ಒದೆ ತಿನ್ನುವುದಕ್ಕಾಗಿ ಮತ ಹಾಕಬೇಕೇ?

Update: 2018-02-21 04:20 GMT

ಜನಸಾಮಾನ್ಯರ ಮುಂದೆ ಕೈ ಮುಗಿದು ರಾಜಕಾರಣಿಗಳು ಶಾಸಕರೋ, ಸಚಿವರೋ ಆಗುತ್ತಾರೆ. ಹೀಗೆ ಜನನಾಯಕರಾದ ಬಳಿಕ ಇವರ ಮಕ್ಕಳು ತಂದೆಯ ಹಣ ಮತ್ತು ರಾಜಕೀಯ ಬಲದಿಂದ ಉಂಡಾಡಿಗಳಾಗಿ ಶೋಕಿ ಮಾಡುತ್ತಾ ಮತ ನೀಡಿದ ಜನಸಾಮಾನ್ಯರ ಮೇಲೆಯೇ ಕಾರು ಓಡಿಸುತ್ತಾರೆ. ಒಂದು ರೀತಿಯಲ್ಲಿ ಮತ ನೀಡಿ ತಾವಾಗಿಯೇ ಒದೆಗಳನ್ನು ಕೇಳಿ ಪಡೆದ ಸ್ಥಿತಿ ಜನಸಾಮಾನ್ಯರದ್ದು. ಒಂದೆಡೆ ರಾಜಕಾರಣಿಗಳು ನಾಡನ್ನು ದೋಚುತ್ತಿದ್ದರೆ, ಅದನ್ನು ಮಜಾಮಸ್ತಿಗಾಗಿ ಬಳಸುವ ಅವರ ಪುತ್ರರು, ಜನಸಾಮಾನ್ಯರ ಪಾಲಿಗೆ ಗೂಂಡಾ, ರೌಡಿಗಳಾಗಿ ಪರಿವರ್ತನೆಯಾಗುತ್ತಾರೆ. ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಪ್ರಕರಣ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ವಿದ್ವತ್ ಎನ್ನುವ ಯುವಕನ ಮೇಲೆ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ತಂಡ ಬರ್ಬರವಾಗಿ ದಾಳಿ ನಡೆಸಿದೆ. ಎಲ್ಲ ಸಾಕ್ಷಗಳಿದ್ದರೂ ಈತನನ್ನು ಬಂಧಿಸಲು ಪೊಲೀಸರು ಹಿಂದೆ ಮುಂದೆ ನೋಡುವಂತಹ ಸನ್ನಿವೇಶ ನಿರ್ಮಾಣವಾಯಿತು. ಪ್ರಕರಣವನ್ನು ತಿರುಚುವ ಪ್ರಯತ್ನವೂ ನಡೆಯಿತು. ಆದರೆ ಮಾಧ್ಯಮಗಳು ಸಂತ್ರಸ್ತನ ಪರ ಬಲವಾಗಿ ನಿಂತುಕೊಂಡ ಕಾರಣದಿಂದ, ಕೊನೆಗೂ ಆರೋಪಿಯ ಬಂಧನವಾಯಿತು. ಆದರೆ ಬಂಧನವಾದಾಕ್ಷಣ ಆರೋಪಿಗೆ ಶಿಕ್ಷೆಯಾಯಿತು ಎಂದೇನಿಲ್ಲ.

ತಮ್ಮ ಹಣ ಬಲದಿಂದ ಸಾಕ್ಷಗಳನ್ನು ಕೊಂಡುಕೊಳ್ಳುವ ಶಕ್ತಿ ಅವರಲ್ಲಿದೆ. ಹಾಗೆಯೇ ಆರೋಪಿಯ ತಂದೆ ಶಾಸಕನಾಗಿರುವುದರಿಂದ ರಾಜಕೀಯ ಶಕ್ತಿಗಳು ಕಾನೂನಿನ ಕೈ ಕಟ್ಟಿ ಹಾಕುವುದರಲ್ಲಿ ಅನುಮಾನವಿಲ್ಲ. ಕೆಲ ದಿನಗಳ ಬಳಿಕ ಬಿಡುಗಡೆಯಾಗಿ ತನ್ನ ಹಳೇ ಚಾಳಿಯನ್ನು ಇವರು ಮುಂದುವರಿಸತೊಡಗುತ್ತಾರೆ. ಇಲ್ಲಿ ಶಾಸಕ ಹಾರಿಸ್ ಪುತ್ರನ ದಾಂಧಲೆ ಒಂದು ಉದಾಹರಣೆ ಮಾತ್ರ. ದೇಶಾದ್ಯಂತ ಇಂತಹ ಪ್ರಕರಣಗಳು ಆಗಾಗ ವರದಿಯಾಗುತ್ತಾ ಬಂದಿವೆ. ಕೆಲ ಸಮಯದ ಹಿಂದೆ ಹರ್ಯಾಣದ ಬಿಜೆಪಿಯ ರಾಜ್ಯಾಧ್ಯಕ್ಷನ ಪುತ್ರನೊಬ್ಬ ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು. ಮಹಿಳೆಯು ಶ್ರೀಮಂತ ಹಿನ್ನೆಲೆಯಿಂದ ಬಂದ ತರುಣಿಯಾಗದೇ ಇದ್ದಿದ್ದರೆ ಈ ಬಗ್ಗೆ ಪೊಲೀಸರು ದೂರನ್ನ್ನೂ ದಾಖಲಿಸಿಕೊಳ್ಳುತ್ತಿರಲಿಲ್ಲ. ಕೊನೆಗೂ ‘ಬೇಕೋ ಬೇಡವೋ’ ಎಂಬಂತೆ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ದೂರು ದಾಖಲಿಸಿದರು. ಆದರೆ ಈ ಪ್ರಕರಣದಲ್ಲಿ ಆತ ಸುಲಭವಾಗಿ ಜಾರಿಕೊಂಡ. ನಾಳೆ ಶಾಸಕ ಹಾರಿಸ್ ಪುತ್ರನೂ ಇದೇ ರೀತಿಯಲ್ಲಿ ಕಾನೂನಿನಿಂದ ನುಣುಚಿಕೊಳ್ಳಲಿದ್ದಾನೆ. ಇದೇ ರೀತಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವ್ಯಕ್ತಿಯೊಬ್ಬನೂ ಇಂತಹದೇ ದಾಂಧಲೆಯ ಮೂಲಕ ರಾಜ್ಯದಲ್ಲಿ ಸುದ್ದಿಯಾಗಿದ್ದನು. ಇಂದು ಆತ ಜೆಡಿಎಸ್ ಪಕ್ಷದ ಪ್ರಮುಖ ನಾಯಕನಾಗಿ ಹೊರಹೊಮ್ಮುವ ಪ್ರಯತ್ನದಲ್ಲಿದ್ದಾನೆ. ಈ ಎಲ್ಲ ಪ್ರಕರಣಗಳಲ್ಲಿ ಹಲ್ಲೆ ನಡೆಸಿದವರು ಬೀದಿ ಗೂಂಡಾಗಳಲ್ಲ. ತನ್ನ ತಂದೆ ರಾಜಕಾರಣಿ ಮತ್ತು ಶ್ರೀಮಂತ ಎನ್ನುವ ಅಮಲಿನಲ್ಲಿ ಅವರು ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳಿಗೆ ನಿಜವಾದ ಅರ್ಥದಲ್ಲಿ ಶಿಕ್ಷೆಯಾಗಬೇಕಾದರೆ ಮೊದಲು ರಾಜಕಾರಣಿಗೆ ಶಿಕ್ಷೆಯಾಗಬೇಕು. ಅಂದರೆ ಶಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಇದರರ್ಥವಲ್ಲ. ಕನಿಷ್ಠ ಕಾಂಗ್ರೆಸ್ ಪಕ್ಷ ಆತನನ್ನು ಉಚ್ಚಾಟಿಸಬೇಕು. ಅಥವಾ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು.

ಇದು ಏಕಕಾಲದಲ್ಲಿ ತಂದೆಯ ಮೇಲೂ, ಪುತ್ರನ ಮೇಲೂ ಪರಿಣಾಮ ಬೀರಲಿದೆ. ಪುತ್ರನಿಗೆ ಜೈಲಾಗುತ್ತದೆಯೋ ಇಲ್ಲವೋ, ಆದರೆ ರಾಜಕಾರಣಿಯನ್ನು ಪಕ್ಷದಿಂದ ಹೊರಹಾಕಿದರೂ ಅದು ಪುತ್ರನಿಗೂ ಪರೋಕ್ಷ ಶಿಕ್ಷೆಯಾದಂತೆಯೇ ಸರಿ. ಇದು ಇತರ ರಾಜಕಾರಣಿಗಳಿಗೂ ಒಂದು ಎಚ್ಚರಿಕೆಯಾಗುತ್ತದೆ. ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಡಲು ಶ್ರಮಿಸುತ್ತಾರೆ. ಹಾಗೆಯೇ ಮಕ್ಕಳೂ ತನ್ನ ತಂದೆಯ ಪ್ರಭಾವವನ್ನು ಬಳಸಲು ಹೆದರು ಸನ್ನಿವೇಶ ನಿರ್ಮಾಣವಾಗುತ್ತದೆ. ತನ್ನ ಮಗನನ್ನೇ ಸುಧಾರಿಸಲಾಗದ ಶಾಸಕ, ತನ್ನ ಕ್ಷೇತ್ರವನ್ನು ಹೇಗೆ ಸುಧಾರಿಸಿಯಾನು? ಆದುದರಿಂದ ಮನೆಯಲ್ಲಿ ಸುಧಾರಣೆ ತಂದು ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುತ ಎಂದು ಪಕ್ಷದ ನಾಯಕರು ಆತನಿಗೆ ಸೂಚನೆ ನೀಡಬೇಕು. ಹರ್ಯಾಣದ ಪ್ರಕರಣದಲ್ಲೂ ಬಿಜೆಪಿಯು ರಾಜ್ಯಾಧ್ಯಕ್ಷನ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ‘ಮಹಿಳೆ, ಸಂಸ್ಕೃತಿ’ ಎಂದು ಮಾತನಾಡುವ ಬಿಜೆಪಿಯ ಮುಖಂಡನ ಪುತ್ರನೇ ಸಂಸ್ಕೃತಿ ಹೀನನಾಗಿ ವರ್ತಿಸಿರುವಾಗ ಈತನ ತಂದೆ ಸಮಾಜಕ್ಕೆ ಸಂಸ್ಕೃತಿಯನ್ನು ಬೋಧಿಸುವುದರಲ್ಲಿ ಅರ್ಥ ಏನಿದೆ? ಮಗನೇ ರೌಡಿಯಂತೆ ವರ್ತಿಸಿದ ಮೇಲೆ ಉಳಿದ ರೌಡಿಗಳ ಮೇಲೆ ಈ ಶಾಸಕ ಹೇಗೆ ನಿಯಂತ್ರಣವನ್ನು ಹೊಂದಿಯಾನು? ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳು ತಮ್ಮೆಳಗಿರುವ ಇಂತಹ ನಾಯಕರನ್ನು ಗುರುತಿಸಿ ಅವರನ್ನು ಹೊರ ಹಾಕುವ ಪ್ರಯತ್ನ ಮಾಡಬೇಕಾಗಿದೆ.

 ಇತ್ತ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಇಡೀ ಪ್ರಕರಣವನ್ನು ತಿರುಚಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಈ ಹಲ್ಲೆ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವ್ಯಾಖ್ಯಾನಿಸಲು ಹೊರಟದ್ದು ಮಾತ್ರವಲ್ಲ, ಹಲ್ಲೆಗೀಡಾದಾತ ಬಿಜೆಪಿ ಕಾರ್ಯಕರ್ತ ಎಂದು ಹೇಳಿದರು. ಇದು ರಾಜ್ಯ ಬಿಜೆಪಿಯ ನಾಯಕರನ್ನು ತೀವ್ರ ಮುಜುಗರಕ್ಕೊಳಪಡಿಸಿತು. ಬಹುಶಃ ಬಿಜೆಪಿ ಕಾರ್ಯಕರ್ತನಾಗಿದ್ದರೆ ಮಾತ್ರವೇ ಇದು ಖಂಡನೆಗೆ ಅರ್ಹ, ಇಲ್ಲವಾದರೆ ಇಲ್ಲ ಎಂದು ಅವರ ಅಭಿಪ್ರಾಯವೇ? ಹಾರಿಸ್ ಪುತ್ರನಿಂದ ಹಲ್ಲೆಗೀಡಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ, ‘‘ಆತ ಬಿಜೆಪಿ ಕಾರ್ಯಕರ್ತ ಅಲ್ಲ’’ ಎಂದೂ ಅಮಿತ್ ಶಾ ಹೇಳಿಕೆ ನೀಡಿದರು. ಬಹುಶಃ ಬಿಜೆಪಿಯ ನಾಯಕಿ ಶೋಭಾ ಕರಂದ್ಲಾಜೆ ಇವರನ್ನು ಹಾದಿ ತಪ್ಪಿಸಿರಬಹುದೇ? ಕಂಡ ಕಂಡ ಹೆಣಗಳನ್ನೆಲ್ಲ ಆರೆಸ್ಸೆಸ್ ಕಾರ್ಯಕರ್ತರೆಂದು ಕರೆಯುವ ಶೋಭಾಗಿಂತಲೂ ಕೆಳ ಮಟ್ಟದ ರಾಜಕಾರಣ ಮಾಡಲು ಹೋಗಿ ಅಮಿತ್ ಶಾ ತನ್ನ ರಾಜಕೀಯ ದಿವಾಳಿತನವನ್ನು ರಾಜ್ಯದ ಮುಂದೆ ಬಹಿರಂಗ ಪಡಿಸಿದರು. ಈ ಪ್ರಕರಣದಲ್ಲಿ ಶಾಸಕ ಹಾರಿಸ್ ಕ್ಷಮೆ ಯಾಚಿಸಿದರು. ಬರೇ 48 ಗಂಟೆಗಳಲ್ಲಿ ಆತನ ಬಂಧನವಾಗಿದೆ. ಆದರೆ ಹರ್ಯಾಣದ ಬಿಜೆಪಿ ಮುಖಂಡ ತನ್ನ ಮಗ ನಡೆಸಿದ ಕೃತ್ಯಕ್ಕೆ ಯಾವ ಕ್ಷಮೆಯನ್ನೂ ಯಾಚಿಸಲಿಲ್ಲ. ಬದಲಿಗೆ ತನ್ನ ಮಗನನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ. ಈತನ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಿದ್ದರೆ ಅಮಿತ್ ಶಾಗೆ, ಶಾಸಕ ಹಾರಿಸ್ ಪುತ್ರನ ಬಗ್ಗೆ ಹೇಳಿಕೆ ನೀಡುವ ನೈತಿಕ ಶಕ್ತಿಯಾದರೂ ಇರುತ್ತಿತ್ತು. ಒಟ್ಟಿನಲ್ಲಿ, ಕೋಮು ದ್ವೇಷದ ರಾಜಕಾರಣ ಬಿಟ್ಟರೆ ತನಗೆ ಬೇರೇನೂ ಗೊತ್ತಿಲ್ಲ ಎನ್ನುವುದನ್ನು ಅಮಿತ್ ಶಾ ರಾಜ್ಯದಲ್ಲಿ ಸಾಬೀತು ಪಡಿಸಿದರು. ಅಡಿಗೆ ಬಿದ್ದರೂ ಮೂಗು ಮೇಲೆ ಎಂದು ತನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಸಮರ್ಥಿಸಿಕೊಂಡರು. ‘‘ಹಲ್ಲೆಗೀಡಾದ ವಿದ್ವತ್‌ನನ್ನು ಬಿಜೆಪಿ ಕಾರ್ಯಕರ್ತ ಎಂದ ಕಾರಣದಿಂದ ಪ್ರಕರಣ ಮಹತ್ವವನ್ನು ಪಡೆಯಿತು. ಅದರಿಂದ ಸಂತ್ರಸ್ತನಿಗೆ ನ್ಯಾಯ ಸಿಕ್ಕಿತು’’ ಎಂದೆಲ್ಲ ಹೇಳಿಕೊಂಡರು.

ಇದೇ ಸಂದರ್ಭದಲ್ಲಿ ಸುರತ್ಕಲ್‌ನಲ್ಲಿ ಇತ್ತೀಚೆಗೆ ಹಲ್ಲೆ ಗೀಡಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿದರು. ಆದರೆ ಹತ್ಯೆಗೀಡಾದ ಸುರತ್ಕಲ್‌ನ ಬಶೀರ್ ಮನೆಯ ಕಡೆಗೆ ತಿರುಗಿಯೂ ನೋಡಲಿಲ್ಲ. ಇದರ ಕುರಿತಂತೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ‘‘ನಾನು ಬಿಜೆಪಿ ಮುಖಂಡ. ಆದುದರಿಂದ ನಾನು ಬಿಜೆಪಿ ಕಾರ್ಯಕರ್ತನ ಮನೆಗಷ್ಟೇ ಭೇಟಿ ನೀಡಿದ್ದೇನೆ’’ ಎಂದು ಹೇಳಿದರು. ಯಾರದೋ ತಪ್ಪಿಗಾಗಿ ಮೃತಪಟ್ಟ ಜೀವಗಳನ್ನು ಬಿಜೆಪಿ-ಕಾಂಗ್ರೆಸ್, ಹಿಂದೂ-ಮುಸ್ಲಿಮ್ ಎಂದು ವಿಂಗಡಿಸಿ ಬಹಿರಂಗವಾಗಿ ಮಾತನಾಡುವ ಅಮಿತ್ ಶಾ ಯಾವ ರೀತಿಯಲ್ಲೂ ಜನರ ನಾಯಕನಾಗಲು ಸಾಧ್ಯವಿಲ್ಲ. ಈ ದೇಶವನ್ನು ಆಳುವ ಸರಕಾರವೊಂದರ ಪ್ರತಿನಿಧಿ ತಾನು ಎನ್ನುವ ಅರಿವೂ ಅವರಲ್ಲಿಲ್ಲ. ತನ್ನ ಹೇಳಿಕೆಯ ಮೂಲಕ ‘‘ನನಗೆ ಮುಸ್ಲಿಮರ ಮತಗಳು ಬೇಡ’’ ಎಂದೂ ಘೋಷಿಸಿದಂತಾಗಿದೆ. ಬಂಟ್ವಾಳ, ಸುರತ್ಕಲ್‌ನಲ್ಲಿ ಅಮಿತ್ ಶಾ ನೀಡಿರುವ ವಿರೋಧಾಭಾಸಗಳ ಹೇಳಿಕೆ, ರಾಜ್ಯದಲ್ಲಿ ಬಿಜೆಪಿ ಎಂತಹ ಹತಾಶೆಯ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಹಾರಿಸ್‌ನಂತಹ ನಾಯಕರನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಳ್ಳದೆ ಹೊರಗಿಟ್ಟರೆ ಮಾತ್ರ ಅದು ಇನ್ನೊಂದು ಬಿಜೆಪಿಯಾಗುವ ಅಪಾಯದಿಂದ ಪಾರಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News