ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ವಿವಾದಿತ ಮಸೂದೆಯನ್ನು ವಾಪಸ್ ಪಡೆದ ರಾಜಸ್ಥಾನ ಸರಕಾರ

Update: 2018-02-20 07:20 GMT

ಜೈಪುರ್, ಫೆ.20: ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೂ ನ್ಯಾಯಾಧೀಶರು ಮತ್ತು ಸರಕಾರಿ ಉದ್ಯೋಗಿಗಳನ್ನು ರಕ್ಷಿಸುವ ಉದ್ದೇಶ ಹೊಂದಿತ್ತೆಂದು ಹೇಳಲಾದ ವಿವಾದಿತ ಮಸೂದೆಯೊಂದನ್ನು ರಾಜಸ್ಥಾನ ಸರಕಾರ ಸೋಮವಾರ ವಾಪಸ್ ಪಡೆದಿದೆ. ವಿಪಕ್ಷಗಳು, ಮಾಧ್ಯಮ ಮತ್ತು ವಕೀಲರಿಂದ ತೀವ್ರ ವಿರೋಧ ಎದುರಿಸಿದ್ದ ಈ ಮಸೂದೆಯನ್ನು ಸದನದ ಆಯ್ಕೆ ಸಮಿತಿಗೆ ಹಸ್ತಾಂತರಿಸಲಾಗಿತ್ತು.

ಸೋಮವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ "ನಾವು ಪ್ರಸ್ತಾವಿತ ಮಸೂದೆಯನ್ನು ಆಯ್ಕೆ ಸಮಿತಿಗೆ ಸಲ್ಲಿಸಿದ್ದು, ಅಧ್ಯಾಧೇಶದ ಅವಧಿ ಇದೀಗ ಮೀರಿ ಹೋಗಿದೆ ಹಾಗೂ ಅದು ಕಾನೂನಾಗಿಲ್ಲ. ಅದನ್ನು ವಾಪಸ್ ಪಡೆಯುತ್ತಿದ್ದೇವೆ'' ಎಂದು ಹೇಳಿದರು.

ಕ್ರಿಮಿನಲ್ ಕಾನೂನುಗಳು (ರಾಜಸ್ಥಾನ ತಿದ್ದುಪಡಿ) ಅಧ್ಯಾಧೇಶ 2017 ಇದಕ್ಕೆ ಪರ್ಯಾಯವಾಗಿ ಈ ಮಸೂದೆಯನ್ನು ಅಕ್ಟೋಬರ್ 23ರಂದು ಮಂಡಿಸಲಾಗಿತ್ತು. ಇದರನ್ವಯ ಯಾವುದೇ ಮಾಜಿ ಅಥವಾ ಹಾಲಿ ಸರಕಾರಿ ಅಧಿಕಾರಿ ಅಥವಾ ನ್ಯಾಯಾಧೀಶರ ವಿರುದ್ಧ ಯಾವುದೇ ಆರೋಪಗಳಿದ್ದರೂ ಸಂಬಂಧಿತ ಪ್ರಾಧಿಕಾರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿಸದ ಹೊರತು ಈ ಬಗ್ಗೆ ಮಾಧ್ಯಮಗಳು ವರದಿ ಮಾಡುವಂತಿಲ್ಲ.

ಆದರೆ ಇದರ ವಿರುದ್ಧ ಎದುರಾದ ತೀವ್ರ ವಿರೋಧಕ್ಕೆ ಮಣಿದು ಸರಕಾರ ಮಸೂದೆಯನ್ನು ಆಯ್ಕೆ ಸಮಿತಿಗೆ  ಕಳುಹಿಸಿದ್ದು, ಅದು ಮಂಡನೆಯಾಗಿ ಆರು ವಾರಗಳ ಅವಧಿಯಲ್ಲಿ ಡಿಸೆಂಬರ್ 4ರಂದು ಅದರ ಕಾಲಾವಧಿ ಅಂತ್ಯಗೊಂಡಿತ್ತು. ಸಮಿತಿಗೆ ತನ್ನ ವರದಿ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಫೆಬ್ರವರಿ 5ರಂದು ಸರಕಾರ ಮತ್ತೆ ವಿಸ್ತರಿಸಿತ್ತು.

"ಮಸೂದೆಯನ್ನು ಹಿಂಪಡೆಯಲಾಗಿದ್ದು ಸಂತಸದ ವಿಚಾರವಾದರೂ ಸರಕಾರಕ್ಕೆ ಇಂತಹ ಒಂದು ಮಸೂದೆಯೊಂದರ ಅಗತ್ಯವಾದರೂ ಏನಿತ್ತು ಎಂಬುದನ್ನು ಸರಕಾರ ವಿವರಿಸಬೇಕು'' ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News