ಡಾನ್ ಬ್ರಾಡ್ಮನ್ ದಾಖಲೆ ಮುರಿಯುವ ಹಾದಿಯಲ್ಲಿ ಕೊಹ್ಲಿ

Update: 2018-02-20 19:09 GMT

ಜೋಹಾನ್ಸ್‌ಬರ್ಗ್, ಫೆ.20: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹಲವು ಲೆಜೆಂಡ್ ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ ಅವರು ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಆಸ್ಟ್ರೇಲಿಯದ ಬ್ಯಾಟಿಂಗ್ ದಂತಕತೆ ಸರ್ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ.

29ರ ಹರೆಯದ ಕೊಹ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ 13 ಇನಿಂಗ್ಸ್‌ಗಳಲ್ಲಿ 870 ರನ್ ದಾಖಲಿಸಿದ್ದಾರೆ. ಫೆ.21 ಮತ್ತು 24ರಂದು ನಡೆಯಲಿರುವ ದಕ್ಷಿಣ ಆಫ್ರಿಕ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ 104 ರನ್ ಗಳಿಸಿದರೆ ಡಾನ್ ಬ್ರಾಡ್ಮನ್ ಅವರ ದಾಖಲೆಯೊಂದನ್ನು ಹಿಂದಿಕ್ಕಿದ ಸಾಧನೆ ಕೊಹ್ಲಿ ಹೆಸರಿಗೆ ಸೇರ್ಪಡೆಗೊಳ್ಳಲಿದೆ.

ಡಾನ್ ಬ್ರಾಡ್ಮನ್ ಅವರು 1930ರಲ್ಲಿ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳಲ್ಲಿ 974 ರನ್ ದಾಖಲಿಸಿದ್ದರು. ಕೊಹ್ಲಿ ಒಂದು ವೇಳೆ 176 ರನ್ ದಾಖಲಿಸಿದರೆ ಇನ್ನೊಂದು ದಾಖಲೆ ಬರೆಯಲಿದ್ದಾರೆ. ವೆಸ್ಟ್‌ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್‌ಅವರು 1976ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ 1045 ರನ್(4 ಟೆಸ್ಟ್‌ಗಳಲ್ಲಿ 829ರನ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ 216 ರನ್) ದಾಖಲಿಸಿದ್ದರು. ಕೊಹ್ಲಿ ಕಳೆದ ಎರಡು ತಿಂಗಳಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಗರಿಷ್ಠ ರನ್ ಜಮೆ ಮಾಡಿದ್ದರು. ಭಾರತ ಮೂರು ಟೆಸ್ಟ್‌ಗಳ ಸರಣಿಯಲ್ಲಿ 1-2 ಅಂತರದಲ್ಲಿ ಸೋಲು ಅನುಭವಿಸಿದರೂ ಕೊಹ್ಲಿ ಅವರು 47.66 ಸರಾಸರಿಯಂತೆ 286 ರನ್ ದಾಖಲಿಸಿದ್ದರು 6 ಏಕದಿನ ಪಂದ್ಯಗಳಲ್ಲಿ 558 ರನ್ ಜಮೆ ಮಾಡಿದ್ದರು. ಇದು ದ್ವಿಪಕ್ಷೀಯ ಸರಣಿಯಲ್ಲಿ ಬ್ಯಾಟ್ಸ್ ಮನ್ ಒಬ್ಬರು ದಾಖಲಿಸಿರುವ ಗರಿಷ್ಠ ರನ್ ಆಗಿದೆ.

ಕೊಹ್ಲಿ ಮೂರು ಟ್ವೆಂಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 20 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 28 ರನ್‌ಗಳ ಜಯ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News