ಪಂಚಕುಲ ಹಿಂಸಾಚಾರ : 53 ಮಂದಿ ಡೇರಾ ಅನುಯಾಯಿಗಳ ವಿರುದ್ಧದ ಕೊಲೆಯತ್ನ, ದೇಶದ್ರೋಹ ಆರೋಪ ಕೈಬಿಟ್ಟ ನ್ಯಾಯಾಲಯ

Update: 2018-02-19 10:58 GMT

ಪಂಚಕುಲ,ಫೆ.19 : ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ  53 ಮಂದಿ ಡೇರಾ ಸಚ್ಚಾ ಸೌದಾ ಅನುಯಾಯಿಗಳ ವಿರುದ್ಧ ದಾಖಲಾಗಿದ್ದ ಕೊಲೆಯತ್ನ ಹಾಗೂ ದೇಶದ್ರೋಹದ ಆರೋಪಗಳನ್ನು  ಹರ್ಯಾಣದ ಪಂಚಕುಲ ನ್ಯಾಯಾಲಯ ಸೋಮವಾರ ಕೈಬಿಟ್ಟಿದೆ.

ಈ 53 ಮಂದಿಯ ವಿರುದ್ಧದ ಆರೋಪಗಳನ್ನು ಪುಷ್ಠೀಕರಿಸಲು ಸಿಸಿಟಿವಿ ದಾಖಲೆಗಳ ಸಹಿತ ಬಲವಾದ ಸಾಕ್ಷ್ಯಗಳನ್ನು  ಸಲ್ಲಿಸಲು ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಕೈಬಿಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಿಗಳ ಪೈಕಿ ಪಂಚಕುಲ ಡೇರಾ ಉಸ್ತುವಾರಿ ಚಮಕೌರ್ ಸಿಂಗ್ ಹಾಗೂ ಮಾಧ್ಯಮ ಸಂಘಟಕ ಸುರೀಂದರ್ ಧಿಮನ್ ಇನ್ಸಾನ್ ಕೂಡ ಸೇರಿದ್ದಾರೆ.  ಅವರೆಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307, 121 ಹಾಗೂ 121-ಎ ಅನ್ವಯ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡಲಾಗಿದೆ. ಆದರೆ ಅವರೆಲ್ಲರೂ  ಪಂಚಕುಲಾದ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಿಂಸಾಚಾರ ಮತ್ತು ಇತರ  ಆರೋಪಗಳಿಗೆ ವಿಚಾರಣೆ ಎದುರಿಸಲಿದ್ದಾರೆ.

ಕಳೆದ ವರ್ಷ ಡೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್ ನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಿಬಿಐ ನ್ಯಾಯಾಲಯ ಘೋಷಿಸುತ್ತಿದ್ದಂತೆಯೇ ಡೇರಾ ಅನುಯಾಯಿಗಳು ನಡೆಸಿದ ಹಿಂಸಾಚಾರದಲ್ಲಿ 36 ಮಂದಿ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News