ಟೆನಿಸ್ ರ‍್ಯಾಂಕಿಂಗ್‌: ಭಾಂಬ್ರಿಗೆ ಭಡ್ತಿ, ಸಾನಿಯಾ ಸ್ಥಾನ ಭದ್ರ

Update: 2018-02-19 18:34 GMT

ಹೊಸದಿಲ್ಲಿ, ಫೆ.19: ಚೆನ್ನೈ ಓಪನ್ ಟೆನಿಸ್ ಚಾಲೆಂಜರ್ ಟೂರ್ನಮೆಂಟ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಪಡೆದಿರುವ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 11 ಸ್ಥಾನ ಭಡ್ತಿ ಪಡೆದಿದ್ದಾರೆ. ಅಗ್ರ-100ರಲ್ಲಿ ಸ್ಥಾನ ಪಡೆಯುವತ್ತ ಚಿತ್ತವಿರಿಸಿದ್ದಾರೆ.

ಚೆನ್ನೈ ಓಪನ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಜೋರ್ಡನ್ ಥಾಂಪ್ಸನ್‌ಗೆ ಸೋತಿದ್ದ ಭಾಂಬ್ರಿ 48 ರ‍್ಯಾಂಕಿಂಗ್‌ ಪಾಯಿಂಟ್ಸ್ ಹಾಗೂ 4240 ಡಾಲರ್ ಬಹುಮಾನ ಮೊತ್ತ ಗಳಿಸಿದ್ದರು. 11 ಸ್ಥಾನ ಭಡ್ತಿ ಪಡೆದಿರುವ ಭಾಂಬ್ರಿ 101ನೇ ರ‍್ಯಾಂಕಿನಲ್ಲಿದ್ದಾರೆ. ಸಹ ಆಟಗಾರರಾದ ರಾಮ್‌ಕುಮಾರ್ ರಾಮನಾಥನ್(140), ಸುಮಿತ್ ನಗಾಲ್(216) ಹಾಗೂ ಪ್ರಜ್ಞೇಶ್ ಗುಣೇಶ್ವರನ್(242) ನಂತರದ ಸ್ಥಾನದಲ್ಲಿದ್ದಾರೆ.

ಭಾಂಬ್ರಿ 2015ರ ನವೆಂಬರ್‌ನಲ್ಲಿ ಜೀವನಶ್ರೇಷ್ಠ 88ನೇ ರ‍್ಯಾಂಕಿಗೆ ತಲುಪಿದ್ದರು.

ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ(20) ಹಾಗೂ ಡಿವಿಜ್ ಶರಣ್(42) ರ‍್ಯಾಂಕಿಂಗ್‌ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಲಿಯಾಂಡರ್ ಪೇಸ್ 2 ಸ್ಥಾನ ಕಳೆದುಕೊಂಡು 49ನೇ ಸ್ಥಾನದಲ್ಲಿದ್ದಾರೆ. ಪೂರವ್ ರಾಜಾ 57ನೇ ಸ್ಥಾನದಲ್ಲಿದ್ದಾರೆ. ಡಬ್ಲುಟಿಎ ರ‍್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ ಭಾರತದ ನಂ.1 ಸಿಂಗಲ್ಸ್ ಆಟಗಾರ್ತಿಯಾಗಿ ಮುಂದುವರಿದಿದ್ದು, 255ನೇ ಸ್ಥಾನ ದಲ್ಲಿದ್ದಾರೆ. ಕರ್ಮಾನ್ ಕೌರ್ 281ನೇ ರ‍್ಯಾಂಕಿನಲ್ಲಿದ್ದಾರೆ.

ಡಬಲ್ಸ್ ಪಂದ್ಯದಿಂದ ದೂರ ಉಳಿದಿರುವ ಸಾನಿಯಾ ಮಿರ್ಝಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News