ನಿಮ್ಮ ಬಾಯಿ ಒಣಗುತ್ತಿದೆಯೇ..? ಹಾಗಾದರೆ ಇದನ್ನು ತಿಳಿದುಕೊಳ್ಳಿ

Update: 2018-02-18 11:44 GMT

ಆಹಾರ ಜಗಿಯುವಾಗ ಕಷ್ಟವಾಗಿ ಬಾಯಿ ಒಣಗಿದಂತೆ ಭಾಸವಾಗುತ್ತದೆಯೇ? ನಿಮ್ಮ ಜೊಲ್ಲು ದಪ್ಪ ಮತ್ತು ಮಂದವಾಗಿದೆ ಎಂದು ಅನ್ನಿಸುತ್ತದೆಯೇ? ಪ್ರತಿ ದಿನ ಬೆಳಿಗ್ಗೆ ಎಷ್ಟೇ ಸ್ವಚ್ಛಗೊಳಿಸಿದರೂ ನಾಲಿಗೆಯ ಮೇಲೆ ಬಿಳಿಯ ಪದರವಿರುತ್ತದೆಯೇ?

ಈ ಪೈಕಿ ಯಾವುದೇ ಒಂದು ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ನೀವು ಒಣಬಾಯಿ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆಯಿದೆ. ಬಾಯಿಯಲ್ಲಿ ಸಾಕಷ್ಟು ಜೊಲ್ಲು ಉತ್ಪತ್ತಿಯಾಗದಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲ ಎಂಬಂತೆ ಕಂಡು ಬಂದರೂ ಸಾಮಾನ್ಯವಾಗಿ ಅದು ಇತರ ಅನಾರೋಗ್ಯಗಳ ಲಕ್ಷಣವಾಗಿರಬಹುದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಅದು ಹಲ್ಲುಗಳ ಮತ್ತು ಶರೀರದಲ್ಲಿನ ಇತರ ತೊಂದರೆಗಳಿಗೆ ಕಾರಣವಾಗಬಹುದು.

ಬಾಯಿ ಒಣಗುವುದಕ್ಕೆ ಕಾರಣಗಳಿಲ್ಲಿವೆ

►ಬಾಯಿಯಿಂದ ಉಸಿರಾಟ

ಬಾಯಿಯಿಂದ ಉಸಿರಾಡುವುದು ಬಾಯಿ ಒಣಗುವುದಕ್ಕೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಅಲರ್ಜಿಗಳು, ಶೀತದಿಂದ ಮೂಗು ಕಟ್ಟುವುದು ಅಥವಾ ದಂತಪಕ್ತಿಗಳು, ಸ್ಪ್ಲಿಂಟ್ ಮತ್ತು ರಿಟೇನರ್‌ಗಳನ್ನು ರಾತ್ರಿ ವೇಳೆ ಬಳಸುವುದು ಇದಕ್ಕೆ ನಾಂದಿ ಹಾಡುತ್ತದೆ. ರಾತ್ರಿ ವೇಳೆ ಬಾಯಿಯ ಮೂಲಕ ಉಸಿರಾಟ ನಡೆಯುತ್ತಿದ್ದಾಗ ಸುದೀರ್ಘ ಸಮಯ ಬಾಯಿ ತೆರೆದುಕೊಂಡೇ ಇರುತ್ತದೆ. ಇದು ಬಾಯಿ ಒಣಗಲು ಕಾರಣವಾಗುತ್ತದೆ. ಬಾಯಿಯಿಂದ ಉಸಿರಾಟ ಮತ್ತು ಬಾಯಿ ಒಣಗುವುದನ್ನು ತಪ್ಪಿಸಲು ಮೂಲಸಮಸ್ಯೆ ಯನ್ನು ಪತ್ತೆ ಹಚ್ಚಿ ಅದನ್ನು ಪರಿಹರಿಸಿಕೊಳ್ಳುವುದು ಅಗತ್ಯವಾಗುತ್ತದೆ.

►ಒತ್ತಡ ಮತ್ತು ಉದ್ವೇಗ

ಒತ್ತಡ ಮತ್ತು ಉದ್ವೇಗಗಳು ಬಾಯಿಯಲ್ಲಿ ಜೊಲ್ಲಿನ ಹರಿವನ್ನು ಕಡಿಮೆಗೊಳಿಸುತ್ತವೆ. ಆದರೆ ಇದು ಬಹುಕಾಲ ಇರುವುದಿಲ್ಲ. ಆದರೆ ಹೆಚ್ಚಿನ ಸಲ ನೀವು ಸೇವಿಸುತ್ತಿರುವ ಔಷಧಿಗಳು ಬಾಯಿ ಒಣಗುವುದಕ್ಕೆ ಕಾರಣವಾಗುತ್ತವೆ. ಅದು ಖಿನ್ನತೆ ನಿವಾರಕ, ಉದ್ವೇಗ ನಿವಾರಕ ಮತ್ತು ಮಾನಸಿಕ ಅಸ್ವಾಸ್ಥವನ್ನು ನಿವಾರಿಸುವ ಔಷಧಿಗಳ ಅಡ್ಡಪರಿಣಾಮ ವಾಗಿರುತ್ತದೆ. ಆದರೆ ಈ ಔಷಧಿಗಳ ಸೇವನೆಯನ್ನು ನಿಲ್ಲಿಸಿದಾಗ ಈ ಅಡ್ಡಪರಿಣಾಮವೂ ಮಾಯವಾಗುತ್ತದೆ.

►ಔಷಧಿಗಳು

ಹಲವಾರು ಔಷಧಿಗಳ ಅಡ್ಡಪರಿಣಾಮವಾಗಿ ಬಾಯಿ ಒಣಗುತ್ತದೆ. ರಕ್ತದೊತ್ತಡ ತಗ್ಗಿಸುವ, ಸ್ನಾಯುಗಳನ್ನು ಸಡಿಲಿಸುವ, ನೋವು ನಿವಾರಕ ಮತ್ತು ಮೂತ್ರವರ್ಧಕ ಔಷಧಿಗಳು ಇವುಗಳಲ್ಲಿ ಸೇರಿವೆ. ಔಷಧಿಗಳಿಂದ ಉಂಟಾಗುವ ಒಣಬಾಯಿಯು ತಾತ್ಕಾಲಿಕವಾಗಿರುತ್ತದೆ. ಆದರೆ ನೀವು ಔಷಧಿಗಳನ್ನು ಸೇವಿಸುತ್ತಿರುವವರೆಗೂ ಸಕ್ಕರೆರಹಿತ ಚ್ಯೂಯಿಂಗ್ ಗಮ್ ಅಗಿಯುವ, ಆಗಾಗ್ಗೆ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವ ಅಥವಾ ಮಂಜುಗಡ್ಡೆಯನ್ನು ಚೀಪುವ ಮೂಲಕ ಬಾಯಿಯಲ್ಲಿ ಸಾಕಷ್ಟು ಜೊಲ್ಲು ಹರಿದಾಡುವಂತೆ ನೋಡಿಕೊಳ್ಳಬೇಕಾಗುತ್ತದೆ.

►ಮಧುಮೇಹ

ಬಾಯಿ ಒಣಗುವಿಕೆಯು ಅಧಿಕ ರಕ್ತದೊತ್ತಡದ ಸಾಮಾನ್ಯ ಲಕ್ಷಣವಾಗಿದೆ. ಅದು ಮಧುಮೇಹದ ಅಡ್ಡಪರಿಣಾಮಗಳನ್ನು ತೀವ್ರಗೊಳಿಸಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಮತ್ತೆ ಹೆಚ್ಚಿಸಬಹುದು. ಒಣಬಾಯಿ ಕೇವಲ ಲಕ್ಷಣವಲ್ಲ, ಅದು ಮಧುಮೇಹಕ್ಕೆ ಕಾರಣವಾಗಬಹುದು. ಮಧುಮೇಹದೊಂದಿಗೆ ಬಾಯಿ ಒಣಗುವ ಸಮಸ್ಯೆಯು ತ್ವರಿತ ದಂತಕ್ಷಯಕ್ಕೆ ಕಾರಣವಾಗಬಹುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ಶರೀರದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು.

►ನಿರ್ಜಲೀಕರಣ

ನಮ್ಮ ಶರೀರವು ನಿರ್ಜಲೀಕರಣಗೊಂಡಾಗ ಬಾಯಿಯಲ್ಲಿನ ಜೊಲ್ಲು ಹೆಚ್ಚು ಮಂದವಾಗುತ್ತದೆ ಮತ್ತು ಅದರ ಹರಿವು ಕಡಿಮೆಯಾಗುತ್ತದೆ. ನೀರನ್ನು ಹೆಚ್ಚೆಚ್ಚು ಕುಡಿಯುವ ಮೂಲಕ ಇದನ್ನು ನಿವಾರಿಸಬಹುದಾಗಿದೆ.

►ಜೀವನಶೈಲಿ

ಧೂಮ್ರಪಾನ, ತಂಬಾಕು ತಿನ್ನುವಿಕೆ, ಅತಿಯಾದ ಕಾಫಿ ಸೇವನೆ ಮತ್ತು ಮದ್ಯಪಾನದಂತಹ ಚಟಗಳು ನಮ್ಮ ಬಾಯಿಯನ್ನು ಒಣಗಿಸುತ್ತವೆ ಮತ್ತು ಸದ್ಯದ ಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಈ ಚಟಗಳನ್ನು ವರ್ಜಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಈ ಸಮಸ್ಯೆಯ ನಿವಾರಣೆಗೆ ಉತ್ತಮ ಮಾರ್ಗವಾಗಿದೆ.

►ವಿಕಿರಣ ಚಿಕಿತ್ಸೆ

ಕ್ಯಾನ್ಸರ್ ಗುಣಪಡಿಸಲು ತಲೆ ಮತ್ತು ಕುತ್ತಿಗೆಗೆ ನೀಡುವ ವಿಕಿರಣ ಚಿಕಿತ್ಸೆಯು ಜೊಲ್ಲಿನ ಗ್ರಂಥಿಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದ ಜೊಲ್ಲಿನ ಸ್ರವಿಸುವಿಕೆ ಕಡಿಮೆಯಾಗಿ ಬಾಯಿ ಒಣಗಲು ಕಾರಣವಾಗುತ್ತದೆ.

ಜೊಲ್ಲು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಿಲ್ಲದಿದ್ದರೆ ಹಲವಾರು ಕಾಯಿಲೆಗಳಿಗೆ ನಮ್ಮ ಶರೀರವು ಸುಲಭದಲ್ಲಿ ತುತ್ತಾಗುತ್ತದೆ. ಹೀಗಾಗಿ ಬಾಯಿ ಒಣಗುವ ಸಮಸ್ಯೆಯಿದ್ದರೆ ವೈದ್ಯರನ್ನು ಕಂಡು ಅಂತರ್ಗತ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News