60 ಮೀ. ಓಟ: ಕ್ರಿಸ್ಟಿಯನ್ ಕೋಲ್ಮನ್ ವಿಶ್ವ ದಾಖಲೆ

Update: 2018-02-19 18:16 GMT

ಲಾಸ್ ಏಂಜಲಿಸ್, ಫೆ.19: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಕ್ರಿಸ್ಟಿಯನ್ ಕೋಲ್ಮನ್ ಅಮೆರಿಕದ ಇಂಡೋರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನ 60 ಮೀ. ಓಟದಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ರವಿವಾರ ನಡೆದ ಪಂದ್ಯದಲ್ಲಿ 6.34 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅಮೆರಿಕದ ಉದಯೋನ್ಮುಖ ಸ್ಟಾರ್ ಓಟಗಾರಕೋಲ್ಮನ್ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ತಮ್ಮದೇ ದೇಶದ ಓಟಗಾರ ವೌರಿಸ್ ಗ್ರೀನ್ ನಿರ್ಮಿಸಿದ್ದ 20 ವರ್ಷಗಳ ಹಳೆಯ ದಾಖಲೆಯನ್ನು(6.39 ಸೆ.) ಮುರಿದರು.

21ರ ಹರೆಯದ ಕೋಲ್ಮನ್ ಲಂಡನ್‌ನಲ್ಲಿ ಕಳೆದ ವರ್ಷ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಓಟದಲ್ಲಿ 9.82 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದ್ದಾರೆ. ಜಸ್ಟಿನ್ ಗ್ಯಾಟ್ಲಿನ್ ಮೊದಲನೇ ಸ್ಥಾನ ಪಡೆದರೆ, ಉಸೇನ್ ಬೋಲ್ಟ್ ಮೂರನೇ ಸ್ಥಾನ ಪಡೆದಿದ್ದರು.

ಕೋಲ್ಮನ್ ಮುಂದಿನ ತಿಂಗಳು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಐಎಎಎಫ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News