ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಸಿಂಧು, ಶ್ರೀಕಾಂತ್ ನಾಯಕತ್ವ

Update: 2018-02-20 19:11 GMT

ಹೊಸದಿಲ್ಲಿ, ಫೆ.20: ಮುಂಬರುವ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ವಿಶ್ವದ ನಂ.3ನೇ ಆಟಗಾರ ಕಿಡಂಬಿ ಶ್ರೀಕಾಂತ್ ಭಾರತ ತಂಡದ ನಾಯಕತ್ವವನ್ನು ವಹಿಸಿ ಕೊಳ್ಳಲಿದ್ದಾರೆ.

ಮಿಶ್ರ ಟೀಮ್ ಸ್ಪರ್ಧೆ ಎ.5 ರಿಂದ ಆರಂಭವಾಗಲಿದೆ. ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಭಾರತ ತಂಡವನ್ನು ಮುನ್ನಡೆಸಲಿದ್ದು, ವಿಶ್ವದ ನಂ.11ನೇ ಆಟಗಾರ ಎಚ್.ಎಸ್.ಪ್ರಣಯ್ ಅವರು ಶ್ರೀಕಾಂತ್‌ಗೆ ಸಾಥ್ ನೀಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಹಾಗೂ ಸೈನಾ ನೆಹ್ವಾಲ್ ತಂಡದ ಸವಾಲು ಮುನ್ನಡೆಸಲಿದ್ದಾರೆ.

ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿ ಡಬಲ್ಸ್ ಪಂದ್ಯ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಪೂರವ್ ಚೋಪ್ರಾ, ಸಿಕ್ಕಿ ರೆಡ್ಡಿಯೊಂದಿಗೆ ಆಡಲಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಿಕ್ಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಶ್ರೇಷ್ಠ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಅಶ್ವಿನಿ 2010ರಲ್ಲಿ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು.

ಭಾರತ ‘ಎ’ ಗುಂಪಿನಲ್ಲಿ ನೆರೆಯ ಪಾಕಿಸ್ತಾನ, ಶ್ರೀಲಂಕಾ ಹಾಗೂ ಯುರೋಪ್‌ನ ಸ್ಕಾಟ್ಲೆಂಡ್ ತಂಡದೊಂದಿಗೆ ಸ್ಥಾನ ಪಡೆದಿದೆ.

ಎ.9 ರಂದು ಮಿಶ್ರ ಟೀಮ್ ವಿಜೇತರ ನಿರ್ಧಾರವಾಗಲಿದ್ದು, ಆ ನಂತರ ಎಲ್ಲ ಆಟಗಾರರು ಎ.10 ರಂದು ಸಿಂಗಲ್ಸ್ ಪಂದ್ಯ ಆಡಲಿದ್ದಾರೆ.

►ಭಾರತ ತಂಡ

►ಪುರುಷರು: ಕಿಡಂಬಿ ಶ್ರೀಕಾಂತ್, ಎಚ್.ಎಸ್.ಪ್ರಣಯ್,ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್, ಪ್ರಣವ್ ಜೆ.ಚೋಪ್ರಾ.

►ಮಹಿಳೆಯರು :  ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ, ಸಿಕ್ಕಿ ರೆಡ್ಡಿ, ಋತ್ವಿಕ್ ಶಿವಾನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News