ಸರಣಿ ಗೆಲುವಿನತ್ತ ಕೊಹ್ಲಿ ಪಡೆಯ ಕಣ್ಣು

Update: 2018-02-20 19:07 GMT

ಸೆಂಚೂರಿಯನ್, ಫೆ.20: ದಕ್ಷಿಣ ಆಫ್ರಿಕ ತಂಡದ ವಿರುದ್ಧ ಏಕದಿನ ಸರಣಿಯನ್ನು ಜಯಿಸಿರುವ ಟೀಮ್ ಇಂಡಿಯಾ ಟ್ವೆಂಟಿ-20 ಸರಣಿಯನ್ನು ಜಯಿಸುವ ಕಡೆಗೆ ಚಿತ್ತವಿರಿಸಿದ್ದು, ಎರಡನೇ ಟ್ವೆಂಟಿ-20 ಪಂದ್ಯ ಬುಧವಾರ ನಡೆಯಲಿದೆ.

ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 28 ರನ್‌ಗಳ ಜಯ ಗಳಿಸಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಜಯಿಸಿದರೆ ಭಾರತಕ್ಕೆ ಸರಣಿ ಗೆಲುವು ದೃಢಪಡಿಸಲು ಸಾಧ್ಯ.

ಮೊದಲ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಸೋಲು ಅನುಭವಿಸಿದ್ದ ಭಾರತ ಆರು ಪಂದ್ಯಗಳ ಏಕದಿನ ಸರಣಿಯನ್ನು 5-1 ಅಂತರದಲ್ಲಿ ವಶಪಡಿಸಿಕೊಂಡಿತು. ಭಾರತ ಟ್ವೆಂಟಿ-20 ಸರಣಿಯನ್ನು ಜಯಿಸಿದರೆ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆಯಲಿದೆ. ಪಾಕಿಸ್ತಾನ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಒಂದು ವೇಳೆ ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್‌ನಲ್ಲಿ ನ್ಯೂಝಿಲೆಂಡ್‌ನ್ನು ಆಸ್ಟ್ರೇಲಿಯ ಮಣಿಸಿದರೆ ಭಾರತ ನಂ.3 ಸ್ಥಾನದಲ್ಲಿ ಮುಂದುವರಿಯಲಿದೆ.

ಉತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಸೊಂಟ ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಎರಡನೇ ಪಂದ್ಯದಲ್ಲಿ ಆಡುವುದನ್ನು ನಿರೀಕ್ಷಿಸಲಾಗಿದೆ.

ಒಂದು ವೇಳೆ ಕೊಹ್ಲಿ ಅವರ ಗಾಯದ ಸಮಸ್ಯೆ ಗಂಭೀರವಾದರೆ ಅವರು ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

  ಕೊಹ್ಲಿ ತಂಡದಿಂದ ಹೊರಗುಳಿದರೆ ಲೋಕೇಶ್ ರಾಹುಲ್ ಅವರು ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯಲಿದ್ದಾರೆ. ಮನೀಷ್ ಪಾಂಡೆಗೆ ಅವಕಾಶ ತೆರವುಗೊಳಿಸಿರುವ ರಾಹುಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಭಾರತ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾದರೆ ಕುಲ್‌ದೀಪ್ ಯಾದವ್ ಅಂತಿಮ ಹನ್ನೊಂದರಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ದಕ್ಷಿಣ ಆಫ್ರಿಕ ವಿರುದ್ಧದ ಸದ್ಯದ ಪ್ರವಾಸ ಸರಣಿಯಲ್ಲಿ ಒಂದು ಪಂದ್ಯದಲ್ಲೂ ಆಡಿಲ್ಲ. ದಕ್ಷಿಣ ಆಫ್ರಿಕ ಎಂಟು ದಿನಗಳ ಹಿಂದೆ ಪೋರ್ಟ್ ಎಲಿಝಬೆತ್‌ನಲ್ಲಿ ಏಕದಿನ ಸರಣಿಯಲ್ಲಿ ಮಾಡು ಇಲ್ಲವೇ ಮಡಿ ಸವಾಲನ್ನು ಎದುರಿಸಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಸವಾಲು ದಕ್ಷಿಣ ಆಫ್ರಿಕ ತಂಡಕ್ಕೆ ಎದುರಾಗಿದೆ. ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್‌ ಮೊಣಕಾಲಿಗೆ ಆಗಿರುವ ಗಾಯದ ಕಾರಣದಿಂದಾಗಿ ಟ್ವೆಂಟಿ-20 ಸರಣಿಯಲ್ಲಿ ಆಡಲು ಲಭ್ಯರಿಲ್ಲ. ಆದರೆ ಅವರ ಜಾಗಕ್ಕೆ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬ ವಿಚಾರವನ್ನು ದಕ್ಷಿಣ ಆಫ್ರಿಕ ಕ್ರಿಕೆಟ್ ಸಂಸ್ಥೆ ಇನ್ನೂ ಪ್ರಕಟಿಸಿಲ್ಲ. ಹಂಗಾಮಿ ನಾಯಕ ಜೆ.ಪಿ.ಡುಮಿನಿ ಅವರು ಪರಿಸ್ಥಿತಿಗೆ ಹೊಂದಿಕೊಂಡು ಎರಡನೇ ಟ್ವೆಂಟಿ-20 ಪಂದ್ಯಕ್ಕೆ ತೀರ್ಮಾನ ಕೈಗೊಳ್ಳಲಿದ್ದಾರೆ.

►ಭಾರತ : ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಸುರೇಶ್ ರೈನಾ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಜಯ್‌ದೇವ್ ಉನಾದ್ಕಟ್, ಶಾರ್ದುಲ್ ಠಾಕೂರ್.

►ದಕ್ಷಿಣ ಆಫ್ರಿಕ: ಜೆ.ಪಿ. ಡುಮಿನಿ (ನಾಯಕ), ಫರ್ಹಾನ್ ಬೆಹಾರ್ದಿನ್, ಜೂನಿಯರ್ ಡಾಲಾ, ರೀಝಾ ಹೆಂಡ್ರಿಕ್ಸ್, ಕ್ರಿಸ್ಟಿಯನ್ ಜೊನೆಕರ್, ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಡಾನೆ ಪ್ಯಾಟೆರ್ಸನ್, ಆ್ಯರೊನ್ ಫ್ಯಾಂಗಿಸೊ, ಆ್ಯಂಡ್ಲೆ ಫೆಹ್ಲುಕ್ವಾಯೊ, ತಬ್ರೈಝ್ ಶಂಸಿ, ಜಾನ್-ಜಾನ್ ಸ್ಟಟ್ಸ್.

ಪಂದ್ಯದ ಸಮಯ: ರಾತ್ರಿ 9:30 ಗಂಟೆಗೆ

ಗಮನ ಸೆಳೆದಿರುವ ಸೆಂಚೂರಿಯನ್ ಟ್ವೆಂಟಿ-20 ಪಂದ್ಯ

ದಕ್ಷಿಣ ಆಫ್ರಿಕ ವಿರುದ್ಧ ಭಾರತ ಗೆಲುವಿನ ಅಭಿಯಾನ ಮುಂದುವರಿಸಿದ್ದು, ಟ್ವೆಂಟಿ-20 ಸರಣಿ ಗೆಲುವಿನ ಪ್ರಯತ್ನ ನಡೆಸಲಿದೆ. ಬುಧವಾರ ಸೆಂಚೂರಿಯನ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಯ ಎರಡನೇ ಪಂದ್ಯ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಸೆಂಚೂರಿಯನ್ ಕ್ರೀಡಾಂಗಣದ ದಾಖಲೆಗಳ ವಿವರ ಇಂತಿವೆ.

►241/6: ಸೆಂಚೂರಿಯನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕ ತಂಡ 2009ರಲ್ಲಿ ಟ್ವೆಂಟಿ-20 ಪಂದ್ಯದಲ್ಲಿ 6 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿತ್ತು. ಇದು ಸೆಂಚೂರಿಯನ್‌ನಲ್ಲಿ ದಾಖಲಾದ ತಂಡವೊಂದರ ಗರಿಷ್ಠ ಸ್ಕೋರ್.

►94: ದಕ್ಷಿಣ ಆಫ್ರಿಕದ ಲೊಟ್ಸ್ ಬೊಸ್‌ಮನ್ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ 94 ರನ್ ಗಳಿಸಿದ್ದರು. ಇದು ಬ್ಯಾಟ್ಸ್‌ಮನ್ ಒಬ್ಬರು ದಾಖಲಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

►5/6 : ಪಾಕಿಸ್ತಾನದ ಉಮರ್ ಗುಲ್ ಅವರು 2008ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 5ಕ್ಕೆ 6 ವಿಕೆಟ್ ಉಡಾಯಿಸಿರುವುದು ಬೌಲರ್‌ನ ಗರಿಷ್ಠ ಸಾಧನೆ .

►129:   ದಕ್ಷಿಣ ಆಫ್ರಿಕ ವಿರುದ್ಧ 2009ರಲ್ಲಿ ಆಸ್ಟ್ರೇಲಿಯ 129 ರನ್‌ಗಳ ಸವಾಲನ್ನು ಬೆನ್ನಟ್ಟಿ ಗೆಲುವು ದಾಖಲಿಸಿತ್ತು. ಇದು ತಂಡವೊಂದು ಗರಿಷ್ಠ ರನ್‌ಗಳ ಸವಾಲನ್ನು ಬೆನ್ನಟ್ಟಿ ದಾಖಲಿಸಿದ ಗೆಲುವು ಆಗಿದೆ.

►18: ವಿರಾಟ್ ಕೊಹ್ಲಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿಲು ಇನ್ನು 18 ರನ್ ಗಳಿಸಬೇಕಾಗಿದೆ.

►1:  ಸೆಂಚೂರಿಯನ್‌ನಲ್ಲಿ 6 ಪಂದ್ಯಗಳಲ್ಲಿ ಗೆಲುವಿನ ಸವಾಲನ್ನು ಬೆನ್ನಟ್ಟುವ ಅವಕಾಶ ವಿವಿಧ ತಂಡಗಳು ಪಡೆದಿದ್ದರೂ, ಆಸ್ಟ್ರೇಲಿಯ ಮಾತ್ರ 2009ರಲ್ಲಿ 129ರನ್‌ಗಳ ಸವಾಲನ್ನು ಬೆನ್ನಟ್ಟಿ ಗೆಲುವು ದಾಖಲಿಸಿತ್ತು.

►50%: ದಕ್ಷಿಣ ಆಫ್ರಿಕ ಸೆಂಚೂರಿಯನ್‌ನಲ್ಲಿ 6 ಪಂದ್ಯಗಳಲ್ಲಿ ಆಡಿತ್ತು. ಈ ಪೈಕಿ ಮೂರು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಮೂರು ಪಂದ್ಯಗಳನ್ನು ಕಳೆದುಕೊಂಡಿದೆ.

►10: ಜಸ್‌ಪ್ರೀತ್ ಬುಮ್ರಾ ಅವರಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ದಾಖಲೆಗೆ ಇನ್ನು 10 ವಿಕೆಟ್‌ಗಳನ್ನು ಪಡೆಯಬೇಕಾಗಿದೆ.

►2: ಮಹೇಂದ್ರ ಸಿಂಗ್ ಧೋನಿ ಅವರಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50 ಕ್ಯಾಚ್ ಪೂರ್ಣಗೊಳಿಸಲು ಇನ್ನೂ 2 ಕ್ಯಾಚ್ ಪಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News