ರೈತರ ಪಾಲಿನ ದೊಡ್ಡಣ್ಣ

Update: 2018-02-20 03:07 GMT

ರೈತ ಹೋರಾಟದ ಕೊನೆಯ ಕೊಂಡಿಯಂತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅನಿರೀಕ್ಷಿತವಾಗಿ ಕಳಚಿಕೊಂಡಿದ್ದಾರೆ. ಒಂದು ಕಾಲದ ರೈತ ಸಂಘದ ಹೋರಾಟಗಳ ಪಳಯುಳಿಕೆಯಂತೆ ನಮ್ಮ ನಡುವೆ ಬದುಕಿದ್ದ ಅವರು ಸದ್ಯದ ರೈತ ವಿರೋಧಿ ಸರಕಾರಗಳ ವಿರುದ್ಧ ಗಾಳಿಗೆ ಸಿಲುಕಿ ಒದ್ದಾಡುತ್ತಿರುವ ಮಿಣುಕು ಚಿಮಿಣಿ ದೀಪದಂತಿದ್ದರು. ಇದೀಗ ಆ ಬೆಳಕು ನಂದಿದೆ. ಒಂದು ಕಾಲದಲ್ಲಿ ರೈತರು ಸಮಾವೇಶ ನಡೆಸುವ ಮೂಲಕ ಸರಕಾರವನ್ನು ನಡುಗಿಸುತ್ತಿದ್ದರೆ, ಇಂದು ರೈತರು ಆತ್ಮಹತ್ಯೆಗಳ ಮೂಲಕ ಮಾತ್ರ ಸುದ್ದಿಯಲ್ಲಿದ್ದಾರೆ. ರೈತರು ಒಬ್ಬೊಬ್ಬರಾಗಿ ಕಾಲದ ಮರೆಗೆ ಸರಿಯುತ್ತಿದ್ದಾರೆ. ರೈತರ ಮಕ್ಕಳು ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಹಿಂಜರಿಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ರೈತರ ಪರವಾಗಿ ಪುಟ್ಟಣ್ಣಯ್ಯ ಒಂಟಿ ಚಿರತೆಯಂತೆ ಖೂಳರ ವಿರುದ್ಧ ಹೋರಾಡುತ್ತಾ ಬಂದವರು.ಅವರ ಮಾತುಗಳು ಈ ದೇಶದ ರೈತರ ಕಟ್ಟ ಕಡೆಯ ಚೀತ್ಕಾರದಂತಿರುತ್ತಿತ್ತು. ಇದೀಗ ಆ ಚೀತ್ಕಾರವೂ ವೌನವಾಗಿದೆ.

‘‘ರೈತನೇ ಈ ದೇಶದ ನಿಜವಾದ ಸಾಹಿತಿ. ಕೃಷಿಯೇ ನಿಜವಾದ ಸಾಹಿತ್ಯ. ಇಂದು ಇಲ್ಲಿ ಸೇರಿರುವ ಸಾಹಿತಿಗಳು, ಕವಿಗಳು ತಮ್ಮ ಕಾವ್ಯ, ಸಾಹಿತ್ಯದ ಬಗ್ಗೆ ಚರ್ಚೆಗಳನ್ನು ಯಾಕೆ ಮಾಡುತ್ತಿದ್ದೀರಿ ಎಂದರೆ ನಿಮ್ಮೆಲ್ಲರ ಹೊಟ್ಟೆ ತುಂಬಿದೆ. ಹೊಟ್ಟೆ ತುಂಬಿದ ಬಳಿಕವೇ ಸಾಹಿತ್ಯ, ಕಾವ್ಯಗಳ ಕುರಿತಂತೆ ಚರ್ಚೆ ಸಾಧ್ಯ. ರೈತ ಕೃಷಿ ಮಾಡದೇ ಇದ್ದರೆ ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿ ಮಾಡುವುದು ಅಸಾಧ್ಯ. ಆದುದರಿಂದ ಸಾಹಿತಿಗಳು, ಕವಿಗಳು ತಮ್ಮ ಹೊಟ್ಟೆ ತುಂಬಿಸಿದ ರೈತನ ಬಗ್ಗೆ, ಆತನ ಸಂಕಟಗಳ ಬಗ್ಗೆ ಮಾತನಾಡುವುದು ಮೊದಲ ಕರ್ತವ್ಯವಾಗಿದೆ’’ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ದಿವಂಗತ ಕೆ.ಎಸ್.ಪುಟ್ಟಣಯ್ಯ ಆಡಿದ ಮಾತುಗಳಿವು. ಖ್ಯಾತ ಚಿಂತಕ ದಿವಂಗತ ಯು. ಆರ್. ಅನಂತಮೂರ್ತಿಯವರು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎಲ್ಲ ಹಿರಿಯ ಸಾಹಿತಿಗಳ ಸಮ್ಮುಖದಲ್ಲೇ ಯಾವ ಹಿಂಜರಿಕೆಯೂ ಇಲ್ಲದೆ, ರೈತನ ಸಂಕಟಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮುಂದಿಟ್ಟಿದ್ದ ಅವರು, ಇಂತಹ ಸಮ್ಮೇಳನಗಳಲ್ಲಿ ರೈತ ಸಮೂಹದ ಪ್ರಾತಿನಿಧ್ಯದ ಅಗತ್ಯವನ್ನು ಒತ್ತಿ ಹೇಳಿದ್ದರು. ಹೀಗೆ ತಮ್ಮ ನಿಷ್ಠುರ ಮಾತುಗಳ ಮೂಲಕ ಪ್ರೊ. ನಂಜುಂಡಸ್ವಾಮಿಯ ಸ್ಥಾನವನ್ನು ಸಣ್ಣ ಮಟ್ಟದಲ್ಲಾದರೂ ತುಂಬಿದ್ದರು. ಪುಟ್ಟಣ್ಣ ಅವರ ಹಸಿರು ಶಾಲಿಗೆ ರಾಜಕಾರಣಿಗಳು, ಅಧಿಕಾರಿಗಳೂ ಹೆದರುತ್ತಿದ್ದದ್ದು, ರೈತರ ಕುರಿತಂತೆ ಅವರೊಳಗಿದ್ದ ಪ್ರಾಮಾಣಿಕ ಕಳಕಳಿಗಾಗಿತ್ತು. ರೈತರ ಪರ ಸಾಮಾಜಿಕ ಹೋರಾಟ ನಡೆಸುವುದು ಸುಲಭ. ಒಂದು ಅಥವಾ ಎರಡು ಸಮಾವೇಶಗಳನ್ನು ನಡೆಸಿ ರೈತ ನಾಯಕನೆಂದೂ ಸ್ವಯಂ ಘೋಷಿಸಿಕೊಂಡು ಬಿಡಬಹುದು. ಆದರೆ ಆತ ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭವಿಲ್ಲ.

ಇಂದು ಚುನಾವಣೆಯನ್ನು ಎದುರಿಸಲು ರಾಜಕೀಯ ಶಕ್ತಿಗಳು ಅಡ್ಡದಾರಿಗಳನ್ನು ಆರಿಸಿಕೊಳ್ಳುತ್ತಿವೆ. ಹಣ, ಹೆಂಡ ಮತ್ತು ಗೂಂಡಾಗಳ ಶಕ್ತಿಯಿರುವ ನಾಯಕನಷ್ಟೇ ಗೆಲ್ಲಬಲ್ಲ ಎಂಬ ವಾತಾವರಣವಿದೆ. ಅಥವಾ ಬರೇ ಒಂದು ಕೋಮುಗಲಭೆಯನ್ನು ನಡೆಸಿ, ಒಂದು ಉದ್ವಿಗ್ನಕಾರಿ ಹೇಳಿಕೆಯನ್ನು ನೀಡಿ ರಾತ್ರೋರಾತ್ರಿ ನಾಯಕನಾಗಿ ಓಟಿಗೆ ನಿಂತು ಗೆಲ್ಲುವವರೂ ಹೆಚ್ಚುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರ ನಿಜವಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವುದು ಸಣ್ಣ ವಿಷಯವಲ್ಲ. ಹೋರಾಟಗಳ ಮೂಲಕವೇ ಜನರನ್ನು ತಲುಪಿ, ಅವರ ಪ್ರೀತಿಯನ್ನು ಮತವಾಗಿ ಪರಿವರ್ತಿಸಿ ಎರಡು ಬಾರಿ ಗೆದ್ದ ಹೆಗ್ಗಳಿಕೆ ಪುಟ್ಟಣ್ಣಯ್ಯ ಅವರದು. ಬಹುಶಃ ರೈತರ ಸಮಸ್ಯೆ, ಸೌಹಾರ್ದ ಸಮಾಜ, ಕನ್ನಡ ಭಾಷೆ, ದಲಿತರ ಸಂಕಟಗಳಂತಹ ವಿಷಯಗಳನ್ನಿಟ್ಟುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಬಲ್ಲ ಒಬ್ಬನೇ ಒಬ್ಬ ಅಭ್ಯರ್ಥಿ ಇಂದು ಕಾಣುತ್ತಿಲ್ಲ. ಪುಟ್ಟಣ್ಣಯ್ಯ ಸೃಷ್ಟಿಸಿರುವ ಈ ನಿರ್ವಾತವನ್ನು ತುಂಬುವ ಬಗೆ ಹೇಗೆ ಎನ್ನುವುದೇ ಹೋರಾಟಗಾರರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಎನ್.ಡಿ.ಸುಂದರೇಶ್ ಅವರ ನೆನಪು ಕಾರ್ಯಕ್ರಮದಲ್ಲಿ ಪುಟ್ಟಣ್ಣಯ್ಯ ಆಡಿದ ಮಾತುಗಳು ಪರೋಕ್ಷವಾಗಿ ಇಂತಹದೇ ಪ್ರಶ್ನೆಯೊಂದನ್ನು ಕೇಳಿತ್ತು ‘‘ನಾನು ಭಾಷಣ ಮಾಡಿ ಮಾಡಿ ಮುದುಕನಾದೆ. ನೀವು ಭಾಷಣ ಕೇಳಿ ಕೇಳಿ ವೃದ್ಧರಾದಿರಿ. ಹೊಸಬರು, ಯುವಕರು ಬರಲಿಲ್ಲ. ಹೀಗೆಯೇ ನಾವು ಭಾಷಣ ಮಾಡುತ್ತ ಒಂದು ದಿನ ಸಾಯುತ್ತೇವೆ. ನೀವು ಕೇಳುತ್ತಲೇ ಸಾಯುತ್ತೀರಿ. ಹೊಸಬರು, ಯುವಕರು ಬರುತ್ತಿಲ್ಲ. ಅದೇ ಹಳೆ ತಲೆಗಳು, ಅದೇ ಹಸಿರು ಶಾಲುಗಳು...’’. ಅಷ್ಟೇ ಅಲ್ಲ, ಶ್ರಮ ಸಂಸ್ಕೃತಿಯ ಕುರಿತಂತೆ ಯುವಕರ ನಿರ್ಲಕ್ಷಗಳ ಬಗ್ಗೆ ಅವರಿಗೆ ಅಪಾರವಾದ ನೋವಿತ್ತು. ‘‘ಜೈಲಿನಲ್ಲಿ ಆರು ತಿಂಗಳು ಇದ್ದ ಕೈದಿ ಅಲ್ಲಿಂದ ಹೊರ ಬಂದ ಬಳಿಕ ಅಲ್ಲಿ ಕಲಿತ ಕಲಿಕೆಯನ್ನು ಬಳಸಿಕೊಂಡು ಊದಿನ ಕಡ್ಡಿ, ಚೀಲ ಹೊಲಿದು ಉದ್ಯೋಗ ಸೃಷ್ಟಿಸಿಕೊಳ್ಳುತ್ತಾನೆ. ಆದರೆ ಎರಡು ಮೂರು ಡಿಗ್ರಿ ಮಾಡಿದ ನಮ್ಮ ಯುವಕರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ’’ ಎನ್ನುತ್ತಾ ವರ್ತಮಾನ ಸಮಸ್ಯೆಗಳನ್ನು ವಾಸ್ತವ ಕಣ್ಣಿನಲ್ಲಿ ಪುಟ್ಟಣ್ಣಯ್ಯ ನಿರೂಪಿಸಿದ್ದರು.

ಪುಟ್ಟಣ್ಣಯ್ಯ ಬರೇ ರೈತ ಚಳವಳಿಗಳಲ್ಲಿ ಮಾತ್ರ ಗುರುತಿಸಿಕೊಂಡವರಲ್ಲ. ತುಂಗಾ ಮೂಲ ಚಳವಳಿ, ಬಾಬಾಬುಡಾನ್‌ಗಿರಿ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದರು. ನಾಡನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ ಎಲ್ಲ ಜನಪರ ಹೋರಾಟಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಇಂದು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದರ ಕುರಿತಂತೆ ಮಾತುಗಳು ಕೇಳಿ ಬರುತ್ತಿವೆ. ಕೆಲವರು ಜೆಡಿಎಸ್‌ನಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಗುರುತಿಸುವ ತಪ್ಪುಕೆಲಸವನ್ನು ಮಾಡುತ್ತಿದ್ದಾರೆ. ಪುಟ್ಟಣ್ಣಯ್ಯ ಅವರಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟುವ ಎಲ್ಲ ಶಕ್ತಿಯಿತ್ತು. ಹಾಗೆ ನೋಡಿದರೆ ಅವರೇ ಒಂದು ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡಿದವರು. ಈ ದೇಶದಲ್ಲಿ ಇದೀಗ ಕಣ್ಣು ಬಿಡುತ್ತಿರುವ ಸ್ವರಾಜ್ ಇಂಡಿಯಾದ ಏಕೈಕ ಶಾಸಕ ನಾನು ಎಂದು ಪುಟ್ಟಣ್ಣಯ್ಯ ಈ ಹಿಂದೆ ಹೇಳಿಕೊಂಡಿದ್ದರು. ಅವರಿಗೆ ಒಂದಿಷ್ಟು ಸಮಯ ಸಿಕ್ಕಿದ್ದಿದ್ದರೆ, ಕೆಲವೇ ವರ್ಷಗಳಲ್ಲಿ ಅವರು ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದರೋ ಏನೋ? ಅದೇನೇ ಇರಲಿ. ಮಂಗಳವಾರ ಅವರ ಅಂತ್ಯಕ್ರಿಯೆ. ಅವರನ್ನು ದೇಹವನ್ನು ಮಣ್ಣು ಮಾಡುವ ದಿನವೆಂದು ತಿಳಿಯದೆ, ಪುಟ್ಟಣ್ಣಯ್ಯ ಎನ್ನುವ ರೈತನ ಮಗನನ್ನು ಭೂಮಿಯಲ್ಲಿ ಬಿತ್ತುತ್ತಿದ್ದೇವೆ ಎಂದು ಭಾವಿಸೋಣ. ಬೇಕಾದ ಗೊಬ್ಬರಗಳು ಬಿದ್ದರೆ ಮುಂದಿನ ದಿನಗಳಲ್ಲಿ ನೂರಾರು ಪುಟ್ಟಣ್ಣಯ್ಯರನ್ನು ಸೃಷ್ಟಿಸುವ ಗಿಡವೊಂದು ಅಲ್ಲಿ ಮೊಳಕೆಯೆದ್ದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News