ಮಲಬಾರ್‌ನಲ್ಲಿ ಟಿಪ್ಪು

Update: 2018-02-18 05:23 GMT

ಭಾಗ-1

ಪತ್ರಾಗಾರದಲ್ಲಿ ಈ ಜಮೀನು ಕಂದಾಯ ದಾಖಲೆಗಳ ಸುಮಾರು 500 ಕಟ್ಟುಗಳು(ಬಂಡಲ್ಸ್) ಇವೆ. ಪ್ರತಿಯೊಂದು ಕಟ್ಟಿನಲ್ಲಿ ಸುಮಾರು ನೂರು ಪುಟಗಳಿವೆ. ಮಲಬಾರ್‌ನಲ್ಲಿ ಹೈದರಲಿ ಮತ್ತು ಟಿಪ್ಪುಸುಲ್ತಾನ್ ಮಾಡಿದ ಭೂಸುಧಾರಣೆಗಳ ಕುರಿತು ಅಧ್ಯಯನ ನಡೆಸುವವರಿಗೆ ಈ ದಾಖಲೆಗಳು ಒಂದು ಚಿನ್ನದ ಗನಿಯಾಗಿದೆ. ಕೇರಳ ಸಮಾಜದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಿದ ಸುಧಾರಣೆಗಳು ಅವು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರವು ನವೆಂಬರ್ 10ರಂದು ‘ಟಿಪ್ಪು ಜಯಂತಿ’ ಎಂದು ಕಳೆದ ಮೂರು ವರ್ಷಗಳಿಂದ ಆಚರಿಸುತ್ತಿದೆ. ಆದರೆ, ಇದರ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಕೇಸರಿವಾದಿಗಳು ಪ್ರತಿಭಟನೆ ನಡೆಸಿದ್ದಾರೆ. ಟಿಪ್ಪು ಓರ್ವ ಸ್ವಾತಂತ್ರ ಹೋರಾಟಗಾರನಲ್ಲ; ಆತ ದೇವಾಲಯಗಳನ್ನು ಕೊಳ್ಳೆ ಹೊಡೆದ ಮತ್ತು ಹಿಂದುಗಳನ್ನು ಬಲವಂತವಾಗಿ ಇಸ್ಲಾಮ್‌ಗೆ ಮತಾಂತರಗೊಳಿಸಿದ ಓರ್ವ ಮತಾಂಧನೆಂದು ಕೇಸರಿವಾದಿಗಳು ವಾದಿಸುತ್ತಾರೆ.

 ಕೊಡಗಿನಲ್ಲಿ ಕೊಡವರನ್ನು, ಮಲಬಾರ್‌ನಲ್ಲಿ ನಾಯರ್‌ಗಳನ್ನು ಮತ್ತು ಮಂಗಳೂರಿನಲ್ಲಿ ಕ್ರಿಶ್ಚಿಯನ್ನರನ್ನು ಟಿಪ್ಪು ಬಲವಂತವಾಗಿ ಮತಾಂತರಗೊಳಿಸಿದ್ದಾನೆ ಎಂಬ ಆಪಾದನೆಯಿದೆ. ಈ ಲೇಖನವು ಮಲಬಾರ್‌ನಲ್ಲಿ ಟಿಪ್ಪುವಿನ ವಿರುದ್ಧ ಮಾಡಲಾಗಿರುವ ಆಪಾದನೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ.

ಇನಾಮ್ ದಾಖಲೆಗಳು(ರಿಜಿಸ್ಟರ್‌ಗಳು) 

ಕಲ್ಲಿಕೋಟೆಯ ಪ್ರಾದೇಶಿಕ ಪತ್ರಾಗಾರಗಳಲ್ಲಿ ಲಕ್ಷಗಟ್ಟಲೆ ಅಮೂಲ್ಯ ದಾಖಲೆಗಳ ರಾಶಿಯಲ್ಲಿ, ಮಲಬಾರ್‌ನ ಇನಾಮ್ ಕಮಿಶನರ್ ಜೆಡಬ್ಲು ರಾಬಿನ್‌ಸನ್ ಸಂಗ್ರಹಿಸಿಟ್ಟಿರುವ ಏಳು ರಿಜಿಸ್ಟರ್‌ಗಳ ಒಂದು ಸೆಟ್ ಇದೆ. ಬ್ರಿಟಿಷ್ ಕಾಲದ ಏಳು ತಾಲೂಕುಗಳಲ್ಲಿ ಟಿಪ್ಪು ನೀಡಿದ ಇನಾಮ್‌ಗಳ ವಿವರ ಈ ದಾಖಲೆಗಳಲ್ಲಿದೆ. ಒಂದು ಸಂಸ್ಥೆಗೆ ಅಥವಾ ಒಬ್ಬ ವ್ಯಕ್ತಿಗೆ ತೆರಿಗೆ ಮುಕ್ತವಾಗಿ ನೀಡಲಾದ ಜಮೀನಿನ ಕೊಡುಗೆಯೇ ಇನಾಮ್.

ಚಾಘುವಾತ್(ಪೊನ್ನಾನಿ) ತಾಲೂಕಿಗೆ ಸಂಬಂಧಿಸಿದ ದಾಖಲೆಯಲ್ಲಿ ಇನಾಮ್ ಜಮೀನುಗಳನ್ನು ನವೀಕರಿಸಲಾದ ಒಂಬತ್ತು ದೇವಸ್ಥಾನಗಳ ಉಲ್ಲೇಖ ಇದೆ. ಇವುಗಳಲ್ಲಿ ಗುರುವಾಯೂರು ದೇವಾಲಯಕ್ಕೆ ನೀಡಲಾದ ಅತ್ಯಂತ ಬೃಹತ್ತಾದ ಜಮೀನು ಅನುದಾನವಾಗಿರುವ(ಗ್ರಾಂಟ್) 613.2 ಎಕ್ರೆಗಳು ಉಲ್ಲೇಖಾರ್ಹ ಇನಾಮ್. ಈ ಇನಾಮ್‌ನ ಫಲಾನುಭವಿ ಉರಾಳರು ಅಥವಾ ‘ಗುರುವಾಯೂರು ಕ್ಷೇತ್ರ’ದ ಟ್ರಸ್ಟಿಗಳು ಎಂದು ನಮೂದಿಸಲಾಗಿದೆ. ದಾಖಲೆಯ ಮುಂದುವರಿದ ಭಾಗದಲ್ಲಿ ಹೀಗೆ ಬರೆಯಲಾಗಿದೆ.

‘‘ರೂ.1,428-9-2(ರೂಪಾಯಿ ಆಣೆ-ಪೈ)ಗಳನ್ನು ಟಿಪ್ಪುಸುಲ್ತಾನ್ ದೇವಸ್ಥಾನದ ನೆರವಿಗಾಗಿ ನೀಡಿರುವುದಾಗಿಯೂ, ಇದು 1841ರವರೆಗೆ ಬ್ರಿಟಿಷ್ ಸರಕಾರದಿಂದ ಮುಂದುವರಿದಿರುವು ದಾಗಿಯೂ ತಿಳಿದುಬರುತ್ತದೆ. ಆ ಬಳಿಕ ಇಷ್ಟೇ ಮೊತ್ತದ ಆದಾಯ ಬರುವ ಜಮೀನುಗಳನ್ನು ನೀಡಿ ನಗದನ್ನು ಜಮೀನು ಅನುದಾನವಾಗಿ ಪರಿವರ್ತಿಸಲಾಯಿತು.

ಈ ಶರಾಕ್ಕೆ ಮಲಬಾರ್‌ನ ಅಂದಿನ ಕಲೆಕ್ಟರ್ ಜಿ.ಎ. ಬಲಾರ್ಡ್ ಅನುಮೋದನೆ ನೀಡಿದ್ದರು. ಮೈಸೂರು ಅರಸರ ಬ್ರಾಹ್ಮಣ ಗುಮಾಸ್ತರು ಸಿದ್ಧಪಡಿಸಿದ್ದ ಕಂದಾಯ ದಾಖಲೆಗಳನ್ನು ಬ್ರಿಟಿಷ್ ಸರಕಾರ ದೃಢೀಕರಿಸುವುದು ಈ ಅನುಮೋದನೆಯ ಉದ್ದೇಶವಾಗಿತ್ತು.

ಪತ್ರಾಗಾರದಲ್ಲಿ ಈ ಜಮೀನು ಕಂದಾಯ ದಾಖಲೆಗಳ ಸುಮಾರು 500 ಕಟ್ಟುಗಳು(ಬಂಡಲ್ಸ್) ಇವೆ. ಪ್ರತಿಯೊಂದು ಕಟ್ಟಿನಲ್ಲಿ ಸುಮಾರು ನೂರು ಪುಟಗಳಿವೆ. ಮಲಬಾರ್‌ನಲ್ಲಿ ಹೈದರ್ ಆಲಿ ಮತ್ತು ಟಿಪ್ಪುಸುಲ್ತಾನ್ ಮಾಡಿದ ಭೂಸುಧಾರಣೆಗಳ ಕುರಿತು ಅಧ್ಯಯನ ನಡೆಸುವವರಿಗೆ ಈ ದಾಖಲೆಗಳು ಒಂದು ಚಿನ್ನದ ಗನಿಯಾಗಿದೆ. ಕೇರಳ ಸಮಾಜದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಿದ ಸುಧಾರಣೆಗಳು ಅವು.

ಇನಾಮ್ ರಿಜಿಸ್ಟರ್‌ಗಳಲ್ಲಿ ಟಿಪ್ಪು ಹಲವಾರು ಹಿಂದೂ ದೇವಾಲಯಗಳಿಗೆ ನೀಡಿದ ಜಮೀನು ಅನುದಾನಗಳ ದಾಖಲೆ ಇದೆ. ಟಿಪ್ಪು ಓರ್ವ ಧಾರ್ಮಿಕ ಮತಾಂಧ; ಆತನ ದಂಡಯಾತ್ರೆಗಳು ದೇವಾಲಯಗಳನ್ನು ನಾಶಮಾಡಿ ಇಸ್ಲಾಮ್ ಧರ್ಮವನ್ನು ಪ್ರಸಾರ ಮಾಡುವ ಕೇವಲ ಒಂದ ಜಿಹಾದ್ ಆಗಿತ್ತು ಮತ್ತು ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುದಾಗಿತ್ತು ಎನ್ನುವ ಹಿಂದುತ್ವವಾದಿಗಳ ಪ್ರಚಾರಕ್ಕೆ ಸಮರ್ಪಕ ಉತ್ತರ ನೀಡಬಲ್ಲ ಅಮೂಲ್ಯ ದಾಖಲೆ ಇದು.

ಇನ್ನೂ ಪ್ರಕಟವಾಗದಿರುವ ಮುಹಮ್ಮದ್ ಇಸ್ಮಾಯೀಲ್‌ರವರ ಪಿಎಚ್‌ಡಿ ಮಹಾಪ್ರಬಂಧದ ಪ್ರಕಾರ, ಟಿಪ್ಪು ಸುಲ್ತಾನ್ ಹೀಗೆ ಇನಾಮ್ ನೀಡಿದ ಜಮೀನು 6,931.03 ಎಕ್ರೆಗಳು. ಇವುಗಳಲ್ಲಿ 5,434.07 ಎಕ್ರೆ ಹಿಂದೂ ಸಂಸ್ಥೆಗಳಿಗೆ ಮತ್ತು ಹಿಂದೂ ವ್ಯಕ್ತಿಗಳಿಗೆ ನೀಡಲಾದ ಜಮೀನು. ಮುಸ್ಲಿಮ್ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ನೀಡಲಾದ ಜಮೀನು 1,494.27 ಎಕ್ರೆಗಳು.

ಜಮೀನು ಅನುದಾನಗಳನ್ನು ಮೂರು ವರ್ಷಗಳಲ್ಲಿ ಮಾಡಲಾಗಿತ್ತು. 48 ದೇವಸ್ಥಾನಗಳಿಗೆ ದೇವದಯಾಮ್ ಅನುದಾನ, ಏಳು ‘ಸತ್ರಮ್’’ (ಛತ್ರ)ಗಳಿಗೆ ಧರ್ಮಾದಾಯಮ್ ಅನುದಾನ ಮತ್ತು ಮೂವರು ವ್ಯಕ್ತಿಗಳಿಗೆ ಅನುದಾನಗಳು. ‘ಮಾಪಿಳ್ಳೆ’ಗಳೆಂದು ಕರೆಯಲಾಗುವ ಸ್ಥಳೀಯ ಮುಸ್ಲಿಮರು ಮಲಬಾರ್‌ನ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟಿದ್ದಾಗ, ಓರ್ವ ‘ಧಾರ್ಮಿಕ ಮತಾಂಧ’ ನೀಡಿದ್ದ ಇನಾಮ್‌ಗಳಲ್ಲಿ ಎದ್ದು ಕಾಣುವ ಈ ತಾರತಮ್ಯ ಆಶ್ಚರ್ಯ ಹುಟ್ಟಿಸುತ್ತದೆ. ತನ್ನ ರಾಜ್ಯದ ಇತರ ಭಾಗಗಳಲ್ಲಿ ಇದ್ದಂತೆಯೇ ಮಲಬಾರ್‌ನಲ್ಲೂ ಟಿಪ್ಪು ಹಿಂದೂಗಳ ಧಾರ್ಮಿಕ ಸಂವೇದನೆಗಳಿಗೆ ಸ್ಪಂದಿಸುತ್ತಿದ್ದ. ತುಂಬ ಸೆನ್ಸಿಟಿವ್ ಆಗಿದ್ದ ಎಂಬುದು ಈ ದಾಖಲೆಗಳಿಂದ ಸ್ಪಷ್ಟವಾಗುತ್ತದೆ.

ಮೈಸೂರು ಮಧ್ಯಂತರ

ಭಾರತದ ಇತಿಹಾಸದಲ್ಲಿ 18ನೇ ಶತಮಾನ ಸ್ಥಿತ್ಯಂತರದ ಒಂದು ಯುಗ. ಮೊಗಲರು ಸತತವಾಗಿ ಅವನತಿ ಹೊಂದುತ್ತಿದ್ದರು ಮತ್ತು 1757ರ ಪ್ಲಾಸಿ ಕದನದ ಬಳಿಕ ಭಾರತೀಯ ಉಪಖಂಡದ ಆಗುಹೋಗುಗಳಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಒಂದು ಪ್ರಮುಖ ಪಾತ್ರಧಾರಿಯಾಗಿ ಮೂಡಿಬಂತು. ಮರಾಠರು ಕೂಡ ಅಲ್ಲಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ಹೈದರಲಿ 1761ರಲ್ಲಿ ಮೈಸೂರಿನ ಅರಸನಾದ. ಅವನ ಆಡಳಿತಕ್ಕೆ ಈಸ್ಟ್ ಇಂಡಿಯಾ ಕಂಪೆನಿಯ ನೇತೃತ್ವದಲ್ಲಿ ಮರಾಠರು, ಹೈದರಾಬಾದ್‌ನ ನಿಜಾಮ ಮುಂತಾದವರಿಂದ ಬೆದರಿಕೆಯುಂಟಾಗಿತ್ತು.

ಆಗ ಉತ್ತರ ಕೇರಳ ಹಲವು ಚಿಕ್ಕ ಚಿಕ್ಕ ಪ್ರಾಂತಗಳಾಗಿ ಚದರಿಕೊಂಡಿತ್ತು. ಹೈದರಲಿ 1766ರ ಫೆಬ್ರವರಿಯಲ್ಲಿ ಮಂಗಳೂರು ಮತ್ತು ಕಣ್ಣೂರಿನ ಮೂಲಕ ಮಲಬಾರ್ ಮೇಲೆ ದಾಳಿ ಮಾಡಿದ. ಪಾಲ್ಗಾಟ್‌ನ ರಾಜ ಕಲ್ಲಿಕೋಟೆಯ ಜಾಮೊರಿನ್ ಜೊತೆಗಿನ ತನ್ನ ಜಗಳದಲ್ಲಿ ತನಗೆ ನೆರವಾಗುವಂತೆ ಹೈದರಲಿಯನ್ನು ಕೇಳಿಕೊಂಡ. ಹೈದರ್‌ನ ಮಗ, ಆಗ ತನ್ನ ಹದಿಹರೆಯದಲ್ಲಿದ್ದಿರಬಹುದಾದ ಟಿಪ್ಪು, ತನ್ನ ತಂದೆಯ ಈ ದಂಡಯಾತ್ರೆಯಲ್ಲಿ ಸೇರಿಕೊಂಡ.

 ಹೈದರ್‌ನ ದಾಳಿ ಯಶಸ್ವಿಯಾಯಿತು. ಆತ ಮಲಬಾರ್‌ನ ಚಿಕ್ಕಪುಟ್ಟ ಪ್ರಾಂತಗಳನ್ನು ಗೆದ್ದುಕೊಂಡ. ಕಲ್ಲಿಕೋಟೆಯ ಜಾಮೊರಿನ್ ಸೋತು ಕಪ್ಪಕಾಣಿಕೆ ಕೊಡಲೇಬೇಕಾಯಿತು. ಪರಿಣಾಮವಾಗಿ ಆತ ಆತ್ಮಹತ್ಯೆ ಮಾಡಿಕೊಂಡ. ಹೈದರ್ ಕೊಚ್ಚಿ ಮೂಲಕ ತಿರುವಾಂಕೂರಿನವರೆಗೂ ದಂಡಯಾತ್ರೆ ಮುಂದುವರಿಸಲು ಬಯಸಿದನಾದರೂ ಮಳೆಗಾಲದಿಂದಾಗಿ ಅದು ಸಾಧ್ಯವಾಗಲಿಲ್ಲ. ಮಾದಣ್ಣ ಎಂಬಾತನನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಹೈದರ್ ಮೈಸೂರಿಗೆ ಮರಳಿದ. ಆ ಬಳಿಕ, ನಾಯರ್‌ಗಳು ನಡೆಸಿದ ಬಂಡಾಯವನ್ನು ಹೈದರ್ ಹತ್ತಿಕ್ಕಿದನಾದರೂ, ಆತನ ದಾಳಿಯ ಪರಿಣಾಮವಾಗಿ ನಂಬೂದರಿಗಳು ಹಾಗೂ ನಾಯರ್‌ಗಳೂ ಸೇರಿದಂತೆ ಮೇಲ್ಜಾತಿಯ ಹಲವಾರು ಹಿಂದೂಗಳು ಮಲಬಾರ್‌ನಿಂದ ತಿರುವಾಂಕೂರಿಗೆ ಪಲಾಯನಗೈದರು.

ಕೃಪೆ: frontline.in

Writer - ವಿಖಾರ್ ಅಹಮದ್ ಸಯೀದ್

contributor

Editor - ವಿಖಾರ್ ಅಹಮದ್ ಸಯೀದ್

contributor

Similar News

ಜಗದಗಲ
ಜಗ ದಗಲ