'ಭಾರತದ ಬೃಹತ್ ನೈರ್ಮಲ್ಯ ಸಮಸ್ಯೆ' ಮತ್ತು ಪರಿಹಾರದ ಪ್ರಯತ್ನ

Update: 2018-02-19 18:42 GMT

ದುರದೃಷ್ಟವಶಾತ್ ನಮ್ಮ ದೇಶದಲ್ಲಿ 732 ಮಿಲಿಯ ಜನರಿಗೆ ಇನ್ನೂ ಶೌಚಾಲಯಗಳ ಸವಲತ್ತು ಇಲ್ಲ; ತೆರೆದ ಬಯಲಲ್ಲಿ ಮಲವಿಸರ್ಜಿಸುವ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಪಾಲಿಗಿಂತಲೂ ಹೆಚ್ಚು ಮಂದಿ ಭಾರತೀಯರೇ ಆಗಿದ್ದಾರೆ. ಹಾಗೆಯೇ ಶುದ್ಧ ಕುಡಿಯುವ ನೀರಿನಿಂದ ವಂಚಿತರಾದ ಅತ್ಯಂತ ಬೃಹತ್ ಗ್ರಾಮೀಣ ಜನಸಂಖ್ಯೆ ಭಾರತದಲ್ಲೇ ಇದೆ. ದೇಶದ ಒಟ್ಟು ಗ್ರಾಮೀಣ ಜನಸಂಖ್ಯೆಯ ಶೇ. 16 ಮಂದಿಗೆ ಮಾತ್ರ ಈಗ ಕೊಳವೆ ನೀರು ಪೂರೈಕೆಯಾಗುತ್ತಿದೆ.

ಭಾರತದ ನೈರ್ಮಲ್ಯ ಸಮಸ್ಯೆ ಈಗಾಗಲೇ ದಾಖಲೆಗೊಂಡಿದೆ; ಭಾರತವು ಮೂಲಭೂತ ನೈರ್ಮಲ್ಯ ಸಮಸ್ಯೆಗಳಿಂದ ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಬದುಕುತ್ತಿರುವ ದೇಶವೆಂದು ಇತ್ತೀಚೆಗೆ ಘೋಷಿಸಲಾಯಿತು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಪರಿಸ್ಥಿತಿಗಳೂ ನೈರ್ಮಲ್ಯ ಸಂಬಂಧಿ ಸಂಗತಿಗಳೇ ಆಗಿವೆ ಮತ್ತು ವಿಶೇಷವಾಗಿ ಕೊಳಚೆ ವಿಲೇವಾರಿ ಮತ್ತು ಕುಡಿಯುವ ಶುದ್ಧ ನೀರಿನ ಲಭ್ಯತೆ ತುಂಬಾ ಮುಖ್ಯವಾಗುತ್ತದೆ. ಅನಾರೋಗ್ಯದಿಂದಾಗಿ ಉತ್ಪಾದನೆಯಲ್ಲಾಗುವ ನಷ್ಟಗಳು, ಹೆಚ್ಚಾದ ಆರೋಗ್ಯ ವೆಚ್ಚಗಳು ಹಾಗೂ ಮರಣ ಸಂಖ್ಯೆಯಲ್ಲಿ ಆದ ಹೆಚ್ಚಳ - ಇವೆಲ್ಲವುಗಳ ಪರಿಣಾಮವಾಗಿ 2015ರಲ್ಲಿ ಭಾರತವು ತನ್ನ ಜಿಡಿಪಿಯಲ್ಲಿ ಶೇ. 5.2 ನಷ್ಟ ಅನುಭವಿಸಿತು. ಸಮರ್ಪಕ ನೈರ್ಮಲ್ಯ ವ್ಯವಸ್ಥೆಯ ಕೊರತೆಯ ಪರಿಣಾಮವಾಗಿ ಭಾರತದಲ್ಲಿ ಹತ್ತು ಸಾವುಗಳಲ್ಲಿ ಒಂದು ಸಾವು ಸಂಭವಿಸುತ್ತದೆಂದು ವಿಶ್ವ ಬ್ಯಾಂಕ್ ಹೇಳಿದೆ.

ವಿಶ್ವದ ಕಾಯಿಲೆ ಹೊರೆಗೆ ಶೇ. 10ರಷ್ಟು ಕಾರಣ ಕಳಪೆ ನೈರ್ಮಲ್ಯ ವ್ಯವಸ್ಥೆಯೇ ಆಗಿದೆ. ಇಷ್ಟೇ ಅಲ್ಲ ಅನಿಮಿಯಾದಂತಹ ಎಷ್ಟೋ ಕಾಯಿಲೆಗಳಿಗೆ ಪರೋಕ್ಷವಾಗಿ ಕಳಪೆ ನೈರ್ಮಲ್ಯವೇ ಕಾರಣವಾಗುತ್ತದೆ.

ಸುಧಾರಿತ ನೈರ್ಮಲ್ಯ ವ್ಯವಸ್ಥೆಗೂ ರಕ್ತಹೀನತೆಯಿಂದ ಬಳಲುವವರ ಸಂಖ್ಯೆ ಕಡಿಮೆಯಾಗುವುದಕ್ಕೂ ದೇಶದ ಹದಿನಾಲ್ಕು ರಾಜ್ಯಗಳಲ್ಲಿ ನಿಕಟ ಸಂಬಂಧವಿರುವುದನ್ನು ಅಧ್ಯಯನವೊಂದು ದೃಢಪಡಿಸಿದೆ. ಕಳಪೆ ನೈರ್ಮಲ್ಯದಿಂದಾಗಿ ಬರುವ ಅತಿಸಾರ ಕಾಯಿಲೆಗಳು ಭಾರತದಲ್ಲಿ ಶಿಶು ಮರಣಕ್ಕೆ ಅತ್ಯಂತ ದೊಡ್ಡ ಮೂರನೆಯ ಕಾರಣ. ಮಕ್ಕಳ ಕುಂಠಿತ ಬೆಳವಣಿಗೆಗೂ ಈ ಕಾಯಿಲೆ ಕೂಡ ಕಾರಣ ಎನ್ನಲಾಗಿದೆ. ನೈರ್ಮಲ್ಯ ಸ್ಥಿತಿಯನ್ನು ಉತ್ತಮಪಡಿಸಿದಲ್ಲಿ ಉಪೇಕ್ಷಿತ ಉಷ್ಣವಲಯ ಕಾಯಿಲೆಗಳನ್ನು ದೂರಮಾಡಬಹುದು. ಕೊಕ್ಕೆ ಹುಳದಂತಹ ಹುಳಗಳಿಂದ ಉಂಟಾಗುವ ಇಂತಹ ಕಾಯಿಲೆಗಳು ಪ್ರತೀ ವರ್ಷ ಮಿಲಿಯಗಟ್ಟಲೆ ಮಕ್ಕಳನ್ನು ಬಾಧಿಸುತ್ತವೆ ಮತ್ತು ತೆರೆದ ಬಯಲಲ್ಲಿ ಮಲ ವಿಸರ್ಜನೆ ಮಾಡುವ ಮೂಲಕ ಹರಡುತ್ತವೆ. ಶೌಚಾಲಯಗಳ ಮತ್ತು ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯಿಂದ ಇಂತಹ ಕಾಯಿಲೆಗಳನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.

ದುರದೃಷ್ಟವಶಾತ್ ನಮ್ಮ ದೇಶದಲ್ಲಿ 732 ಮಿಲಿಯ ಜನರಿಗೆ ಇನ್ನೂ ಶೌಚಾಲಯಗಳ ಸವಲತ್ತು ಇಲ್ಲ; ತೆರೆದ ಬಯಲಲ್ಲಿ ಮಲವಿಸರ್ಜಿಸುವ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಪಾಲಿಗಿಂತಲೂ ಹೆಚ್ಚು ಮಂದಿ ಭಾರತೀಯರೇ ಆಗಿದ್ದಾರೆ. ಹಾಗೆಯೇ ಶುದ್ಧ ನೀರಿನಿಂದ ವಂಚಿತರಾದ ಅತ್ಯಂತ ಬೃಹತ್ ಗ್ರಾಮೀಣ ಜನಸಂಖ್ಯೆ ಭಾರತದಲ್ಲೇ ಇದೆ. ದೇಶದ ಒಟ್ಟು ಗ್ರಾಮೀಣ ಜನಸಂಖ್ಯೆಯ ಶೇ. 16 ಮಂದಿಗೆ ಮಾತ್ರ ಈಗ ಕೊಳವೆ ನೀರು ಪೂರೈಕೆಯಾಗುತ್ತಿದೆ.

ಆದರೂ ನಾವು ಹತಾಶರಾಗಬೇಕಾಗಿಲ್ಲ. ಸ್ವಚ್ಛ ಭಾರತ ಅಭಿಯಾನದ ಮೂರು ವರ್ಷಗಳಲ್ಲಿ ದೇಶದ ನೈರ್ಮಲ್ಯ ವ್ಯಾಪ್ತಿ ಶೇ. 39ರಿಂದ 65ಕ್ಕೆ ಏರಿದೆ. ಎಂಟು ರಾಜ್ಯಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಬಯಲು ಶೌಚಮುಕ್ತವೆಂದು ಘೋಷಿಸಲಾಗಿದೆ. ಆದರೆ ಕೇವಲ ಶೌಚಾಲಯಗಳ ನಿರ್ಮಾಣದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಿರ್ಮಾಣಗೊಂಡ ಶೌಚಾಲಯಗಳನ್ನು ಜನರು ಬಳಸುವಂತೆ ಖಾತರಿಪಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ.

ವಿಶ್ವ ಬ್ಯಾಂಕ್‌ನ ಪ್ರಕಾರ, ನೈರ್ಮಲ್ಯರಂಗದಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಬಂಡವಾಳ ಹೂಡಿದಾಗ ಅದು ಸಾರ್ಥಕವಾಗಬೇಕಾದರೆ ಜನರಲ್ಲಿ ನೈರ್ಮಲ್ಯ ಮನೋಭಾವನೆ ಮೂಡುವಂತೆ ಮಾಡುವುದು ಅತ್ಯಗತ್ಯ ಮತ್ತು ಇತರ ವರ್ತನೆಗಳಲ್ಲಿ ಬದಲಾವಣೆ ತರುವುದು ಅನಿವಾರ್ಯ. ವರ್ತನೆ ತರಬೇತಿ ಯಶಸ್ವಿಯಾಗಿರುವ ಸಾರ್ವಜನಿಕ ಆರೋಗ್ಯದ ಒಂದು ಕ್ಷೇತ್ರವೆಂದರೆ ವಾಶ್-Wash: ವಾಟರ್ (ನೀರು), ಸ್ಯಾನಿಟೇಶನ್ (ನೈರ್ಮಲ್ಯ) ಮತ್ತು ಹೈಜೀನ್. ಈ ಮೂರನ್ನು ಜನರು ರೂಢಿಮಾಡಿಕೊಂಡಲ್ಲಿ ಕಾಯಿಲೆ ಮತ್ತು ಸಾವಿನ ಪ್ರಮಾಣ ಕಡಿಮೆಯಾಗುತ್ತದೆ; ಬಡತನ ಕಡಿಮೆಯಾಗಿ ಒಟ್ಟು ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹೆಚ್ಚುತ್ತದೆ. ವಿಶ್ವಸಂಸ್ಥೆ ಈ ಮೂರಕ್ಕೂ ಆಚರಣಾದಿನಗಳನ್ನು ನಿಗದಿಪಡಿಸಿದೆ: ನೀರಿಗೆ ವಿಶ್ವಜಲ ದಿನ (ಮಾರ್ಚ್22), ನೈರ್ಮಲ್ಯಕ್ಕೆ ವಿಶ್ವ ಶೌಚ ದಿನ (ನವೆಂಬರ್19) ಮತ್ತು ಆರೋಗ್ಯಕ್ಕೆ ವಿಶ್ವ ಕೈತೊಳೆಯುವ ದಿನ (ಅಕ್ಟೋಬರ್ 15). ಮೂರು ಸರಳ ಹವ್ಯಾಸಗಳ ಮೂಲಕ ನಾವು ‘ವಾಶ್’ನ ಲಾಭಗಳನ್ನು, ಉಪಯೋಗಗಳನ್ನು ಪಡೆಯಬಹುದಾಗಿದೆ; ಊಟ ಮಾಡುವ, ತಿಂಡಿ ತಿನ್ನುವ ಮೊದಲು ಕೈಗಳನ್ನು ತೊಳೆದುಕೊಳ್ಳುವುದು; ಶುದ್ಧವಾದ ನೀರನ್ನು ಕುಡಿಯುವುದು ಮತ್ತು ಸ್ವಚ್ಛವಾದ ಶೌಚಾಲಯವನ್ನು ಬಳಸುವುದು ಇದಕ್ಕಾಗಿ ನಮ್ಮ ದೇಶದಲ್ಲಿ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್(ಎಚ್‌ಯುಎಲ್) ‘ಸ್ವಚ್ಛ ಆದತ್ ಸ್ವಚ್ಛ ಭಾರತ್’ (ಎಸ್‌ಎಎಸ್‌ಬಿ) ಆಂದೋಲನವನ್ನಾರಂಭಿಸಿದೆ. ಇದೊಂದು ವಾಶ್ ವರ್ತನಾ ಪರಿವರ್ತನೆ ಕಾರ್ಯಕ್ರಮ; ಸ್ವಚ್ಛ ಭಾರತ್ ಅಭಿಯಾನಕ್ಕೆ ಪೂರಕವಾದ ಒಂದು ಪ್ರಯತ್ನ.

 ಎಸ್‌ಎಎಸ್‌ಬಿ ಸ್ವಚ್ಛತಾ ಪಠ್ಯಕ್ರಮವೊಂದನ್ನು ಸೃಷ್ಟಿಸಿದೆ. ಶಾಲಾ ಮಕ್ಕಳಲ್ಲಿ ನೈರ್ಮಲ್ಯಪ್ರಜ್ಞೆ ಮೂಡಿಸುವುದಕ್ಕಾಗಿ ತಯಾರಿಸಲಾದ ಒಂದು ಪಠ್ಯಪುಸ್ತಕ ಇದು. ಇದು ಸ್ವಚ್ಛತೆ ಬ್ಯಾಕ್ಟೀರಿಯಾಗಳು ಮತ್ತು ಸ್ವಚ್ಛ ಅಭ್ಯಾಸಗಳ ಬಗ್ಗೆ ಪ್ರಾಥಮಿಕ ಶಾಲಾ ಮಕ್ಕಳು ತಿಳಿದುಕೊಳ್ಳುವಂತೆ ಮಾಡುವ ಒಂದು ಕಲಿಕಾಪ್ರಯತ್ನ. ನಗರದ ಕೊಳಚೆ ನಿವಾಸಿಗಳು ವಾಶ್ ಅಭ್ಯಾಸಗಳ, ಹವ್ಯಾಸಗಳ ಕುರಿತು ಜಾಗೃತರಾಗುವಂತೆ ಮಾಡಲು ‘ಸ್ವಚ್ಛ ಬಸ್ತಿ’ ಎಂಬ ಒಂದು ಕಾರ್ಯಕ್ರಮವನ್ನೂ ಕೈಗೊಳ್ಳಲಾಗಿದೆ. ಸ್ಥಳೀಯ ವೈದ್ಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಬೆಂಬಲ ತಂಡಗಳನ್ನು ಬಳಸಿಕೊಂಡು ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮುಂಬೈಯ ಫಾಟ್‌ಕೊಪರ್‌ನಲ್ಲಿ ಎಚ್‌ಯುಎಲ್ ‘ಸುವಿಧಾ ಸೆಂಟರ್’ ಎಂಬ ಒಂದು ನೀರು ನೈರ್ಮಲ್ಯ ಹಾಗೂ ಆರೋಗ್ಯ ಕೇಂದ್ರವನ್ನು ತೆರೆದು, ಆ ಪ್ರದೇಶದ ಸುಮಾರು 1,500 ನಿವಾಸಿಗಳಿಗೆ ಶೌಚಾಲಯಗಳು, ಕೈತೊಳೆಯಲು ಹಾಗೂ ಸ್ನಾನ ಮಾಡಲು ಬೇಕಾದ ಸೌಕರ್ಯಗಳು, ಶುದ್ಧ ಕುಡಿಯುವ ನೀರು ಹಾಗೂ ಸ್ಟೇಟ್-ಆಫ್-ದಿ-ಆರ್ಟ್ಸ್ (ಅತ್ಯಾಧುನಿಕ) ಲಾಂಡ್ರಿ ಸೌಕರ್ಯಗಳನ್ನು ಒದಗಿಸಿದೆ.

ಎಚ್‌ಯುಎಲ್ ಕಾರ್ಖಾನೆಯ ನೌಕರರು ಕೂಡ ಸ್ವಚ್ಛದೂತರಾಗಿ ಕಾರ್ಯವೆಸಗುತ್ತಾರೆ. ಇವರು ತಮ್ಮ ತಮ್ಮ ಹಳ್ಳಿಗಳಲ್ಲಿ ವಾಶ್‌ನ ಮೂರು ಹವ್ಯಾಸಗಳನ್ನು ಸ್ಥಳೀಯರಿಗೆ ಕಲಿಸುತ್ತಾರೆ. ಸದಾ ಬಿಜಿಯಾಗಿದ್ದರೂ ಒಂದು ಬದಲಾವಣೆ ತರಲು ಬಯಸುವ ಸ್ವಯಂ ಸೇವಕರಿಗೆ ಸಮಾಜ ಸೇವೆ ಮಾಡಲು ಈ ವರ್ತನಾ ಬದಲಾವಣೆ ಮಾದರಿಯು ಒಂದು ಅವಕಾಶ ಒದಗಿಸುತ್ತದೆ. ಹವ್ಯಾಸ ರೂಪುಗೊಳ್ಳಲು ನಿರಂತರ ಮಧ್ಯಪ್ರವೇಶ ಅಗತ್ಯವಾಗಿರುವುದರಿಂದ ಸ್ವಯಂ ಸೇವಕರು ತಮ್ಮ ವಿಶೇಷವಾದ ‘ಟೂಲ್ ಕಿಟ್’ ನೊಂದಿಗೆ ತಮ್ಮ ಪರಿಸರಕ್ಕೆ ತೆರಳಿ ಜನರಲ್ಲಿ ನೈರ್ಮಲ್ಯ ಪ್ರಜ್ಞೆಯನ್ನು ಪ್ರಸಾರ ಮಾಡುತ್ತಾರೆ.

ಕೃಪೆ:  scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News