×
Ad

ರಾಜಸ್ಥಾನದ 15 ಶಾಸಕರಿಗೆ ಎಚ್1ಎನ್1 ಆತಂಕ

Update: 2018-02-21 21:22 IST

ಜೈಪುರ, ಫೆ.21: ಬಿಜೆಪಿ ಶಾಸಕ ಅಮೃತ ಮೆಘಾವಲ್ ಎಚ್1ಎನ್1 ಅಥವಾ ಹಂದಿ ಜ್ವರ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದನದ ಇತರ 15 ಶಾಸಕರು ಬಳಸುವ ಬಟ್ಟೆ ಹಾಗೂ ಇತರ ವಸ್ತುಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಈಗಾಗಲೇ ಶಾಸಕರ ವಿವಿಧ ವಸ್ತುಗಳ ಮಾದರಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಜಾಲೋರ್‌ನ ಶಾಸಕರಾದ ಮೆಘಾವಲ್ ಎಚ್1ಎನ್1 ಸೋಂಕಿಗೆ ತುತ್ತಾಗಿರುವುದು ಮಂಗಳವಾರ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಹಂದಿ ಜ್ವರದಿಂದ ಬಳಲುತ್ತಿರುವವರ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಲು ಎಲ್ಲ ಜಿಲ್ಲಾ ಮುಖ್ಯ ವೈದ್ಯ ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚಿಸುವಂತೆ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಆರೋಗ್ಯ ಸಚಿವ ಕಾಲಿಚರಣ್ ಸರಫ್ ಆದೇಶ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರ ಆರೋಗ್ಯ ತಪಾಸಣೆಗೆ ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ಸಂಗ್ರಹಿಸಲಾದ ಮಾದರಿಗಳನ್ನು ಹಂದಿ ಜ್ವರ ಇದೆಯೇ ಎಂದು ದೃಢಪಡಿಸುವ ಸಲುವಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ, ಮಂಡಲ್‌ಗಡದ ಶಾಸಕರಾದ ಕೀರ್ತಿ ಕುಮಾರಿ ಹಂದಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.

ಕೇಂದ್ರದ ಸಂಯೋಜಿತ ರೋಗ ಕಣ್ಗಾವಲು ಯೋಜನೆಯು ಫೆಬ್ರವರಿ 11ರಂದು ಬಿಡುಗಡೆ ಮಾಡಿದ ವರದಿಯಲ್ಲಿ ರಾಜಸ್ಥಾನದಲ್ಲಿ ದೇಶದಲ್ಲೇ ಅತ್ಯಧಿಕ 871 ಹಂದಿ ಜ್ವರ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ 578 ಪ್ರಕರಣಗಳು ಜೈಪುರನಲ್ಲಿ ದಾಖಲಾಗಿವೆ. ಪ್ರಸಕ್ತ ವರ್ಷ ಇಲ್ಲಿಯವರೆಗೆ ದೇಶಾದ್ಯಂತ 1,022 ಹಂದಿ ಜ್ವರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿ ತಿಳಿಸಿದೆ.

 ಜಮ್ಮು ಮತ್ತು ಕಾಶ್ಮೀರದಲ್ಲಿ 27, ಗುಜರಾತ್‌ನಲ್ಲಿ 16, ಮಧ್ಯಪ್ರದೇಶದಲ್ಲಿ 7 (ಎರಡು ಸಾವು), ಹರ್ಯಾಣದಲ್ಲಿ 13 (ಎರಡು ಸಾವು), ದಿಲ್ಲಿಯಲ್ಲಿ 19 (ಒಂದು ಸಾವು) ಮತ್ತು ಉತ್ತರ ಪ್ರದೇಶದಲ್ಲಿ 10 (ಒಂದು ಸಾವು) ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News