ನವಜಾತ ಶಿಶುಮರಣ ಪ್ರಮಾಣ: ಭಾರತಕ್ಕೆ 12ನೇ ಸ್ಥಾನ

Update: 2018-02-20 17:27 GMT

ಹೊಸದಿಲ್ಲಿ, ಫೆ.20: ಭಾರತದಲ್ಲಿ 2016ರಲ್ಲಿ ಹುಟ್ಟಿದ ತಿಂಗಳೊಳಗೆ ಮೃತಪಟ್ಟ ಶಿಶುಗಳ ಸಂಖ್ಯೆ 6 ಲಕ್ಷಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಅತ್ಯಧಿಕ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಪರಿಗಣಿಸಿದರೆ , ಕಡಿಮೆ- ಮಧ್ಯಮ ಆದಾಯವಿರುವ 52 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ. 2016ರಲ್ಲಿ ಭಾರತದಲ್ಲಿ ಹುಟ್ಟಿದ 1,000 ನವಜಾತ ಶಿಶುಗಳಲ್ಲಿ ಸಾವಿನ ಪ್ರಮಾಣ 25.4 ಆಗಿತ್ತು. ಶ್ರೀಲಂಕಾದಲ್ಲಿ ಈ ಪ್ರಮಾಣ 127, ಬಾಂಗ್ಲಾದಲ್ಲಿ 54, ನೇಪಾಳದಲ್ಲಿ 50, ಭೂತಾನ್‌ನಲ್ಲಿ 60, ಪಾಕಿಸ್ತಾನದಲ್ಲಿ 45.6 ಆಗಿದೆ ಎಂದು ಫೆ.19ರಂದು ಬಿಡುಗಡೆಯಾಗಿರುವ ‘ಯುನಿಸೆಫ್’ ವರದಿಯಲ್ಲಿ ತಿಳಿಸಲಾಗಿದೆ. ಜಪಾನ್, ಐಸ್‌ಲ್ಯಾಂಡ್ ಮತ್ತು ಸಿಂಗಾಪುರದಲ್ಲಿ ಹುಟ್ಟುವ ಮಕ್ಕಳು ಜೀವಂತವಾಗಿ ಉಳಿಯುವ ಸಂಭವನೀಯತೆ ಅಧಿಕವಾಗಿದೆ. ಪಾಕಿಸ್ತಾನ, ಮಧ್ಯ ಆಫ್ರಿಕನ್ ಗಣರಾಜ್ಯಗಳು ಹಾಗೂ ಅಫಘಾನಿಸ್ತಾನದಲ್ಲಿ ನವಜಾತ ಶಿಶುಗಳು ಮರಣವನ್ನಪ್ಪುವ ಸಂಭವನೀಯತೆ ಅಧಿಕ ಎಂದು ವರದಿ ತಿಳಿಸಿದೆ. ಕಳೆದ ಸುಮಾರು 25 ವರ್ಷಗಳ ಪ್ರಯತ್ನದಿಂದ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಅರ್ಧಕ್ಕಿಳಿಸಲು ನಾವು ಯಶಸ್ವಿಯಾಗಿದ್ದೇವೆ. ಆದರೆ ಒಂದು ತಿಂಗಳೊಳಗಿನ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆಗೊಳಿಸುವ ನಮ್ಮ ಕಾರ್ಯ ನಿರೀಕ್ಷಿತ ಯಶಸ್ಸು ಕಂಡಿಲ್ಲ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಟ ಎಚ್.ಎಫ್. ತಿಳಿಸಿದ್ದಾರೆ. ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ 1000:27 (1000 ಮಕ್ಕಳಲ್ಲಿ 27 ಮಕ್ಕಳ ಸಾವು) ಆಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಈ ಪ್ರಮಾಣ 1000 ಮಕ್ಕಳಲ್ಲಿ 3 ಆಗಿದೆ.

ಭಾರತದಲ್ಲಿ ಐದರ ಕೆಳಹರೆಯದ ಮಕ್ಕಳ ಮರಣ ಪ್ರಮಾಣ 1990ರಿಂದ 2015ರ ಅವಧಿಯಲ್ಲಿ ಶೇ.66ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News