆ. ಇವುಗಳಲ್ಲಿ ಶೇ. 73 ಗ್ರಾಮೀಣ ಪ್ರದೇಶದಲ್ಲಿದ್ದು, ಶೇ. 27 ನಗರ ಭಾಗದಲ್ಲಿದೆ. ಇನ್ನು, 13,14,652 ಶೌಚಾಲಯಗಳ ಮಲಗಳನ್ನು ತೆರೆದ ಚರಂಡಿಗಳಿಗೆ ಬಿಡಲಾಗುತ್ತದೆ. ದೇಶಾದ್ಯಂತ 26 ಲಕ್ಷ ಒಣ ಶೌಚಾಲಯಗಳಲ್ಲಿ ಮಾನವನ ಮೂಲಕ ಮಲಹೊುವ ಪದ್ಧತಿಯು ಈಗಲೂ ಜಾರಿಯಲ್ಲಿದೆ.

ಗ್ರಾಮೀಣ ಭಾರತದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (2011) ಯ ಪ್ರಕಾರ, ಸಮೀಕ್ಷೆಗೊಳಪಡಿಸಿದ 1,80,657 ಗ್ರಾಮೀಣ ಕುಟುಂಬಗಳು ಮಲಹೊರುವ ಕೆಲಸವನ್ನು ಮಾಡುತ್ತಿದ್ದವು. ಮಹಾರಾಷ್ಟ್ರದಲ್ಲಿ ಅತೀಹೆಚ್ಚು ಸಂಖ್ಯೆಯಲ್ಲಿ ಮಲಹೊರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಆನಂತರದ ಸ್ಥಾನ ಮಧ್ಯಪ್ರದೇಶಕ್ಕೆ. ಉತ್ತರ ಪ್ರದೇಶ, ತ್ರಿಪುರ, ಕರ್ನಾಟಕ, ಪಂಜಾಬ್, ದಾಮನ್ ಮತ್ತು ದಿಯು ಹಾಗೂ ಬಿಹಾರ ನಂತರದ ಸ್ಥಾನಗಳಲ್ಲಿವೆ. ಇದೇ ಜಾತಿ ಗಣತಿಯು ಗೋವಾ, ಅಸ್ಸಾಂ ಮತ್ತು ಚಂಡಿಗಡದಲ್ಲಿ ಮಲಹೊರುವ ಕಾರ್ಮಿಕರು ಇಲ್ಲ ಎಂದು ತಿಳಿಸಿದೆ. ಹಲವು ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು ಮತ್ತು ಸಾಕ್ಷಿಗಳಿಂದ ಹಲವು ರಾಜ್ಯಗಳಲ್ಲಿ ಮಲಹೊರುವ ಪದ್ಧತಿ ಅವ್ಯಾಹತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಹಾಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನನ್ನು ಅನುಷ್ಠಾನಗೊಳಿಸುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ದಲಿತ ಮಹಿಳೆಯರ ಸಬಲೀಕರಣದ ಬಗ್ಗೆ ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂಬುದನ್ನು ಸಾಕ್ಷಿಸಮೇತವಾಗಿ ಸ್ಪಷ್ಟವಾಗಿ ಹೇಳಬಹುದಾಗಿದೆ. ಸರಕಾರಗಳು ಮಲಹೊರುವ ಪದ್ಧತಿಯು ಅಸ್ತಿತ್ವದಲ್ಲಿದೆ ಎಂಬುದನ್ನು ಒಪ್ಪಿಕೊಂಡು ಆ ಸಮುದಾಯದ ಪುನರ್ವಸತಿಗಾಗಿ ನಿಜವಾಗಿಯೂ ಬದ್ಧತೆ ಪ್ರದರ್ಶಿಸುವುದರಲ್ಲಿ ಈ ಕಾಯ್ದೆಯ ಯಶಸ್ಸಿನ ಸೂತ್ರ ಅಡಗಿದೆ. ಜಿಲ್ಲಾ ಆಯುಕ್ತರು, ಪಾಲಿಕೆ ಆಯುಕ್ತರು ಮತ್ತು ತಾಲೂಕು ಹಾಗೂ ಪಂಚಾಯತ್‌ನ ಮುಖ್ಯಸ್ಥರು ಈಗಲೂ ಅಮಾನವೀಯ ಮಲಹೊರುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಸರಿಯಾದ ಅಂಕಿಸಂಖ್ಯೆಗಳನ್ನು ನೀಡುವುದರ ಮೇಲೆ ಈ ಕಾನೂನು ಅವಲಂಬಿತವಾಗಿದೆ. ಅದರರ್ಥವೇನೆಂದರೆ, ಈ ಪದ್ಧತಿಯನ್ನು ಅಸ್ತಿತ್ವದಲ್ಲಿರಿಸುವಲ್ಲಿನ ತಮ್ಮ ಪಾತ್ರದ ಬಗ್ಗೆ ಅಧಿಕಾರಿಗಳು ಒಪ್ಪಿಕೊಳ್ಳಬೇಕು ಮತ್ತು ಮಾನವ ರಹಿತವಾದ ಸ್ವಚ್ಛತಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಬೇಕು. ಈ ಕೆಲಸವೇ ಅತ್ಯಂತ ಕಷ್ಟಕರವಾಗಿರುವಂತಹದ್ದು. ಬಹುತೇಕ ಸಂದರ್ಭಗಲ್ಲಿ, ಮಲಹೊರುವ ಕಾರ್ಮಿಕರ ಆರ್ಥಿಕ ಮತ್ತು ಸಾಮಾಜಿಕ ಪುನರ್ವಸತಿ ಮತ್ತು (ಕಾಯ್ದೆಯಡಿಯಲ್ಲಿ) ದಾಖಲಾಗುವ ಅಪರಾಧಗಳು, ಅವುಗಳ ತನಿಖೆ ಮತ್ತು ಶಿಕ್ಷೆಯ ಮೇಲುಸ್ತುವಾರಿ ನೋಡಿಕೊಳ್ಳಲು ರಚಿಸಲಾದ ಜಿಲ್ಲಾ ನಿಗಾ ಸಮಿತಿಯು ಕೆಲವೆಡೆ ರಚನೆಯೇ ಆಗಿಲ್ಲ ಅಥವಾ ಕಾರ್ಯಾಚರಿಸುತ್ತಿಲ್ಲ.

ಇತ್ತೀಚೆಗೆ ಕೇಂದ್ರ ಸರಕಾರವು ಭಾರತದ 164 ಜಿಲ್ಲೆಗಳಲ್ಲಿ ಹೊಸದಾಗಿ ಸಮೀಕ್ಷೆ ನಡೆಸುವ ಯೋಜನೆಯನ್ನು ಘೋಷಿಸಿತು. ಇದೊಂದು ಸ್ವಾಗತಾರ್ಹ ನಿರ್ಧಾರವಾದರೂ ಈ ಕಾರ್ಯವನ್ನು ಆರಂಭಿಸುವುದಕ್ಕೂ ಮುನ್ನ ಕಳೆದ ಐದು ವರ್ಷಗಳಲ್ಲಿ ನಡೆದ ತಪ್ಪುಗಳಿಂದ ಕಲಿಯುವುದು ಉತ್ತಮ. ಮೊತ್ತಮೊದಲನೆಯದಾಗಿ, ಈ ಅಮಾನವೀಯ ಪದ್ಧತಿಯ ನಿರ್ಮೂಲನೆಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸರಕಾರಿ ಅಧಿಕಾರಿಗಳ ಮಾನಸಿಕತೆಯಲ್ಲಿ ಬದಲಾವಣೆಯನ್ನು ತರುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಸಮುದಾಯದ ಪ್ರತೀ ಮಹಿಳೆ ಮತ್ತು ಪುರುಷರು ಕೇವಲ 40,000 ರೂ. ಚೆಕ್ ಪಡೆಯುವುದು ಮಾತ್ರವಲ್ಲ, ಈ ಕುಟುಂಬಗಳಿಗೆ ತಮ್ಮ ಜೀವನವನ್ನು ಘನತೆಯಿಂದ ಸಾಗಿಸುವ ನಿಜವಾದ ಅವಕಾಶ ಮತ್ತು ಅಧಿಕಾರ ನೀಡುವಂಥ ಪುನರ್ವಸತಿಯನ್ನು ಒದಗಿಸಬೇಕು. ಇವುಗಳಲ್ಲಿ ಉಚಿತ ನಿವಾಸ, ಸಂಬಂಧಿತ ಔದ್ಯೋಗಿಕ ತರಬೇತಿ, ಸ್ವ-ಉದ್ಯೋಗ ನಡೆಸಲು ಆರ್ಥಿಕ ನೆರವು ಮತ್ತು ಈ ಕುಟುಂಬಗಳ ಮಕ್ಕಳಿಕೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಇತ್ಯಾದಿ ಸೇರಿದೆ. ಸರಕಾರವು ಈಗಲೂ ಈ ರೀತಿ ಜಾತ್ಯಾಧಾರಿತ ತುಳಿತಕ್ಕೆ ಒಳಗಾಗುತ್ತಿರುವ ಮಹಿಳೆಯರು ಮತ್ತು ಪುರುಷರನ್ನು ಗುರುತಿಸಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದರೆ ಅದು ಅವರನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲ ಪಾಪದಿಂದ ತುಂಬಿರುವ ತನ್ನ ಸ್ವಂತ ಇತಹಾಸವನ್ನು ತಿದ್ದಲೂ ಸಹಕಾರಿಯಾಗಬಹುದು.

ಕೃಪೆ: thenewindian express

Writer - ಆಶಿಫ್ ಶೇಕ್

contributor

Editor - ಆಶಿಫ್ ಶೇಕ್

contributor

Similar News

ಜಗದಗಲ
ಜಗ ದಗಲ